“ಯುವಜನರು ರೋಟಿಗಿಂತ ಪಿಝಾ ಇಷ್ಟಪಡುವುದರಿಂದ ಕೃಷಿ ಕ್ಷೇತ್ರದ ಬಿಕ್ಕಟ್ಟು”

Update: 2019-09-11 10:30 GMT

ಹೊಸದಿಲ್ಲಿ, ಸೆ.11: ಇಪ್ಪತ್ತೊಂದನೇ ಶತಮಾನದ ಯುವಜನತೆ ಓಲಾ, ಉಬರ್ ಕ್ಯಾಬ್ ಗಳ ಬಳಕೆ ಹೆಚ್ಚು ಮಾಡಿದ್ದೇ ಆಟೋಮೊಬೈಲ್ ಕ್ಷೇತ್ರದ ಬಿಕ್ಕಟ್ಟಿಗೆ ಕಾರಣ ಎಂಬ ಸಬೂಬು ನೀಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾಜಿಕ ಜಾಲತಾಣಿಗರಿಂದ ತೀವ್ರ ಟ್ರೋಲ್‍ಗೊಳಗಾಗಿದ್ದಾರೆ.

#BoycottMillennials  ಹ್ಯಾಶ್ ಟ್ಯಾಗ್ ಕೂಡ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ “ಯುವಜನತೆ ಬೆಳಗ್ಗೆ ಹೆಚ್ಚು ಆಮ್ಲಜನಕ ಒಳಕ್ಕೆಳೆದುಕೊಳ್ಳುತ್ತಿರುವುದರಿಂದ ಆಕ್ಸಿಜನ್ ಬಿಕ್ಕಟ್ಟು ಎದುರಾಗಬಹುದು'' ಎಂದು ಟ್ರೋಲ್ ಮಾಡಿದ್ದಾರೆ.

“ಯುವಜನತೆ ಹೆಚ್ಚು ನೀರು ಕುಡಿಯುವುದರಿಂದ ನೀರಿನ ಸಮಸ್ಯೆ, ಯುವಜನತೆ ಹೆಚ್ಚು ಓಯೋ ಹಾಗೂ ಏರ್‍ ಬಿಎನ್‍ ಬಿ ಬಳಸುವುದರಿಂದ ರಿಯಲ್ ಎಸ್ಟೇಟ್ ಕ್ಷೇತ್ರದ ಬಿಕ್ಕಟ್ಟು, ಯುವಜನತೆ ಪ್ರಯಾಣಿಸುವುದಕ್ಕಿಂತ ಹೆಚ್ಚು ವೀಡಿಯೋ ಕಾಲ್ ಮಾಡುವುದರಿಂದ ವಾಯುಯಾನ ಕ್ಷೇತ್ರದ ಬಿಕ್ಕಟ್ಟು, ಯುವಜನತೆ ಬಿಟ್ ಕಾಯಿನ್  ಬಳಸುವುದರಿಂದ ರೂಪಾಯಿ ಮೌಲ್ಯ ಕುಸಿತ'' ಎಂದು  ಒಬ್ಬ ಟ್ವಿಟರಿಗರು ಟ್ವೀಟ್ ಮಾಡಿದ್ದಾರೆ.

“21ನೇ ಶತಮಾನದ ಯುವಕರು ದಾಲ್ ರೋಟಿಗಿಂತ ಪಿಝಾ ಇಷ್ಟ ಪಡುವುದರಿಂದ ಕೃಷಿ ಕ್ಷೇತ್ರ ಬಿಕ್ಕಟ್ಟು ಎದುರಿಸುತ್ತಿದೆ'' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

“ನಿರ್ಮಲಾ ಸೀತಾರಾಮನ್ ಅವರನ್ನು ಈ 30+ ಅಂಕಲ್‍ಗಳು ಏಕೆ ಟ್ರೋಲ್ ಮಾಡುತ್ತಿದ್ದಾರೆಂದು ತಿಳಿದಿಲ್ಲ. ನಾನು 21ನೇ ಶತಮಾನದ ಯುವಕ, ನಾನು ನನ್ನದೇ ಕಾರು ಹೊಂದುವುದರ ಬದಲು ಓಲಾ, ಉಬರ್ ಆಯ್ಕೆ ಮಾಡುತ್ತೇನೆ, ಇಂಧನದ ಖರ್ಚು, ನಿರ್ವಹಣಾ ವೆಚ್ಚ, ವಿಮೆಯ ತಲೆ ಬಿಸಿಯಿಲ್ಲ, ನನ್ನ ಹಲವು ಸ್ನೇಹಿತರಿಗೂ ಇದು ಅನ್ವಯಿಸುತ್ತದೆ'' ಎಂದು ಒಬ್ಬ ಟ್ವಿಟರಿಗ ಸಚಿವೆಯ ಹೇಳಿಕೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News