ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯ: ಕತರ್ ವಿರುದ್ಧ ಡ್ರಾ ಸಾಧಿಸಿದ ಭಾರತ

Update: 2019-09-11 03:41 GMT

ದೋಹಾ: ಗೋಲುಪೆಟ್ಟಿಗೆ ಎದುರು ಜೀವನಶ್ರೇಷ್ಠ ನಿರ್ವಹಣೆ ತೋರಿದ ಗುರುಪ್ರೀತ್ ಸಿಂಗ್ ಸಂಧು ಅವರ ಸಾಹಸದಿಂದಾಗಿ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ ಏಷ್ಯನ್ ಚಾಂಪಿಯನ್ ಕತರ್ ವಿರುದ್ಧ 0-0 ಗೋಲುಗಳ ಅಚ್ಚರಿಯ ಡ್ರಾ ಸಾಧಿಸಿದೆ.

ಇದರೊಂದಿಗೆ ಇ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ತನ್ನ ಅಂಕಪಟ್ಟಿ ತೆರೆಯಿತು.

ಸುನೀಲ್ ಚೇಟ್ರಿ ಅನಾರೋಗ್ಯದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ಗುರುಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಿದರು. ಫಿಫಾ ರ್ಯಾಂಕಿಂಗ್‌ನಲ್ಲಿ ತನಗಿಂತ 41 ರ್ಯಾಂಕ್‌ನಷ್ಟು ಮೇಲಿರುವ ಕತರ್ ಸವಾಲಿಗೆ ಭಾರತ ದಿಟ್ಟ ಉತ್ತರ ನೀಡಿತು. ಫಿಫಾ ವಿಶ್ವ ರ್ಯಾಂಕಿಂಗ್‌ನಲ್ಲಿ ಕತರ್ 62 ರ್ಯಾಂಕ್ ಹೊಂದಿದ್ದರೆ ಭಾರತ 103ನೇ ಸ್ಥಾನದಲ್ಲಿದೆ.

ಇತ್ತೀಚೆಗೆ ಅರ್ಜುನ ಪ್ರಶಸ್ತಿಯನ್ನೂ ಗೆದ್ದಿರುವ ಬೆಂಗಳೂರು ಎಫ್‌ಸಿ ನಾಯಕ ಗುರುಪ್ರೀತ್, ಆರಂಭದಿಂದಲೂ ಎದುರಾಳಿಗಳಿಗೆ ಒಂದು ಗೋಲು ಅವಕಾಶವನ್ನೂ ನೀಡದೇ ಪಂದ್ಯದುದ್ದಕ್ಕೂ ಗಮನ ಸೆಳೆದರು. ಕತರ್‌ನ 27 ಗೋಲು ಗಳಿಕೆ ಯತ್ನವನ್ನೂ ಗುರುಪ್ರೀತ್ ವಿಫಲಗೊಳಿಸಿದರು.

ಪಂದ್ಯ ಮುಕ್ತಾಯದಲ್ಲಿ ಕ್ರೊವೇಶಿಯಾ ಕೋಚ್ ಇಗೋರ್ ಸ್ಟಿಮಾಕ್ ನೇತೃತ್ವದ ಭಾರತ ತಂಡ, ಡ್ರಾದಲ್ಲಿ ಅಂತ್ಯವಾದ ಪಂದ್ಯವನ್ನು ಗೆಲುವಿನಂತೆ ಸಂಭ್ರಮಿಸಿತು. ಸ್ಪೇನ್‌ನ ಖ್ಯಾತ ಆಟಗಾರ ಕ್ಸವಿ ಹೆರ್ನಾಂಡೆಸ್ ಈ ಪಂದ್ಯಕ್ಕೆ ಸಾಕ್ಷಿಯಾದರು.

85ನೇ ನಿಮಿಷದಲ್ಲಿ ಎದುರಾಳಿ ತಂಡದ ಇಸ್ಮಾಯಿಲ್ ಮೊಹ್ಮದ್ ಹೊಡೆದ ಬಲವಾದ ಹೊಡೆತ ಗೋಲು ಪಟ್ಟಿಗೆ ಬಡಿದು ವಾಪಸ್ಸಾಗಿ ಆ ತಂಡದ ಗೋಲು ಗಳಿಸುವ ಕೊನೆ ಅವಕಾಶವೂ ಕೈತಪ್ಪಿತು. ಇದಕ್ಕೂ ಮುನ್ನ ಗುರುಪ್ರೀತ್, ಅಚ್ಚರಿಯ ರೀತಿಯಲ್ಲಿ ಹಲವು ಗೋಲು ಅವಕಾಶಗಳನ್ನು ತಪ್ಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News