ದಂಡಗಳನ್ನು ಕ್ರಮೇಣ ಹೆಚ್ಚಿಸುವಂತೆ ಕೇಂದ್ರಕ್ಕೆ ರಸ್ತೆ ಸುರಕ್ಷತಾ ತಜ್ಞರ ಆಗ್ರಹ

Update: 2019-09-10 16:56 GMT

ಹೊಸದಿಲ್ಲಿ,ಸೆ.10: ಮೋಟರ್ ವಾಹನಗಳ ಕಾಯ್ದೆಯಲ್ಲಿ ಬದಲಾವಣೆಗಳನ್ನು ತಂದಿರುವುದಕ್ಕಾಗಿ ಕೇಂದ್ರವನ್ನು ಪ್ರಶಂಸಿಸಿರುವ ರಸ್ತೆ ಸುರಕ್ಷತಾ ತಜ್ಞರು,ಆದರೆ ಒಂದೇ ಬಾರಿ ಭಾರೀ ದಂಡವನ್ನು ವಿಧಿಸುವ ಬದಲು ಅದನ್ನು ಕ್ರಮೇಣ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.

 ಸಂಚಾರ ನಿಯಮಗಳ ಉಲ್ಲಂಘನೆಗಾಗಿ ದಂಡದ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿರುವ ಮೋಟರ್ ವಾಹನಗಳ ಕಾಯ್ದೆಯಲ್ಲಿನ ಇತ್ತೀಚಿನ ತಿದ್ದುಪಡಿಗಳಲ್ಲಿ ಯಾವುದೇ ದೋಷಗಳಿಲ್ಲ ಮತ್ತು ಅವುಗಳು ಪ್ರಶಂಸೆಗೆ ಅರ್ಹವಾಗಿವೆ. ಆದರೆ ದಂಡದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಬೇಕು. ದಂಡದ ಪ್ರಮಾಣ ಏರಿಕೆ 100 ರೂ.ನಿಂದ 1,000 ರೂ.ಗೆ ಆಗಿದ್ದರೆ,ಒಂದೇ ಬಾರಿಗೆ ಅನುಷ್ಠಾನಿಸುವ ಬದಲು ಮೊದಲ ವರ್ಷದಲ್ಲಿ 250 ರೂ.ಗೆ,ಎರಡನೇ ವರ್ಷದಲ್ಲಿ 500 ರೂ.ಗೆ ಮತ್ತು ಮೂರನೇ ವರ್ಷದಲ್ಲಿ 1,000 ರೂ.ಗೆ ಹೆಚ್ಚಿಸಬೇಕು ಎಂದು ಹೇಳಿರುವ ಅಂತರರಾಷ್ಟ್ರೀಯ ರಸ್ತೆ ಒಕ್ಕೂಟದ ಅಧ್ಯಕ್ಷ ಕೆ.ಕೆ.ಕಪಿಲ ಅವರು,ಭವಿಷ್ಯದಲ್ಲಿ ರಸ್ತೆ ಸುರಕ್ಷತೆಗೆ ಬಳಸುವಂತಾಗಲು ಸಂಗ್ರಹಿಸಲಾದ ದಂಡದ ಹಣದಿಂದ ನಿಧಿಯೊಂದನ್ನು ಸರಕಾರವು ಸ್ಥಾಪಿಸಬೇಕು ಎಂದಿದ್ದಾರೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಲ್ಲಿ ಅರಿವು ಮೂಡಿಸಲು ಮತ್ತು ದಂಡದ ಹಣವನ್ನು ಕ್ರಮೇಣ ಹೆಚ್ಚಿಸಲು ಸಂಚಾರ ಪೊಲೀಸರು ರಸ್ತೆ ಸುರಕ್ಷತೆ ಸಂದೇಶಗಳೊಂದಿಗೆ ಹಸಿರು,ಕೆಂಪು ಮತ್ತು ಕಿತ್ತಳೆ ವರ್ಣಗಳಲ್ಲಿ ಸೆಲ್ಫ್-ಇಂಕಿಂಗ್ ರಬ್ಬರ್ ಸ್ಟಾಂಪ್‌ಗಳನ್ನು ಹೊಂದಿರಬೇಕು ಮತ್ತು ಚಲನ್ ಪ್ರತಿಯಲ್ಲಿ ಎಚ್ಚರಿಕೆಗಳನ್ನು ಮುದ್ರಿಸಿರಬೇಕು ಎಂದು ವಕೀಲ ಹಾಗೂ ರಸ್ತೆ ಸುರಕ್ಷತಾ ಕಾರ್ಯಕರ್ತ ಅರುಣ ಮೋಹನ್ ಹೇಳಿದ್ದಾರೆ.

ಪರಿಷ್ಕೃತ ಮೋಟರ್ ವಾಹನಗಳ ಕಾಯ್ದೆ ಜಾರಿಗೆ ಬಂದ ಸೆ.1ರಂದು ವಿವಿಧ ಉಲ್ಲಂಘನೆಗಳಿಗಾಗಿ 39,000 ಚಾಲಕರಿಗೆ ದಂಡಗಳನ್ನು ವಿಧಿಸಲಾಗಿತ್ತು. ಕಳೆದೊಂದು ವಾರದಲ್ಲಿ ಗುರುಗ್ರಾಮದಲ್ಲಿ ದ್ವಿಚಕ್ರ ವಾಹನ ಸವಾರನಿಗೆ 23,000 ರೂ.,ಭುವನೇಶ್ವರದಲ್ಲಿ ಆಟೊರಿಕ್ಷಾ ಚಾಲಕನಿಗೆ 47,500 ರೂ. ಮತ್ತು ಸಂಬಲ್ಪುರದಲ್ಲಿ ಲಾರಿ ಚಾಲಕನಿಗೆ 86,500 ರೂ.ಗಳ ಭಾರೀ ದಂಡಗಳನ್ನು ವಿಧಿಸಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News