ಅಗ್ರ ಸ್ಥಾನ ಕಾಯ್ದುಕೊಂಡ ಸ್ಮಿತ್, ಕಮಿನ್ಸ್

Update: 2019-09-10 17:46 GMT

ದುಬೈ, ಸೆ.10: ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧ 185 ರನ್‌ನಿಂದ ಗೆಲುವು ಸಾಧಿಸಿ ಆ್ಯಶಸ್ ಸರಣಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ನೆರವಾಗಿದ್ದ ಸ್ಟೀವ್ ಸ್ಮಿತ್ ಹಾಗೂ ಪ್ಯಾಟ್ ಕಮಿನ್ಸ್ ಮಂಗಳವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧ 4ನೇ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ 211 ಹಾಗೂ 82 ರನ್ ಗಳಿಸಿದ್ದ ಸ್ಮಿತ್ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು. ಒಟ್ಟು 937 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಸ್ಮಿತ್ 2017ರ ಡಿಸೆಂಬರ್‌ನಲ್ಲಿ ಸಾಧಿಸಿರುವ ತನ್ನ ಸಾರ್ವಕಾಲಿಕ ಶ್ರೇಷ್ಠ ಸರಾಸರಿಗಿಂತ 10 ಅಂಕ ಹಿಂದಿದ್ದಾರೆ.

ಸ್ಮಿತ್ ಇದೀಗ ಭಾರತದ ನಾಯಕ ವಿರಾಟ್ ಕೊಹ್ಲಿಗಿಂತ 34 ಅಂಕಗಳಿಂದ ಮುಂದಿದ್ದಾರೆ. ಐದು ಪಂದ್ಯಗಳ ಆ್ಯಶಸ್ ಸರಣಿ ಕೊನೆಗೊಳ್ಳುವ ತನಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ.

103 ರನ್‌ಗೆ ಏಳು ವಿಕೆಟ್‌ಗಳನ್ನು ಕಬಳಿಸಿದ್ದ ಕಮಿನ್ಸ್ ಜೀವನಶ್ರೇಷ್ಠ 914 ಅಂಕ ಗಳಿಸಿದರು. ಇದು ಐದನೇ ಸಾರ್ವಕಾಲಿಕ ಶ್ರೇಷ್ಠ ಅಂಕವಾಗಿದೆ. ಕಮಿನ್ಸ್ ದಕ್ಷಿಣ ಆಫ್ರಿಕದ ವೇಗದ ಬೌಲರ್ ಕಾಗಿಸೊ ರಬಾಡಗಿಂತ 63 ಅಂಕ ಮುಂದಿದ್ದಾರೆ. ಭಾರತದ ಜಸ್‌ಪ್ರಿತ್ ಬುಮ್ರಾ ಮೂರನೇ ಸ್ಥಾನದಲ್ಲಿದ್ದಾರೆ. ಜೋಶ್ ಹೇಝಲ್‌ವುಡ್ ಈ ವರ್ಷ ಮೊದಲ ಬಾರಿ ಅಗ್ರ-10ರ ಸ್ಥಾನ ಪಡೆದಿದ್ದಾರೆ. 12ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಜೋಸ್ ಬಟ್ಲರ್(4 ಸ್ಥಾನ ಭಡ್ತಿ, 37ನೇ) ಹಾಗೂ ರೊರಿ ಬರ್ನ್ಸ್(ಆರು ಸ್ಥಾನ ಭಡ್ತಿ, ಜೀವನಶ್ರೇಷ್ಠ 61ನೇ ಸ್ಥಾನ)ಹಾಗೂ ಆಸ್ಟ್ರೇಲಿಯದ ನಾಯಕ ಟಿಮ್ ಪೈನ್(ಆರು ಸ್ಥಾನ ಭಡ್ತಿ, 60ನೇ ಸ್ಥಾನ)ಪ್ರಗತಿ ಸಾಧಿಸಿದ್ದಾರೆ.

ಅಫ್ಘಾನಿಸ್ತಾನ ತಂಡ ಚಿತ್ತಗಾಂಗ್‌ನಲ್ಲಿ ಸೋಮವಾರ ಕೊನೆಗೊಂಡ ತನ್ನ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದ ವಿರುದ್ಧ 224 ರನ್ ಗೆಲುವು ಸಾಧಿಸಿದ್ದು, ಅಫ್ಘಾನ್ ಆಟಗಾರರು ರ್ಯಾಂಕಿಂಗ್‌ನಲ್ಲಿ ಪ್ರಗತಿ ಸಾಧಿಸಿದ್ದಾರೆ. 92 ಹಾಗೂ 50 ರನ್ ಗಳಿಸಿದ್ದ ಅಫ್ಘಾನ್ 110ನೇ ಸ್ಥಾನದಿಂದ 63ನೇ ಸ್ಥಾನಕ್ಕೇರಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ರಹಮತ್ ಶಾ 93ನೇ ಸ್ಥಾನದಿಂದ 65ನೇ ಸ್ಥಾನಕ್ಕೇರಿದರು.

104 ರನ್‌ಗೆ 11 ವಿಕೆಟ್‌ಗಳನ್ನು ಉರುಳಿಸಿದ್ದ ನಾಯಕ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು. ರ್ಯಾಂಕಿಂಗ್‌ನಲ್ಲಿ 69ನೇ ಸ್ಥಾನದಿಂದ 37 ನೇ ಸ್ಥಾನಕ್ಕೇರಿದರು. 21 ಸ್ಥಾನ ಮೇಲಕ್ಕೇರಿದ ಆಲ್‌ರೌಂಡರ್ ಮುಹಮ್ಮದ್ ನಬಿ 85ನೇ ಸ್ಥಾನದೊಂದಿಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಾಂಗ್ಲಾದೇಶದ ಎಡಗೈ ಸ್ಪಿನ್ನರ್‌ಗಳಾದ ಶಾಕಿಬ್ ಅಲ್ ಹಸನ್ ಹಾಗೂ ತೈಜುಲ್ ಇಸ್ಲಾಮ್ ಕ್ರಮವಾಗಿ 21ನೇ ಹಾಗೂ 22ನೇ ಸ್ಥಾನಕ್ಕೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News