ಕಾಶ್ಮೀರ ಕುರಿತು ಯುಎನ್‌ಎಚ್‌ಆರ್‌ಸಿ ತನಿಖೆಯ ಪಾಕಿಸ್ತಾನದ ಬೇಡಿಕೆಗೆ ಭಾರತದ ತಿರಸ್ಕಾರ

Update: 2019-09-10 18:37 GMT

ಜಿನಿವಾ,ಸೆ.10: ಪಾಕಿಸ್ತಾನದ ‘ಚಿತ್ತೋನ್ಮಾದದ ಹೇಳಿಕೆಗಳು’ ಮತ್ತು ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯಿಂದ ಅಂತರ್ ರಾಷ್ಟ್ರೀಯ ತನಿಖೆ ನಡೆಯಬೇಕೆಂಬ ಅದರ ಬೇಡಿಕೆಯನ್ನು ಮಂಗಳವಾರ ತಿರಸ್ಕರಿಸಿರುವ ಭಾರತವು,ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿದ್ದು ದೇಶದ ಸಾರ್ವಭೌಮ ಹಕ್ಕಿಗೆ ಒಳಪಟ್ಟಿದೆ ಮತ್ತು ಸಂಪೂರ್ಣವಾಗಿ ತನ್ನ ಆಂತರಿಕ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದೆ.

ಇಲ್ಲಿ ಯುಎನ್‌ಎಚ್‌ಆರ್‌ಸಿಯ 42ನೇ ಅಧಿವೇಶನದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಷಿ ಅವರ ಹೇಳಿಕೆಗೆ ಉತ್ತರಿಸುವ ತನ್ನ ಹಕ್ಕನ್ನು ಬಳಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಥಮ ಕಾರ್ಯದರ್ಶಿ ವಿಮರ್ಶ ಆರ್ಯನ್ ಅವರು,‘ವಿಧಿ 370 ಭಾರತೀಯ ಸಂವಿಧಾನದಲ್ಲಿ ತಾತ್ಕಾಲಿಕ ಸ್ವರೂಪದ್ದಾಗಿತ್ತು ಮತ್ತು ಇತ್ತೀಚಿನ ಅದರ ಪರಿಷ್ಕರಣೆಯು ಭಾರತದ ಸಾರ್ವಭೌಮ ಹಕ್ಕಿಗೆ ಒಳಪಟ್ಟಿದೆ ಮತ್ತು ಸಂಪೂರ್ಣವಾಗಿ ದೇಶದ ಆಂತರಿಕ ವಿಷಯವಾಗಿದೆ. ಈ ವೇದಿಕೆ (ಯುಎನ್‌ಎಚ್‌ಆರ್‌ಸಿ)ಯನ್ನು ರಾಜಕೀಯಗೊಳಿಸುವ ಮತ್ತು ಧ್ರುವೀಕರಿಸುವ ಉದ್ದೇಶದಿಂದ ಪಾಕಿಸ್ತಾನವು ನೀಡುತ್ತಿರುವ ಸುಳ್ಳುಗಳಿಂದ ಕೂಡಿದ ಚಿತ್ತಭ್ರಾಂತಿಯ ಹೇಳಿಕೆಗಳು ನಮಗೆ ಅಚ್ಚರಿಯನ್ನುಂಟು ಮಾಡಿಲ್ಲ. ನಮ್ಮ ನಿರ್ಧಾರವು ಗಡಿಯಾಚೆಯ ಭಯೋತ್ಪಾದನೆಗೆ ತನ್ನ ನಿರಂತರ ಪ್ರಾಯೋಜಕತ್ವಕ್ಕೆ ತೊಡಕುಗಳು ಸೃಷ್ಟಿಸುವ ಮೂಲಕ ತನ್ನ ಕಾಲ ಕೆಳಗಿನ ನೆಲವು ಕುಸಿಯುವಂತೆ ಮಾಡಿದೆ ಎನ್ನುವುದನ್ನು ಪಾಕಿಸ್ತಾನವು ಅರ್ಥ ಮಾಡಿಕೊಂಡಿದೆ ’ಎಂದು ಹೇಳಿದರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಚೋದನಾಕಾರಿ ಭಾರತ ವಿರೋಧಿ ಹೇಳಿಕೆಗಳ ಹಿನ್ನೆಲೆಯಲ್ಲಿ ಆರ್ಯನ್,ಕೆಲವು ಪಾಕಿಸ್ತಾನಿ ನಾಯಕರು ಜಮ್ಮು-ಕಾಶ್ಮೀರದಲ್ಲಿ ಹಿಂಸೆಯನ್ನು ಉತ್ತೇಜಿಸಲು ಜಿಹಾದ್‌ಗೆ ಕರೆ ನೀಡುವ ಮಟ್ಟಕ್ಕೆ ಹೋಗಿದ್ದಾರೆ. ನರಮೇಧದ ಚಿತ್ರಣವನ್ನು ಸೃಷ್ಟಿಸಲು ಅವರು ತೃತೀಯ ರಾಷ್ಟ್ರಗಳಿಗೂ ಕರೆ ನೀಡುತ್ತಿದ್ದಾರೆ,ಆದರೆ ಇದು ಅಪ್ಪಟ ಸುಳ್ಳು ಎನ್ನುವುದು ಅವುಗಳಿಗೂ ಗೊತ್ತಾಗಿದೆ ಎಂದರು.

ಮೂಲತಃ ಜಮ್ಮು-ಕಾಶ್ಮೀರದವರೇ ಆಗಿರುವ ಆರ್ಯನ್, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸಲು ಕಾಶ್ಮೀರದ ಜನರು ಒಗ್ಗಟ್ಟಾಗಿದ್ದಾರೆ ಮತ್ತು ಕಾಶ್ಮೀರ ಕುರಿತು ಮಾತನಾಡಲು ಪಾಕಿಸ್ತಾನಕ್ಕೆ ಯಾವುದೇ ಅಧಿಕಾರ ಇಲ್ಲ ಎಂದೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News