ಭಾರತವನ್ನು ದೂಷಿಸಿದ ಪಾಕ್ ಸಚಿವ

Update: 2019-09-10 18:21 GMT

 ಲಾಹೋರ್, ಸೆ.10: ಶ್ರೀಲಂಕಾದ ಹಿರಿಯ ಆಟಗಾರರು ಪಾಕಿಸ್ತಾನದ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕಲು ಭಾರತವೇ ಕಾರಣ. ಪಾಕಿಸ್ತಾನ ವಿರುದ್ಧ ಸರಣಿಯಲ್ಲಿ ಭಾಗವಹಿಸದಂತೆ ಶ್ರೀಲಂಕಾದ ಆಟಗಾರರಿಗೆ ಭಾರತ ಬೆದರಿಕೆ ಹಾಕಿದೆ. ಒಂದು ವೇಳೆ ಪಾಕ್‌ಗೆ ಪ್ರವಾಸ ಕೈಗೊಂಡರೆ ಐಪಿಎಲ್ ಗುತ್ತಿಗೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಪಾಕಿಸ್ತಾನದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಆರೋಪಿಸಿದ್ದಾರೆ.

ಪಾಕ್ ಪ್ರವಾಸವನ್ನು ನಿರಾಕರಿಸದೇ ಇದ್ದರೆ ನಿಮ್ಮನ್ನು ಐಪಿಎಲ್‌ನಿಂದ ಹೊರಹಾಕಲಾಗುವುದು ಎಂದು ಭಾರತ, ಶ್ರೀಲಂಕಾ ಆಟಗಾರರಿಗೆ ಬೆದರಿಕೆ ಹಾಕಿದೆ ಎಂದು ಕ್ರೀಡಾ ವೀಕ್ಷಕವಿವರಣೆಗಾರರು ನನಗೆ ಮಾಹಿತಿ ನೀಡಿದ್ದಾರೆ. ಇದೊಂದು ನಿಜವಾಗಿಯೂ ಕ್ಷುಲ್ಲಕ ತಂತ್ರ, ಭಾರತೀಯ ಕ್ರೀಡಾ ಪ್ರಾಧಿಕಾರದ ಇಂತಹ ಕ್ಷುಲ್ಲಕ ತಂತ್ರವನ್ನು ಎಲ್ಲರೂ ಖಂಡಿಸಲೇಬೇಕಾಗಿದೆ ಎಂದು ಚೌಧರಿ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾದ ಪ್ರಮುಖ ಆಟಗಾರರಾದ ಟಿ-20 ನಾಯಕ ಲಸಿತ್ ಮಾಲಿಂಗ, ಮಾಜಿ ನಾಯಕರಾದ ಆ್ಯಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಸುರಂಗ ಲಕ್ಮಲ್, ಡಿಮುತ್ ಕರುಣರತ್ನೆ, ತಿಸಾರ ಪೆರೇರ, ಅಕಿಲ ಧನಂಜಯ, ಧನಂಜಯ ಡಿಸಿಲ್ವಾ, ಕುಸಾಲ್ ಪೆರೇರ ಹಾಗೂ ನಿರೊಶನ್ ಡಿಕ್ವೆಲ್ಲಾ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎದುರು ಭದ್ರತೆ ಭೀತಿಯ ಆತಂಕವನ್ನು ವ್ಯಕ್ತಪಡಿಸಿ ಸೆ.27ರಿಂದ ಆರಂಭವಾಗಲಿರುವ ಪಾಕ್ ವಿರುದ್ಧ ಸರಣಿಯಿಂದ ಹೊರಗುಳಿದಿದ್ದರು.

ಶ್ರೀಲಂಕಾ ತಂಡ ಕರಾಚಿಯಲ್ಲಿ ಸೆ.27, 29 ಹಾಗೂ ಅಕ್ಟೋಬರ್ 3 ರಂದು ಮೂರು ಏಕದಿನ ಪಂದ್ಯಗಳನ್ನು, ಲಾಹೋರ್‌ನಲ್ಲಿ ಅ.5, 7 ಹಾಗೂ 9 ರಂದು ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಬೇಕಾಗಿತ್ತು. ಡಿಸೆಂಬರ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಟೆಸ್ಟ್ ಸರಣಿಯನ್ನು ಆಡಲು ಪಾಕ್‌ಗೆ ತೆರಳಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News