ವಿಶ್ವ ಚಾಂಪಿಯನ್‌ಶಿಪ್: 25 ಸದಸ್ಯರ ಭಾರತ ಅಥ್ಲೀಟ್‌ಗಳ ತಂಡ ಪ್ರಕಟ

Update: 2019-09-10 18:17 GMT

 ಹೊಸದಿಲ್ಲಿ, ಸೆ.10: ಖತರ್‌ನ ದೋಹಾದಲ್ಲಿ ಸೆ.27ರಿಂದ ಅ.6ರ ತನಕ ನಡೆಯಲಿರುವ ಐಎಎಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ಗೆಹಿಮಾದಾಸ್ ಸಹಿತ 25 ಸದಸ್ಯರನ್ನು ಒಳಗೊಂಡ ರಾಷ್ಟ್ರೀಯ ಅಥ್ಲೆಟಿಕ್ಸ್ ತಂಡವನ್ನು ಭಾರತದ ಅಥ್ಲೆಟಿಕ್ಸ್ ಒಕ್ಕೂಟದ(ಎಎಫ್‌ಐ)ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ.

ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಗೇಮ್ಸ್‌ಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆ ಮಾಡಿರುವ ತಂಡ ಟ್ರಾಕ್ ಹಾಗೂ ಫೀಲ್ಡ್‌ನಲ್ಲಿ ಅಭಿಮಾನಿಗಳ ವಿಶ್ವಾಸವನ್ನು ಹೆಚ್ಚಿಸಿದೆ.

‘‘400 ಮೀ. ಓಟಗಾರರ ಮೇಲೆ ಸಾಕಷ್ಟು ಸಮಯ ವ್ಯಯಿಸಿದ್ದೇವೆ. ಅವರೆಲ್ಲರೂ ಖ್ಯಾತ ಕೋಚ್ ಗಲಿನಾ ಬುಖಾರಿನಾರಿಂದ ತರಬೇತಿ ಪಡೆಯುತ್ತಿದ್ದಾರೆ. ವಿಶ್ವ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಲು ನಮ್ಮ ತಂಡ ಉತ್ತಮ ತಯಾರಿ ನಡೆಸಿದೆ ಎಂಬ ನಂಬಿಕೆ ನಮಗಿದೆ’’ ಎಂದು ಎಎಫ್‌ಐ ಅಧ್ಯಕ್ಷ ಅದಿಲ್ ಸುಮರಿವಾಲಾ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಭುವನೇಶ್ವರದಲ್ಲಿ ನಡೆದ ರಾಷ್ಟ್ರೀಯ ಓಪನ್ ಚಾಂಪಿಯನ್‌ಶಿಪ್‌ನಲ್ಲಿ 8.20 ಮೀ.ದೂರಕ್ಕೆ ಜಿಗಿದು ಐಎಎಎಫ್ ಅರ್ಹತಾ ಮಾರ್ಕನ್ನು ತಲುಪಿರುವ ಲಾಂಗ್ ಜಂಪ್‌ಪಟು ಎಂ. ಶ್ರೀಶಂಕರ್ ಗಾಯದ ಸಮಸ್ಯೆಯಿಂದ ಹೊರಬಂದಿದ್ದಾರೆ. ಓಟಗಾರ್ತಿಯರಾದ ದ್ಯುತಿ ಚಂದ್(ಮಹಿಳೆಯರ 100 ಮೀ.ಓಟ), ಅರ್ಚನಾ ಸುಸೀತ್ರನ್(ಮಹಿಳೆಯರ 200 ಮೀ.) ಹಾಗೂ ಹೈ ಜಂಪ್ ಪಟು ತೇಜಸ್ವಿನಿ ಶಂಕರ್ ವಿಶ್ವ ರ್ಯಾಂಕಿಂಗ್‌ನ ಆಧಾರದಲ್ಲಿ ಐಎಎಎಫ್ ಟೂರ್ನಿಗೆ ಆಹ್ವಾನ ಪಡೆದಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ 400 ಮೀ. ಓಟಗಾರ ಅರೋಕಿಯಾ ರಾಜೀವ್ ಚಾಂಪಿಯನ್‌ಶಿಪ್‌ಗೆ ಲಭ್ಯವಿರುವುದಿಲ್ಲ. ಮೊಣಕೈ ಸರ್ಜರಿಗೆ ಒಳಗಾಗಿ ಪುನಶ್ಚೇತನ ಶಿಬಿರದಲ್ಲಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಲಭ್ಯತೆಯ ಬಗ್ಗೆ ಚರ್ಚಿಸಲು ಆಯ್ಕೆಗಾರರು ನಿರ್ಧರಿಸಿದ್ದಾರೆ.

