ಔಷಧಿ ವ್ಯಾಪಾರಿಗಳ ಮುಂದಿರುವ ಸವಾಲುಗಳು

Update: 2019-09-10 18:30 GMT

ಇಂದಿನ ನಾಗಾಲೋಟದಲ್ಲಿ ಓಡುತ್ತಿರುವ ಜಗತ್ತಿನಲ್ಲಿ ಎಲ್ಲಾ ತರದಲ್ಲೂ ಆಧುನಿಕ ಸವಲತ್ತುಗಳು ಜನತೆಗೆ ಲಭ್ಯವಾಗುತ್ತಿವೆ. ಇದಕ್ಕೆ ಔಷಧಿ ವಿತರಣ ಉದ್ಯಮವೂ ಹೊರತಾಗಿಲ್ಲ. ಆನ್‌ಲ್ಯೆನ್ ಔಷಧಿ ವಿತರಣ ಕಂಪೆನಿಗಳು ಮನೆ ಬಾಗಿಲಿಗೆ ಬಂದು ರೋಗಿಗಳಿಗೆ ಔಷಧಿಗಳನ್ನು ವಿತರಿಸುತ್ತಿವೆ. ಕೆಲವು ಕಾರ್ಪೊರೇಟ್ ತೆರನಾದ ಫಾರ್ಮಸಿಗಳು ದೇಶಾದ್ಯಂತ ಅಲ್ಲಲ್ಲಿ ಹವಾನಿಯಂತ್ರಿತ ಔಷಧಾಲಯಗಳನ್ನು ತೆರೆಯುತ್ತಿವೆ. ಅಷ್ಟೇ ಅಲ್ಲ. ಔಷಧಿ ಉತ್ಪಾದಕರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದೆ. ಇಂದು ಹೆಚ್ಚಿನ ಖಾಸಗಿ ವ್ಯೆದ್ಯರು ರೋಗಿಗಳಿಗೆ ಔಷಧಾಲಯಕ್ಕೆ ಚೀಟಿ ಬರೆಯದೆ ತಾವೇ ಔಷಧಿ ವಿತರಿಸುತ್ತಿದ್ದಾರೆ. ಇದೂ ಸಾಲದೆಂಬಂತೆ ಖುದ್ದು ಸರಕಾರವೇ ಜನೌಷಧಿ ಅಂಗಡಿ ತೆರೆದು ಅತೀ ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಜನತೆಗೆ ವಿತರಿಸುತ್ತಿದೆ. ಆಹಾ! ಎಷ್ಟೊಂದು ಸೌಲಭ್ಯಗಳು!

ಆದರೆ ಒಂದು ಕ್ಷಣ ನಿಲ್ಲಿ. ಇಷ್ಟೆಲ್ಲಾ ಅತ್ಯುತ್ಸಾಹದಿಂದ ಜನತೆಗೆ ಸಕಲ ಸವಲತ್ತುಗಳನ್ನು ಒದಗಿಸುವ ಭರದಲ್ಲಿ ದೇಶದ ಉಳಿದ ಲಕ್ಷಾಂತರ ಔಷಧಿ ವ್ಯಾಪಾರಿಗಳನ್ನು ಮರೆತು ಬಿಟ್ಟರೆ ಹೇಗೆ? ಇದ್ದ ಉದ್ಯಮದಲ್ಲೇ ಕ್ಲಪ್ತವಾಗಿ ತೆರಿಗೆ ಪಾವತಿಸುವ(ಜಿಎಸ್‌ಟಿ ಬರುವ ಮೊದಲೂ ಸಹ) ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೋಟ್ಯಂತರ ಮಂದಿಗೆ ಉದ್ಯೋಗ ಒದಗಿಸುವ, ಅನೇಕ ರೀತಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಈ ಔಷಧಿ ವ್ಯಾಪಾರಿಗಳಿಗೆ ಇಷ್ಟೊಂದು ಸ್ಪರ್ಧೆಯೊಡ್ಡುವುದು ನ್ಯಾಯಯುತವಲ್ಲ.

