​ಸಂಚಾರ ನಿಯಮ ಉಲ್ಲಂಘನೆ: ಈ ರಾಜ್ಯದಲ್ಲಿ ದಂಡ ಭಾರೀ ಇಳಿಕೆ!

Update: 2019-09-11 06:28 GMT

ಗಾಂಧಿನಗರ: ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಹತ್ತು ದಿನಗಳಲ್ಲೇ ಗುಜರಾತ್ ಸರ್ಕಾರ, ವಿವಿಧ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ದಂಡಮೊತ್ತವನ್ನು ಶೇಕಡ 25 ರಿಂದ ಶೇಕಡ 90ರವರೆಗೂ ಇಳಿಸಿದೆ. ಕೇಂದ್ರ ಸರ್ಕಾರ ಸೂಚಿಸಿದ್ದ ದಂಡಮೊತ್ತವನ್ನು ಇಳಿಸುವ ಸಂಬಂಧ ಮಂಗಳವಾರ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

"ಅನುಕಂಪ ಮತ್ತು ಮಾನವೀಯತೆ" ಆಧಾರದಲ್ಲಿ ದಂಡಮೊತ್ತವನ್ನು ಇಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ. ಗುಜರಾತ್ ಸರ್ಕಾರದ ಈ ಕ್ರಮ ಇತರ ರಾಜ್ಯಗಳಲ್ಲಿ ಕೂಡಾ ದಂಡಮೊತ್ತ ಇಳಿಸಲು ದಾರಿ ಮಾಡಿಕೊಡುವ ನಿರೀಕ್ಷೆ ಇದೆ.

ಹೊಸ ಮೋಟಾರು ವಾಹನ ಕಾಯ್ದೆಯ ಅನ್ವಯ ಹಲವು ಸಂಚಾರ ಅಪರಾಧಗಳಿಗೆ ವಿಧಿಸುವ ದಂಡವನ್ನು ರಾಜ್ಯ ಸರ್ಕಾರಗಳು ಕಡಿಮೆ ಮಾಡಲು ಅವಕಾಶವಿದೆ.

ಹೊಸ ದಂಡ ವಿಧಿಸುವ ವ್ಯವಸ್ಥೆ ಸೆ. 16ರಿಂದ ಜಾರಿಗೆ ಬರಲಿದೆ. ಆದರೆ ಪಾನಮತ್ತರಾಗಿ ವಾಹನ ಚಾಲನೆ ಮಾಡುವುದು, ಸಿಗ್ನಲ್ ಜಂಪ್‌ನಂಥ ಅಪರಾಧಗಳಿಗೆ ಮೂಲ ದಂಡನಾ ಮೊತ್ತ ಮುಂದುವರಿಯಲಿದ್ದು, ಇದನ್ನು ಬದಲಾಯಿಸಲು ಅವಕಾಶ ಇರುವುದಿಲ್ಲ.

"ಜನರಿಂದ ದಂಡ ಸಂಗ್ರಹಿಸುವುದು ಅಥವಾ ಪ್ರಕರಣ ದಾಖಲಿಸುವುದು ನಮ್ಮ ಆದ್ಯತೆಯಲ್ಲ. ಆದಾಗ್ಯೂ ಕಠಿಣ ಶಿಕ್ಷೆ ಇಲ್ಲದೇ ಕಾನೂನು ಜಾರಿಗೊಳಿಸುವುದು ಅಸಾಧ್ಯ. ಆದರೂ ಅನುಕಂಪ ಮತ್ತು ಮಾನವೀಯತೆ ಆಧಾರದಲ್ಲಿ ದಂಡವನ್ನು ಇಳಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಜನರ ಜೀವಕ್ಕೆ ಅಪಾಯವಾಗುವಂಥ ಪ್ರಕರಣಗಳಲ್ಲಿ ಯಾವ ರಿಯಾಯಿತಿಯೂ ಇಲ್ಲ" ಎಂದು ಮುಖ್ಯಮಂತ್ರಿ ವಿಜಯ್ ರುಪಾನಿ ಹೇಳಿದ್ದಾರೆ.

ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದಕ್ಕೆ ವಿಧಿಸುವ ದಂಡಮೊತ್ತವನ್ನು 1000 ರೂಪಾಯಿನಿಂದ 500 ರೂ., ತುರ್ತು ವಾಹನಗಳಿಗೆ ತಡೆ ಒಡ್ಡುವ ಅಪರಾಧಕ್ಕೆ 10 ಸಾವಿರದಿಂದ 1000 ರೂ., ಪಿಯುಸಿ ಇಲ್ಲದ ವಾಹನಗಳಿಗೆ ವಿಧಿಸುವ ದಂಡವನ್ನು 10 ಸಾವಿರದಿಂದ 3 ಸಾವಿರ ರೂಪಾಯಿಗಳಿಗೆ ಇಳಿಸಲಾಗಿದೆ.

ಕರ್ನಾಟಕದಲ್ಲೂ ದಂಡ ಪರಿಷ್ಕರಣೆ ಪ್ರಸ್ತಾವ ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News