 ಒಲಿಂಪಿಯನ್ ಗುರ್ಬಚನ್ ಸಿಂಗ್ ರಾಂಧವಾ ಅಧ್ಯಕ್ಷತೆಯಲ್ಲಿ ನಡೆದ ಎಎಫ್‌ಐ ಆಯ್ಕೆ ಸಮಿತಿಯ ಸಭೆಯಲ್ಲಿ ಎಎಫ್‌ಐ ಅಧ್ಯಕ್ಷ ಅದಿಲ್ ಸುಮರಿವಾಲಾ, ಮುಖ್ಯ ಕೋಚ್ ಬಹದೂರ್ ಸಿಂಗ್, ಕೃಷ್ಣಾ ಪೂನಿಯಾ, ಪ್ರವೀಣ್ ಜೊಲ್ಲಿ, ಉದಯ ಪ್ರಭು, ಪರಂಜಿತ್ ಸಿಂಗ್, ಮಾಜಿ ಮುಖ್ಯ ಕೋಚ್ ಜೆ.ಎಸ್. ಸೈನಿ ಹಾಗೂ ಸಹಾಯಕ ಉಪ ಕೋಚ್ ರಾಧಾಕೃಷ್ಣನ್ ನಾಯರ್ ಹಾಜರಾಗಿದ್ದರು.

ಭಾರತದ ಅಥ್ಲೀಟ್‌ಗಳ ತಂಡ

ಪುರುಷ ವಿಭಾಗ

ಜಬೀರ್ ಎಂಪಿ(400ಮೀ.ಹರ್ಡಲ್ಸ್), ಜಿನ್ಸನ್ ಜಾನ್ಸನ್(1500 ಮೀ.), ಅವಿನಾಶ್ ಸಬ್ಲೆ(3000 ಮೀ. ಸ್ಟೀಪಲ್‌ಚೇಸ್), ಕೆ.ಟಿ .ಇರ್ಫಾನ್ ಹಾಗೂ ದೇವೇಂದರ್ ಸಿಂಗ್(20 ಕಿ.ಮೀ.ರೇಸ್ ವಾಕ್), ಗೋಪಿ ಟಿ.(ಮ್ಯಾರಥಾನ್), ಶ್ರೀಶಂಕರ್(ಲಾಂಗ್‌ಜಂಪ್), ತೇಜಿಂದರ್ ಸಿಂಗ್(ಶಾಟ್‌ಪುಟ್), ಶಿವಪಾಲ್ ಸಿಂಗ್(ಜಾವಲಿನ್ ಎಸೆತ), ಮುಹಮ್ಮದ್ ಅನಸ್, ನಿರ್ಮಲ್ ನೋಯ್, ಅಲೆಕ್ಸ್ ಆ್ಯಂಟನಿ, ಅಮೋಜ್ ಜಾಕಬ್, ಕೆ.ಎಸ್. ಜೀವನ್, ಧರುಣ್ ಅಯ್ಯಸಾಮಿ ಹಾಗೂ ಹರೀಶ್ ಕುಮಾರ್(4X400 ಮೀ. ಪುರುಷರ,ಮಿಕ್ಸೆಡ್ ರಿಲೇ).

ಮಹಿಳಾ ವಿಭಾಗ

ಪಿ.ಯು.ಚಿತ್ರಾ(1,500 ಮೀ.), ಅನ್ನು ರಾಣಿ(ಜಾವೆಲಿನ್ ಎಸೆತ), ಹಿಮಾದಾಸ್, ವಿಸ್ಮಯ ವಿ.ಕೆ., ಪೂವಮ್ಮ ಎಂ.ಆರ್., ಜಿಸ್ನಾ ಮ್ಯಾಥ್ಯೂ, ರೇವತಿ ವಿ.ಎಸ್. ವಿಥಿ ಆರ್.(4-400 ಮೀ. ಮಹಿಳಾ, ಮಿಕ್ಸೆಡ್ ರಿಲೇ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News