ಜಿನ್ಸನ್ ಜಾನ್ಸನ್ಗೆ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಗುರಿ

Update: 2019-09-10 17:34 GMT

ಹೊಸದಿಲ್ಲಿ, ಸೆ.10: ಭಾರತದ ಖ್ಯಾತ ಮಧ್ಯಮ ಅಂತರದ ಓಟಗಾರ ಜಿನ್ಸನ್ ಜಾನ್ಸನ್ ಬರ್ಲಿನ್‌ನಲ್ಲಿ ಇತ್ತೀಚೆಗೆ ನಡೆದ ಐಎಸ್‌ಟಿಎಫ್ ಕೂಟದಲ್ಲಿ 3 ನಿಮಿಷ, 35.24 ಸೆಕೆಂಡ್‌ಗಳಲ್ಲಿ 1,500 ಮೀಟರ್ ದೂರವನ್ನು ಕ್ರಮಿಸಿ ಬೆಳ್ಳಿ ಜಯಿಸಿದ್ದರು. ಈ ಪ್ರದರ್ಶನದ ನೆರವಿನಲ್ಲಿ ಜಾನ್ಸನ್ ಸೆಪ್ಟಂಬರ್ 27ರಿಂದ ಅಕ್ಟೋಬರ್ 6ರ ತನಕ ದೋಹಾದಲ್ಲಿ ನಡೆಯಲಿರುವ ವರ್ಲ್ಡ್‌ಚಾಂಪಿಯನ್‌ಶಿಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

 28ರ ಹರೆಯದ ಜಾನ್ಸನ್ ಅಪೂರ್ವ ಪ್ರದರ್ಶನದ ನೆರವಿನಲ್ಲಿ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿದ್ದಾರೆ. ನೆದರ್‌ರ್ಲೆಂಡ್‌ನ ನಿಜ್ಮೆಗೆನ್‌ನಲ್ಲಿ ಕಳೆದ ಜೂನ್‌ನಲ್ಲಿ ನಡೆದ 1,500 ಓಟದಲ್ಲಿ 3 ನಿಮಿಷ, 37.62 ಸೆಕೆಂಡ್‌ನಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಜಾನ್ಸನ್‌ರ ಕೊನೆಯ ಗುರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವುದಾಗಿದೆ. ಜಿನ್ಸನ್ 2016ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ 800 ಮೀಟರ್ ಓಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ, ಅರ್ಹತಾ ಸುತ್ತಿನಲ್ಲಿ 1 ನಿಮಿಷ, 47.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಆದರೆ ಸೆಮಿಫೈನಲ್‌ಗೇರುವಲ್ಲಿ ವಿಫಲರಾಗಿದ್ದರು. ‘‘ಬರ್ಲಿನ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ವಿಶ್ವಾಸ ಇತ್ತು. ಆದರೆ ಬೆಳ್ಳಿ ಗೆಲ್ಲುವ ವಿಶ್ವಾಸ ನನಗಿರಲಿಲ್ಲ. ಪದಕ ಜಯಿಸಿರುವುದರಿಂದ ತುಂಬಾ ಸಂತಸವಾಗಿದೆ. ವರ್ಲ್ಡ್‌ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿರುವೆ. ಆದರೆ ನನ್ನ ಅಂತಿಮ ಗುರಿ 2020ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವುದಾಗಿದೆ. ಅದು ನನ್ನ ಕನಸು ’’ ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದ ಜಿನ್ಸನ್ ಇದೀಗ ಅಮೆರಿಕದ ಕೊಲೊರಾಡೊದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘‘3.35 ನಿಮಿಷಗಳಲ್ಲಿ ಗುರಿ ತಲುಪಿದರೆ ಒಲಿಂಪಿಕ್ಸ್ ದೊರೆಯದು ಎಂಬ ಅರಿವು ನನಗಿದೆ. ಆದರೆ ಇದಕ್ಕಾಗಿ ಕಠಿಣ ತರಬೇತಿ ಪಡೆಯುತ್ತಿದ್ದೇನೆ ’’ ಎಂದು ಜಿನ್ಸನ್ ತಿಳಿಸಿದ್ದಾರೆ. ಬರ್ಲಿನ್‌ನಲ್ಲಿ ಐಎಸ್‌ಟಿಎಫ್ ಕೂಟದಲ್ಲಿ ಅಮೆರಿಕದ ಜೋಶುವಾ ಥಾಂಪ್ಸನ್ ಚಿನ್ನ ಜಯಿಸಿದ್ದರು. ಜಿನ್ಸನ್ ಜಾನ್ಸನ್ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದ್ದರು.

ಒಲಿಂಪಿಕ್‌ಗಿಂತ ಮೊದಲು ಜಿನ್ಸನ್ ದೋಹಾದಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲುವ ಯೋಜನೆಯಲ್ಲಿದ್ದಾರೆ. ಈಗ ಅವರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ 1,500 ಮೀಟರ್ ಸ್ಪರ್ಧೆಯ ಕಡೆಗೆ ಮಾತ್ರ ಗಮನ ಹರಿಸಿದ್ದಾರೆ. ಜಿನ್ಸನ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಈ ವರೆಗೆ ಪದಕ ಜಯಿಸಿಲ್ಲ. 1,500 ಮೀಟರ್ ಓಟದಲ್ಲಿ ಪದಕ ಜಯಿಸುವ ಗುರಿಯೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.

ಇಂಡಿಯನ್ ಆರ್ಮಿಯಲ್ಲಿ ನೈಬ್ ಸುಬೇದಾರ್ ಆಗಿರುವ ಜಿನ್ಸನ್ 2018ರಲ್ಲಿ ಜಕಾರ್ತದಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ 1,500 ಮೀ ಓಟದಲ್ಲಿ ಚಿನ್ನ ಮತ್ತು 800 ಮೀಟರ್ ಓಟದಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News