ಆಲಿಬಾಬ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿದ ಜಾಕ್ ಮಾ

Update: 2019-09-10 14:41 GMT

 ಬೀಜಿಂಗ್, ಸೆ. 10: ಚೀನಾದ ಬೃಹತ್ ಆನ್‌ಲೈನ್ ಚಿಲ್ಲರೆ ಮಾರಾಟ ಕಂಪೆನಿ ಆಲಿಬಾಬದ ಅಧ್ಯಕ್ಷ ಹುದ್ದೆಯಿಂದ ಜಾಕ್ ಮಾ ಮಂಗಳವಾರ ಕೆಳಗಿಳಿದಿದ್ದಾರೆ. ಇದರೊಂದಿಗೆ ಕಂಪೆನಿಯ ಒಂದು ಯುಗ ಕೊನೆಗೊಂಡಿದೆ.

ಅವರು 1999ರಲ್ಲಿ ಇತರ ಹಲವರೊಂದಿಗೆ ಸೇರಿ ಕಂಪೆನಿಯನ್ನು ಆರಂಭಿಸಿದರು. ಈಗ ಅದು ಜಗತ್ತಿನ ಅತಿ ದೊಡ್ಡ ಆನ್‌ಲೈನ್ ಮಾರಾಟ ಕಂಪೆನಿಗಳಲ್ಲಿ ಒಂದಾಗಿದೆ.

ಆಲಿಬಾಬದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇನಿಯಲ್ ಝಾಂಗ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಜಾಕ್ ಮಾ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ.

‘ಫೋರ್ಬ್ಸ್’ ಪತ್ರಿಕೆಯ ಪ್ರಕಾರ, ಆಲಿಬಾಬ ಕಂಪೆನಿಯು ಈಗಿನ ವೌಲ್ಯ 480 ಬಿಲಿಯ ಡಾಲರ್ (ಸುಮಾರು 34.50 ಲಕ್ಷ ಕೋಟಿ ರೂಪಾಯಿ) ಹಾಗೂ ಜಾಕ್ ಮಾ ಅವರ ವೈಯಕ್ತಿಕ ಸಂಪತ್ತು 38.6 ಬಿಲಿಯ ಡಾಲರ್ (ಸುಮಾರು 2.77 ಲಕ್ಷ ಕೋಟಿ ರೂಪಾಯಿ).

ಅವರು ಚೀನಾದ ಅತ್ಯಂತ ಸಿರಿವಂತ ವ್ಯಕ್ತಿಯಾಗಿದ್ದಾರೆ ಹಾಗೂ ಏಶ್ಯದ ಎರಡನೆ ಅತಿ ಸಿರಿವಂತರಾಗಿದ್ದಾರೆ. ಏಶ್ಯದಲ್ಲಿ ಸಿರಿವಂತಿಕೆಯಲ್ಲಿ ಮೊದಲ ಸ್ಥಾನದಲ್ಲಿರುವವರು ಭಾರತದ ಮುಕೇಶ್ ಅಂಬಾನಿ.

► ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಮಾ

ಪೂರ್ವ ಚೀನಾದ ನಗರ ಹಾಂಗ್‌ಝೂನಲ್ಲಿ ಬಡ ಕುಟುಂಬವೊಂದರಲ್ಲಿ ಹುಟ್ಟಿದ ಜಾಕ್ ಮಾ, ಶಿಕ್ಷಕರಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದರು.

ಅವರು ತನ್ನ ಮೊದಲ ಕಂಪ್ಯೂಟರನ್ನು ಖರೀದಿಸಿದ್ದು ತನ್ನ 33ರ ಹರೆಯದಲ್ಲಿ. ‘ಬಿಯರ್’ಗಾಗಿನ ತನ್ನ ಮೊದಲ ಆನ್‌ಲೈನ್ ಸರ್ಚ್‌ನಲ್ಲಿ ಚೀನಿ ಬಿಯರ್‌ಗಳು ಕಾಣಿಸಿಕೊಳ್ಳದಿದ್ದಾಗ ಅವರು ಆಶ್ಚರ್ಯಗೊಂಡರು.

 ಕಂಪ್ಯೂಟರ್‌ನಲ್ಲಿ ಯಾವುದೇ ಜ್ಞಾನವಿಲ್ಲದ ಅವರು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ‘ಆಲಿಬಾಬ’ವನ್ನು ಸ್ಥಾಪಿಸಿದರು. ತನ್ನ ಆನ್‌ಲೈನ್ ಮಾರುಕಟ್ಟೆ ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಗೆಳೆಯರ ಗುಂಪೊಂದಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News