ಇಂದು ಔಷಧಿ ವ್ಯಾಪಾರವೆನ್ನುವುದು ಅತ್ಯವಶ್ಯಕ ಸೇವೆಯಂತೆ ಪರಿಗಣಿಸಲ್ಪಟ್ಟಿದೆ. ವ್ಯೆದ್ಯರಾದರೆ ಎಷ್ಟೇ ರೋಗಿಗಳಿದ್ದರೂ ಕೆಲವು ದಿನ ರಜೆ ಹಾಕಿ ದೂರದೂರಿಗೆ ಟೂರ್, ಸೆಮಿನಾರ್, ಅದು, ಇದು ಎಂದು ರಿಲಾಕ್ಸ್ ಆಗುತ್ತಾರೆ(ವಾರದ ರಜೆ ಬೇರೆ). ಆದರೆ ಔಷಧಿ ವ್ಯಾಪಾರಿಗಳು ರವಿವಾರವೂ ತೆರೆದಿರುತ್ತಾರೆ. ಯಾವುದೇ ಹಬ್ಬ ಹರಿದಿನ, ಸರಕಾರಿ ರಜೆ, ಮುಷ್ಕರ, ಯಾವುದೂ ಇವರಿಗೆ ಅನ್ವಯವಾಗುವುದಿಲ್ಲ. ಯಾವುದೇ ಸಮಾರಂಭಗಳಿಗೂ ಮುಕ್ತವಾಗಿ ಹೋಗಿ ಬರುವಂತಿಲ್ಲ. ಅನುಭವಿ ಸಿಬ್ಬಂದಿಯ ಕೊರತೆ ಯಾವಾಗಲೂ ಇದ್ದದ್ದೆ.

 ಅಷ್ಟೇ ಅಲ್ಲ. ಸದಾ ಜಾಗರೂಕರಾಗಿರಬೇಕಾದ ಅನಿವಾರ್ಯತೆ. ರೋಗಿಗೆ ತಪ್ಪುಔಷಧಿ ವಿತರಿಸಲ್ಪಟ್ಟರೆ ನಮ್ಮ ಸ್ಟಾಫ್ ಹೊಸಬ ಪರವಾಗಿಲ್ಲ ಬದಲಾಯಿಸಿ ಕೊಡುತ್ತೇವೆ ಎಂದೆಲ್ಲಾ ಸಬೂಬು ಹೇಳುವಂತಿಲ್ಲ. ಯಾಕೆಂದರೆ ತಪ್ಪುಮೆಡಿಸಿನ್ ಸೇವಿಸಿ ರೋಗಿಯ ಸ್ಥಿತಿ ಹರೋಹರವಾಗಿ ಬದಲಾಯಿಸಿ ಕೊಟ್ಟರೂ ತೆಗೆದುಕೊಳ್ಳುವಾತನೇ ಇಲ್ಲದಿದ್ದರೆ?

ಹಾಗೆಯೇ ಔಷಧಾಲಯವನ್ನು ತೀರಾ ಕಡಿಮೆ ಬಜೆಟ್‌ನಲ್ಲಿ ಆರಂಭಿಸುವುದು ಕಷ್ಟಕರ. ಎಷ್ಟೇ ಕಡಿಮೆ ಎಂದರೂ ನಿರ್ದಿಷ್ಟ ಬಂಡವಾಳ ಬೇಕೇ ಬೇಕು. ಇಂದು ದಿನಾ ನೂರಾರು ಹೊಸ ಹೊಸ ಬ್ರಾಂಡ್‌ನ ಔಷಧಿಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಲೇ ಇವೆ. ವ್ಯೆದ್ಯರು ಸ್ವಲ್ಪದಿನದವರೆಗೆ ಅವುಗಳನ್ನು ಬರೆಯಬಹುದು ಅಥವಾ ಹಠಾತ್ತಾಗಿ ನಿಲ್ಲಿಸಬಹುದು.

ಆದರೆ ಮೆಡಿಕಲ್ ಶಾಪ್‌ನವರು ಅವುಗಳನ್ನು ಹೆಚ್ಚು ಸಂಗ್ರಹಿಸಿಡುವಂತಿಲ್ಲ ಅಥವಾ ಇಡದೇ ಇರುವಂತಿಲ್ಲ ಜತೆಗೆ ನೂರಾರು ಕಾನೂನು ಕಟ್ಟಳೆಗಳನ್ನು ಪಾಲಿಸಬೇಕು.ಮೆಡಿಕಲ್ ಶಾಪ್‌ನ್ನು ಆಮ್ಲೆಟ್, ಪಾನಿಪುರಿ ಅಂಗಡಿಯಂತೆ ಎಲ್ಲೆಂದರಲ್ಲಿ ತೆರೆಯುವಂತಿಲ್ಲ. ನಿರ್ದಿಷ್ಟ ಸ್ಥಳಾವಕಾಶ ಇರತಕ್ಕದ್ದು. ಅದಕ್ಕೆ ಔಷಧಿ ಇಲಾಖೆಯ ಅನುಮತಿ ಬೇಕು. ಫಾರ್ಮಾಸಿಸ್ಟ್ ಕಡ್ಡಾಯವಾಗಿ ಔಷಧಾಲಯದಲ್ಲಿ ಸದಾಕಾಲ ಇರತಕ್ಕದ್ದು. ಫಾರ್ಮಾಸಿಸ್ಟ್‌ನ ಅನುಪಸ್ಥಿತಿಯಲ್ಲಿ ಬೇರೆಯವರು ಔಷಧಿಗಳನ್ನು ರೋಗಿಗಳಿಗೆ ಕೊಡುವಂತಿಲ್ಲ.(ಇದನ್ನು ಎಷ್ಟು ಕಡೆಯಲ್ಲಿ ಪಾಲಿಸುತ್ತಾರೊ ಗೊತ್ತಿಲ್ಲ.)ಔಷಧಿಗಳ ಖರೀದಿ, ಮಾರಾಟ ಎಲ್ಲದರ ದಾಖಲೆ ಕಾಪಾಡಿಕೊಂಡಿರಬೇಕು.ಔಷಧಿ ಇಲಾಖೆಯ ತಪಾಸಕರು ಬಂದು ಅವರು ಕೇಳಿದ ಎಲ್ಲ ದಾಖಲೆಗಳನ್ನೂ ತೋರಿಸಬೇಕು.

