ಉತ್ತಮ ಸ್ಥಿತಿಯಲ್ಲಿ ಭಾರತ ‘ಎ’

Update: 2019-09-10 17:40 GMT

ತಿರುವನಂತಪುರ, ಸೆ.10: ನಾಯಕ ಶುಭ್‌ಮನ್ ಗಿಲ್ ಆಕರ್ಷಕ 90 ರನ್ ಮತ್ತು ಜಲಜ್ ಸಕ್ಸೇನಾ ಅರ್ಧಶತಕ(ಔಟಾಗದೆ 61) ನೆರವಿನಲ್ಲಿ ಭಾರತ ‘ಎ’ ತಂಡ ಮೊದಲ ಅನಧಿಕೃತ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕ ಎ ತಂಡದ ವಿರುದ್ಧ ಉತ್ತಮ ಮೊತ್ತ ದಾಖಲಿಸಿದೆ.

 ಎರಡನೇ ದಿನದಾಟದಂತ್ಯಕ್ಕೆ ದಕ್ಷಿಣ ಆಫ್ರಿಕ ‘ಎ’ ಎರಡನೇ ಇನಿಂಗ್ಸ್‌ನಲ್ಲಿ 35 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸಿದೆ.

35 ರನ್ ಗಳಿಸಿರುವ ವಿಕೆಟ್ ಕೀಪರ್ ಹೆನ್ರಿಕ್ಸ್ ಕ್ಲಾಸಿನ್ ಮತ್ತು 12 ರನ್ ಗಳಿಸಿರುವ ವಿಯಾನ್ ಮುಲ್ಡರ್ ಕ್ರೀಸ್‌ನಲ್ಲಿದ್ದಾರೆ.

    ಒಂದು ಹಂತದಲ್ಲಿ 52ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕ ‘ಎ’ ತಂಡಕ್ಕೆ ಝುಬೈರ್ ಹಂಝಾ ಮತ್ತು ಹೆನ್ರಿಕ್ ಆಧರಿಸಿದರು. ಹಂಝಾ 44 ರನ್ ಗಳಿಸಿದ್ದರು. ಮೊದಲ ದಿನದ ಆಟ ನಿಂತಾಗ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 129 ರನ್ ಗಳಿಸಿದ್ದ ಭಾರತ ‘ಎ’ ತಂಡ ಆಟ ಮುಂದುವರಿಸಿ ಈ ಮೊತ್ತಕ್ಕೆ 174 ರನ್ ಸೇರಿಸುವಷ್ಟರಲ್ಲಿ ಆಲೌಟಾಗಿದೆ . ಔಟಾಗದೆ 66 ರನ್ ಗಳಿಸಿದ್ದ ಶುಭ್‌ಮನ್ ಗಿಲ್ ಮತ್ತು 6 ರನ್ ಗಳಿಸಿದ್ದ ಅಂಕಿತ್ ಬಾವ್ನೆ ಆಟ ಮುಂದುವರಿಸಿ ಭಾರತ ‘ಎ’ ತಂಡದ ಸ್ಕೋರ್‌ನ್ನು 133ಕ್ಕೆ ತಲುಪಿಸಿದರು. ಬಾವ್ನೆ ಬೇಗನೆ ಔಟಾದರು. ಗಿಲ್ 90 ರನ್‌ಗಳ ಉಪಯುಕ್ತ ಕೊಡುಗೆ ನೀಡಿ ನಿರ್ಗಮಿಸಿದರು. 9ನೇ ವಿಕೆಟ್‌ಗೆ ಶಾರ್ದೂಲ್ ಠಾಕೂರ್ ಮತ್ತು ಜಲಜ್ ಸಕ್ಸೇನಾ 100 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್ 300ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರ್

► ದ. ಆಫ್ರಿಕ ‘ಎ’: ಮೊದಲ ಇನಿಂಗ್ಸ್ 164

► ಭಾರತ ‘ಎ’ 87.5 ಓವರ್‌ಗಳಲ್ಲಿ 303 (ಗಿಲ್ 90, ಜಲಜ್ ಸಕ್ಸೇನಾ ಔಟಾಗದೆ 61, ಶಾರ್ದುಲ್ ಠಾಕೂರ್ 34, ಶ್ರೀಕರ್ ಭರತ್ 33, ಗಾಯಕ್‌ವಾಡ್ 30, ರಿಕ್ಕಿ ಭುಯ್ 26, ; ಗಿಡಿ 50ಕ್ಕೆ 3, ಪೀಡ್ 84ಕ್ಕೆ 3).

► ದ. ಆಫ್ರಿಕ ‘ಎ’: ಎರಡನೇ ಇನಿಂಗ್ಸ್ 35 ಓವರ್‌ಗಳಲ್ಲಿ 125/5( ಹಂಝ 44, ಕ್ಲಾಸೆನ್ ಔಟಾಗದೆ 35; ನದೀಮ್ 13ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News