ಬೆಂಗಳೂರು: ಸಂಸ್ಥೆಗೆ 38 ಕೋಟಿ ರೂ. ವಂಚಿಸಿದ ಅಧಿಕಾರಿಯ ಬಂಧನ

Update: 2019-09-10 16:00 GMT

ಬೆಂಗಳೂರು, ಸೆ.10: ಜಾಗತಿಕ ಹೂಡಿಕೆ ಸಂಸ್ಥೆ ಗೋಲ್ಡ್ಮ್ಯಾನ್ ಸ್ಯಾಚಸ್ ಸಂಸ್ಥೆಯ 38 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿದ ಆರೋಪದಲ್ಲಿ ಸಂಸ್ಥೆಯ ಬೆಂಗಳೂರು ಕಚೇರಿಯ ಹಿರಿಯ ಅಧಿಕಾರಿಯೊಬ್ಬನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಅಶ್ವನಿ ಝುಂಜುನ್ವಾಲಾನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ ಎಂಎನ್ ಅನುಚೇತ್ ಹೇಳಿದ್ದಾರೆ. ಅಶ್ವನಿ ಆನ್ಲೈನ್ ಆಟವೊಂದರಲ್ಲಿ ಭಾರೀ ಹಣ ಕಳೆದುಕೊಂಡಿದ್ದು ಇದನ್ನು ಭರಿಸಲು ಈ ಕೃತ್ಯ ಎಸಗಿರುವುದಾಗಿ ಸಂಸ್ಥೆ ದೂರು ನೀಡಿದೆ. ಅಶ್ವನಿ ಝುಂಜುನ್ವಾಲಾ 25 ಲಕ್ಷ ವೈಯಕ್ತಿಕ ಸಾಲದ ಜೊತೆಗೆ ಇತರರಿಂದ ಕೈಸಾಲವನ್ನೂ ಪಡೆದಿದ್ದ. ಸಾಲ ಪಾವತಿಸಲಾಗದೆ ಈ ಕೃತ್ಯ ಎಸಗಿದ್ದಾನೆ. ಸೆಪ್ಟೆಂಬರ್ 6ರಂದು ನಡೆದ ಆಂತರಿಕ ಲೆಕ್ಕಪತ್ರ ಪರಿಶೋಧನೆಯ ಸಂದರ್ಭ ಈ ಅಕ್ರಮ ಬೆಳಕಿಗೆ ಬಂದಿದೆ. ಸಂಸ್ಥೆಯ ಕಿರಿಯ ಸಿಬಂದಿಗಳಾದ ಗೌರವ್ ಮಿಶ್ರಾ, ಅಭಿಷೇಕ್ ಯಾದವ್ ಮತ್ತು ಸುಜಿತ್ ಅಪ್ಪಯ್ಯ ಅವರ ಕಂಪ್ಯೂಟರ್ ಬಳಸಿ ಈ ಕೃತ್ಯ ಎಸಗಿದ್ದಾನೆ. ಈ ಮೂವರನ್ನು ಟೀ ಕುಡಿಯಲೆಂದು ಹೊರ ಕಳುಹಿಸಿ , ಅವರ ಗಮನಕ್ಕೆ ಬಾರದಂತೆ ಅವರ ಕಂಪ್ಯೂಟರ್ ಬಳಸಿ ಎರಡು ಕಂತುಗಳಲ್ಲಿ ಒಟ್ಟು 38 ಕೋಟಿ ರೂ.ಗಳನ್ನು ಚೀನಾದ ಇಂಡಸ್ಟ್ರಿಯಲ್ ಆ್ಯಂಡ್ ಕಮರ್ಷಿಯಲ್ ಬ್ಯಾಂಕ್ಗೆ ಅಕ್ರಮವಾಗಿ ವರ್ಗಾಯಿಸಿದ್ದಾನೆ. ಬಳಿಕ ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇತ್ತೀಚೆಗೆ ಸಂಸ್ಥೆಯಿಂದ ವಜಾಗೊಂಡಿರುವ ವೇದಾಂತ್ ಎಂಬಾತ ಈ ಅಕ್ರಮ ಕೃತ್ಯಕ್ಕೆ ಜುಂಝುನ್ವಾಲಾಗೆ ನೆರವಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News