ಇತ್ತೀಚೆಗಂತೂ ಡಿಸ್ಕೌಂಟ್ ಪೈಪೋಟಿಯಿಂದಾಗಿ ಮೆಡಿಕಲ್ ಶಾಪ್‌ನವರು ಹೈರಾಣಾಗಿ ಹೋಗಿದ್ದಾರೆ. ಅತ್ತ ಆನ್‌ಲೈನ್, ಕಾರ್ಪೊರೇಟ್ ಶೈಲಿಯ ಫಾರ್ಮಾಸಿಗಳು, ಇತ್ತ ಸರಕಾರಿ ಜನೌಷಧಿಯಿಂದಾಗಿ ಈ ದರಸಮರದಲ್ಲಿ ಭಾಗವಹಿಸುವುದು ಹೆಚ್ಚಿನ ಔಷಧಿ ವ್ಯಾಪಾರಿಗಳಿಗೆ ಅನಿವಾರ್ಯವಾಗಿಬಿಟ್ಟಿದೆ. ಈ ಡಿಸ್ಕೌಂಟ್ ಪೈಪೋಟಿಯಿಂದಾಗಿ ಮೆಡಿಕಲ್ ಶಾಪ್‌ನವರದ್ದು ಲಾಭದಾಯಕ ಉದ್ಯಮ ಎಂದು ಹೆಚ್ಚಿನ ಗ್ರಾಹಕರು ತಪ್ಪಾಗಿ ಭಾವಿಸುತ್ತಿದ್ದಾರೆ. ವಾಸ್ತವವಾಗಿ ಬೇರೆಲ್ಲಾ ವಹಿವಾಟಿಗೆ ಹೋಲಿಸಿದರೆ ಲಾಭಾಂಶ ಔಷಧಿ ವ್ಯಾಪಾರದಲ್ಲಿ ಅಷ್ಟೇನಿಲ್ಲ.ಹೆಚ್ಚು ಲಾಭಾಂಶವಿರುವ ಔಷಧಿಗಳಿದ್ದರೂ ದಿನದ ಒಟ್ಟು ವ್ಯಾಪಾರದಲ್ಲಿ ಅವುಗಳ ಪಾಲು ತೀರ ನಗಣ್ಯವಾಗಿರುತ್ತದೆ.ಅಷ್ಟಲ್ಲದೆ ನೋಡನೋಡುತ್ತಿದ್ದಂತೆ ಎಕ್ಸ್‌ಪೈರಿ ಅವಧಿ ಮುಗಿಯುವ ಔಷಧಿಗಳು ತೀವ್ರ ನಷ್ಟವನ್ನುಂಟು ಮಾಡುತ್ತಿರುತ್ತವೆ.

ಇಂದು ಸರಕಾರ (ಕೇಂದ್ರವಿರಲಿ, ರಾಜ್ಯವಿರಲಿ) ಗುಣಮಟ್ಟದ ಆರೋಗ್ಯ ಕೇಂದ್ರ ತೆರೆದು (ಇಂದು ಭಾರತದ ಜನಸಂಖ್ಯೆಗೆ ಹೋಲಿಸಿದರೆ ಇರುವ ಆರೋಗ್ಯ ಕೇಂದ್ರಗಳ ಸಂಖ್ಯೆ ಅತಿ ಕಡಿಮೆ ಪ್ರಮಾಣದಲ್ಲಿವೆ)ಅದರಲ್ಲಿ ತಜ್ಞ ವೈದ್ಯರು, ಸುಸಜ್ಜಿತ ಪ್ರಯೋಗಾಲಯ, ಎಕ್ಸ್‌ರೆ,ಇಸಿಜಿಗೆ ಮುಂತಾದುವುಗಳಿಗೆ ಬೇಕಾದ ಆಧುನಿಕ ಯಾಂತ್ರಿಕ ಸಲಕರಣೆಗಳು, ಅದಕ್ಕೆ ಬೇಕಾದ ತಂತ್ರಜ್ಞರು, ಅದರಲ್ಲಿ ಸಮರ್ಪಕ ನಿರ್ವಹಣೆಯ (ರಿಯಾಯಿತಿ ದರದ) ಔಷಧಾಲಯ ಮುಂತಾದವುಗಳನ್ನು ಮಾಡುವುದು ಬಿಟ್ಟು ಪೇಟೆಯ ಜನನಿಬಿಡ ಪ್ರದೇಶದಲ್ಲಿ ಜನೌಷಧಿ ಸ್ಟೋರ್ ತೆರೆದು ಎಪಿಎಲ್ ಕಾರ್ಡ್‌ಗೆ ಅರ್ಹರಾದವರಿಗೆ ಬಿಪಿಎಲ್ ಕಾರ್ಡ್ ಒದಗಿಸಿ ಕೊಟ್ಟ ಹಾಗೆ ಹಣವಂತರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟು (ಯಾಕೆಂದರೆ ಬಡಜನತೆ ಮಾಹಿತಿಯ ಕೊರತೆಯಿಂದ ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ) ದೇಶದ ಲಕ್ಷಾಂತರ ಔಷಧಿ ವ್ಯಾಪಾರಗಳ ಹೊಟ್ಟೆಗೆ ಹೊಡೆಯುವುದು ಯಾವ ನ್ಯಾಯ?

 ಇನ್ನು ಆನ್‌ಲೈನ್ ವಹಿವಾಟಿನಲ್ಲಿರುವ ಅಪಾಯದ ಬಗ್ಗೆ ಔಷಧಿ ವ್ಯಾಪಾರಿಗಳು ಎರಡೆರಡು ಬಾರಿ ದೇಶಾದ್ಯಂತ ಮುಷ್ಕರ ಹೂಡಿ ಸರಕಾರದ ಗಮನ ಸೆಳೆದರೂ ಪರಿಣಾಮ ಅಷ್ಟಕ್ಕಷ್ಟೆ. ತಂತ್ರಜ್ಞಾನದಲ್ಲಿ ಅತ್ಯಂತ ಪರಿಣಿತರಾಗಿರುವ ಇಂದಿನ ಯುವಜನಾಂಗ ಯಾವುದೇ ಔಷಧಿಯನ್ನು ಮನೆಬಾಗಿಲಿಗೆ ತರಿಸಿಕೊಳ್ಳಬಲ್ಲರು. ಇದು ಮಾದಕ ದ್ರವ್ಯ ವ್ಯಸನಿಗಳಿಗೆ ಮತ್ತಷ್ಟು ಅನುಕೂಲಮಾಡಿಕೊಟ್ಟಂತಾಗುತ್ತದೆ. ಅಷ್ಟೇ ಅಲ್ಲ ಭಾರತದಂತಹ ಅತೀ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಇವುಗಳ ನಿಯಂತ್ರಣವೂ ಭವಿಷ್ಯದಲ್ಲಿ ಕಷ್ಟಕರವಾಗಬಹುದು.

ಹೀಗೆ ಮುಂದಿನ ದಿನಗಳಲ್ಲಿ ಒಂದರ ಮೇಲೊಂದು ಕಠಿಣ ಸವಾಲುಗಳನ್ನು ಎದುರಿಸಲಾಗದೆ ಒಂದೊಂದಾಗಿ ಔಷಧಾಲಯಗಳು ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಮುಚ್ಚಲ್ಪಟ್ಟರೆ ಅಲ್ಲೆಲ್ಲ ಸರಕಾರವಂತೂ ಜನೌಷಧಿ ಸ್ಟೋರ್ ತೆರೆದು ಅವುಗಳನ್ನು ನಿರ್ವಹಿಸುವುದು ಅಸಾಧ್ಯ. ಇನ್ನು ದೊಡ್ಡ ಬಂಡವಾಳ ಹೂಡಿ ದೊಡ್ಡ ಲಾಭ ನಿರೀಕ್ಷಿಸುವ ಚೈನ್ ಸಿಸ್ಟಮ್ ಹೊಂದಿರುವ ಕಾರ್ಪೊರೇಟ್ ಫಾರ್ಮಸಿಗಳು ಗ್ರಾಮಾಂತರ ಪ್ರದೇಶದಲ್ಲೂ ತೆರೆಯಲ್ಪಡುತ್ತವೆ ಎಂದು ಭಾವಿಸುವುದು ಮೂರ್ಖತನವಾದೀತು.

Writer - ಚೇತನ್ ಕುಮಾರ್ ಶೆಟ್ಟಿ

contributor

Editor - ಚೇತನ್ ಕುಮಾರ್ ಶೆಟ್ಟಿ

contributor

Similar News

ಜಗದಗಲ
ಜಗ ದಗಲ