ತ್ರಿಪುರಾದ ಲೆನಿನ್, ವೇದಾರಣ್ಯದ ಅಂಬೇಡ್ಕರ್ ಮತ್ತು ಭಾರತದ ಶೋಷಿತರು

Update: 2019-09-11 18:28 GMT

ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸವಾದಾಗ ದಲಿತರು ಪ್ರತಿಭಟಿಸಿದ್ದರೇ ಎಂದು ಪ್ರಶ್ನಿಸುವ ಕಮ್ಯುನಿಸ್ಟರು ಮತ್ತು ವೇದಾರಣ್ಯಂನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸವಾದಾಗ ಕಮ್ಯುನಿಸ್ಟರು ಪ್ರತಿಭಟನೆ ನಡೆಸಿದ್ದರೇ ಎಂದು ಕೇಳುವ ದಲಿತರು ಈ ಎರಡೂ ಪ್ರತಿಮೆಗಳನ್ನು ಸಾಂಕೇತಿಕವಾಗಿ ನೋಡದೆ ಆಳುವ ವರ್ಗಗಳಲ್ಲಿ, ಪ್ರಭುತ್ವದ ವಲಯದಲ್ಲಿ ಭೀತಿ ಹುಟ್ಟಿಸುವ ಒಂದು ಶಕ್ತಿಯಾಗಿ ಗೋಚರಿಸುವುದನ್ನು ಗಮನಿಸಬೇಕಿದೆ. ಇಲ್ಲಿ ಪರಸ್ಪರ ಮುಖಾಮುಖಿಯಾಗಿ ಪ್ರಶ್ನೆಗಳ ಸಂಘರ್ಷ ನಡೆಸುವುದಕ್ಕಿಂತಲೂ ಕೈಜೋಡಿಸಿ ಉತ್ತರಗಳ ಶೋಧದಲ್ಲಿ ತೊಡಗುವುದು ನಮ್ಮ ಆದ್ಯತೆಯಾಗಬೇಕಿದೆ.

ಕಳೆದ ವರ್ಷ ತ್ರಿಪುರಾದಲ್ಲಿ ರಶ್ಯ ಕ್ರಾಂತಿಯ ರೂವಾರಿ ಲೆನಿನ್‌ನ ಪ್ರತಿಮೆಯನ್ನು ಕೆಲವು ಕಿಡಿಗೇಡಿಗಳು ಧ್ವಂಸ ಮಾಡಿದಾಗ ದೇಶದ ಪ್ರಜ್ಞಾವಂತ ನಾಗರಿಕ ಪ್ರಜ್ಞೆಗೆ ಆಘಾತವಾಗಿತ್ತು. ಆದರೆ ಅಚ್ಚರಿಯೇನೂ ಉಂಟಾಗಿರಲಿಲ್ಲ. ಪ್ರತಿಮೆಗಳನ್ನು ಧ್ವಂಸ ಮಾಡುವ ಪರಂಪರೆಗೆ ಆ ವೇಳೆಗಾಗಲೇ ಕಾಲು ಶತಮಾನದಷ್ಟು ವಯಸ್ಸಾಗಿತ್ತು. ಇಷ್ಟಕ್ಕೂ ಮಾರ್ಕ್ಸ್, ಏಂಗೆಲ್ಸ್ ಮತ್ತು ಲೆನಿನ್ ಅವರನ್ನು ಹಾರ ತುರಾಯಿಗಳಿಂದ ಆರಾಧಿಸುವ ಉಪಾಸಕರೂ ಅಲ್ಲಿ ಇರಲಿಲ್ಲ. ಲೆನಿನ್‌ನ ಪ್ರತಿಮೆ ಒಂದು ಸಾಂಕೇತಿಕ ಅಭಿವ್ಯಕ್ತಿಯಾಗಿ, ಶ್ರಮಜೀವಿಗಳ ಬೆವರಿನ ಸಂಕೇತವಾಗಿ ಮತ್ತು ಹೋರಾಟದ ಸಾಂತ್ವನ ಚಿಲುಮೆಯಾಗಿ ಒಂದೆಡೆ ನಿಂತಿತ್ತು. ಪ್ರತಿಮೆ ಬಿದ್ದು ಹೋದ ಕೂಡಲೇ ಹೋರಾಟದ ಚಿಲುಮೆಯೂ ಬತ್ತಿಹೋಗಲಿಲ್ಲ, ಶ್ರಮಜೀವಿಗಳ ಬೆವರೂ ಕಡಿಮೆಯಾಗಲಿಲ್ಲ ಅಥವಾ ಲೆನಿನ್ ಅಪ್ರಸ್ತುತನೂ ಆಗಲಿಲ್ಲ. ಲೆನಿನ್ ಪ್ರತಿಪಾದಿಸಿದ ಸಿದ್ಧಾಂತದಲ್ಲಿ ನಂಬಿಕೆ ಇದ್ದ ಕೆಲವೇ ಜನಪ್ರತಿನಿಧಿಗಳ ನಿಷ್ಠೆ ಬದಲಾಗಿದ್ದೂ ಉಂಟು ಆದರೆ ಶ್ರಮಜೀವಿಗಳ ಬದುಕು ಬದಲಾಗಲೂ ಇಲ್ಲ ಅವರ ನಿಷ್ಠೆಯೂ ಬದಲಾಗಲಿಲ್ಲ. ಒಂದು ಪ್ರತಿಮೆಯ ಸ್ಥಾಪನೆಯ ಹಿಂದೆ ಭಾವನೆಗಳು ಮಾತ್ರವೇ ಇರುತ್ತದೆ. ಪ್ರತಿಮೆಯ ಧ್ವಂಸ ಮಾಡುವುದರಿಂದ ಭಾವನೆಗಳಿಗೆ ಧಕ್ಕೆ ಉಂಟಾಗಬಹುದು ಆದರೆ ತತ್ವಾದರ್ಶಗಳು ಘಾಸಿಗೊಳ್ಳುವುದಿಲ್ಲ. ವಿಧ್ವಂಸಕರಿಗೆ ಈ ಸೂಕ್ಷ್ಮಗಳು ಅರಿವಾಗುವುದೂ ಇಲ್ಲ.

ಇತ್ತೀಚೆಗೆ ಮತ್ತೊಂದು ಪ್ರತಿಮೆಯ ಶಿರಚ್ಛೇದನ ಮತ್ತು ಧ್ವಂಸ ಸಂಭವಿಸಿದೆ. ಈ ಬಾರಿ ಶೋಷಿತ ವರ್ಗಗಳ ಮತ್ತೊಂದು ಸಾಂತ್ವನದ ಚಿಲುಮೆ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ದಾಳಿಗೊಳಗಾಗಿದೆ. ತಮಿಳುನಾಡಿನ ವೇದಾರಣ್ಯಂನಲ್ಲಿ ನಡೆದ ಈ ಘಟನೆ ಮತ್ತೊಮ್ಮೆ ದೇಶದ ಪ್ರಜ್ಞಾವಂತ ನಾಗರಿಕರ ಪ್ರಜ್ಞೆಯನ್ನು ಘಾಸಿಗೊಳಿಸಿದೆ. ಭಾರತದ ಸಂದರ್ಭದಲ್ಲಿ ಲೆನಿನ್ ಪ್ರತಿಮೆಗೂ, ಗಾಂಧಿ ಪ್ರತಿಮೆಗೂ, ಅಂಬೇಡ್ಕರ್ ಪ್ರತಿಮೆಗೂ ವ್ಯತ್ಯಾಸವಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡೇ ಇಂತಹ ಘಟನೆಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಲೆನಿನ್ ಪ್ರತಿಮೆ ಧ್ವಂಸವಾದ ಸಂದರ್ಭದಲ್ಲಿ ಕಂಡುಬಂದ ಆಕ್ರೋಶ, ಸಿಟ್ಟು ಮತ್ತು ಆಪಾದನೆಗಳನ್ನು ಅಂಬೇಡ್ಕರ್ ಪ್ರತಿಮೆಯ ಮುಂದಿಟ್ಟು ವಾದಿಸುವ ಅವಶ್ಯಕತೆಯೂ ಇಲ್ಲ ಎನಿಸುತ್ತದೆ. ಏಕೆಂದರೆ ಈ ದೇಶದ ಶೋಷಿತ ಜನಸಮುದಾಯಗಳು, ಅಸ್ಪಶ್ಯರು, ದಲಿತರು ಅಂಬೇಡ್ಕರ್ ಅವರ ಪ್ರತಿಮೆಯಲ್ಲಿಯೂ ತಮ್ಮ ಅಸ್ಮಿತೆಯನ್ನು ಕಂಡುಕೊಳ್ಳುತ್ತಾರೆ. ಪ್ರತಿಮೆ, ಆರಾಧನೆ ಇತ್ಯಾದಿ ವಿಚಾರಗಳು ಚರ್ಚಾಸ್ಪದವಾದರೂ, ಅಂಬೇಡ್ಕರ್ ಅವರ ಪ್ರತಿಮೆಯ ಹಿಂದೆ ಒಂದು ಇಡೀ ಜನಸಮುದಾಯದ ಆಶೋತ್ತರಗಳ ಬಿಸಿಯುಸಿರು ಅಡಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿಯೇ ಅಂಬೇಡ್ಕರ್ ಅವರ ಆರಾಧನೆ ಹೆಚ್ಚಾದಂತೆಲ್ಲಾ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವ ಉನ್ಮತ್ತ ಮನಸ್ಸುಗಳು ಜಾಗೃತಗೊಳ್ಳುತ್ತಿರುತ್ತವೆ. ಏಕೆಂದರೆ ಲೆನಿನ್ ಈ ದೇಶದ ದುಡಿಯುವ ವರ್ಗಗಳ ಸಾಕ್ಷಿಪ್ರಜ್ಞೆಯಾದರೆ ಅಂಬೇಡ್ಕರ್ ಈ ದೇಶದ ಸಮಸ್ತ ಶೋಷಿತ ವರ್ಗಗಳ ಸಾಕ್ಷಿಪ್ರಜ್ಞೆಯಾಗಿ ನಿಲ್ಲುತ್ತಾರೆ.

ವೇದಾರಣ್ಯಂನಲ್ಲಿ ನಡೆದ ವಿಧ್ವಂಸಕ ಘಟನೆ ಮತ್ತು ತ್ರಿಪುರಾದಲ್ಲಿ ನಡೆದ ಘಟನೆಯ ನಡುವೆ ಸಾಮ್ಯತೆ ಕಂಡುಬರುವುದು ವಿಧ್ವಂಸಕರ ಉದ್ದೇಶದಲ್ಲಿ ಮಾತ್ರ ಎನ್ನುವುದನ್ನು ಗಮನಿಸಬೇಕು. ಭಾರತ ಇಂದು ಎದುರಿಸುತ್ತಿರುವ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಇಬ್ಬರೂ ಮಹಾನ್ ವ್ಯಕ್ತಿಗಳ ಚಿಂತನೆಗಳು ಜನಸಾಮಾನ್ಯರಿಗೆ ನಿಕಟವಾದಷ್ಟೇ ತೀಕ್ಷ್ಣವಾಗಿ ಆಳುವ ವರ್ಗಗಳಿಗೆ ಅಥವಾ ಆಳುವವರ ಹಿಂಬಾಲಕರಿಗೆ ಅಪಥ್ಯವಾಗುತ್ತದೆ. ಭಾರತದ ಬಹುಸಂಖ್ಯಾತ ಜನತೆ ಸಮಾನತೆಯನ್ನು ಬಯಸುತ್ತಿದೆ. ಜಾತಿ ಸಂಕೋಲೆಗಳಿಂದ, ಜಾತಿ ವ್ಯವಸ್ಥೆಯ ದಾಸ್ಯದಿಂದ ಮತ್ತು ಅಸ್ಪಶ್ಯತೆಯಿಂದ ವಿಮುಕ್ತಿಗಾಗಿ ಹಂಬಲಿಸುತ್ತಿದೆ. ಹಾಗೆಯೇ ಸಮಾಜದಲ್ಲಿ ಶಾಂತಿ ಸೌಹಾರ್ದದಿಂದ ಬದುಕಲು ಸಮಾಜೋ ಆರ್ಥಿಕ ಸ್ವಾತಂತ್ರ್ಯವನ್ನೂ ಬಯಸುತ್ತಿದೆ. ಈ ಬಯಕೆಗಳನ್ನು ಈಡೇರಿಸಲೆಂದೇ ರೂಪಿಸಲಾಗಿದ್ದ ಭಾರತದ ಸಂವಿಧಾನ ಇಂದು ನವ ಭಾರತದ ಸಂದರ್ಭದಲ್ಲಿ ತನ್ನ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸ್ವಾಯತ್ತತೆಯ ಸಾಂವಿಧಾನಿಕ ಆಶಯಗಳು ಸದ್ದಿಲ್ಲದೆ ಮೂಲೆಗುಂಪಾಗುತ್ತಿದ್ದು, ಸಂವಿಧಾನವನ್ನು ಬದಲಾಯಿಸದೆಯೇ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ.

ಭಾರತ ಎರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದು ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ಉಲ್ಬಣಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಮಾರುಕಟ್ಟೆ ವ್ಯತ್ಯಯ. ಎರಡನೆಯದು ಈ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ನಲುಗಿಹೋಗುತ್ತಿರುವ ಬಹುಸಂಖ್ಯಾತ ಶ್ರಮಜೀವಿಗಳ ಸಾಮಾಜಿಕ ಜೀವನದಲ್ಲಿ ಉಂಟಾಗುತ್ತಿರುವ ವ್ಯತ್ಯಯಗಳು. ಈ ಬಹುಸಂಖ್ಯಾತರಲ್ಲಿ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಮತ್ತು ಅಸ್ಪಶ್ಯರೇ ಹೆಚ್ಚಾಗಿರುವುದನ್ನು ಗಮನಿಸದೆ ಹೋದಲ್ಲಿ ಬಹುಶಃ ನಮ್ಮ ದೃಷ್ಟಿ ಮಸುಕಾಗಿದೆ ಎಂದೇ ಭಾವಿಸಬೇಕಾಗುತ್ತದೆ. ದೇಶಾದ್ಯಂತ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಗಳ ಹಿಂದೆ ಸಾಮಾಜಿಕ ಕಾರಣಗಳಿಗಿಂತಲೂ ಆರ್ಥಿಕ ಕಾರಣಗಳೇ ಪ್ರಧಾನವಾಗಿ ಕಂಡುಬರುತ್ತಿವೆ. ಮಹಾರಾಷ್ಟ್ರದ ಮರಾಠರು, ಗುಜರಾತಿನ ಪಟೇಲರು, ರಾಜಸ್ಥಾನದ ಗುಜ್ಜರರು ಹೀಗೆ ಸಾಮಾಜಿಕವಾಗಿ ಮೇಲ್ ಸ್ತರದಲ್ಲಿರುವ ಮತ್ತು ಶೋಷಕ ವ್ಯವಸ್ಥೆಯ ಒಂದು ಭಾಗವಾಗಿರುವ ಜಾತಿ ಸಮುದಾಯಗಳೂ ಮೀಸಲಾತಿ ಸೌಲಭ್ಯಕ್ಕಾಗಿ ಹೋರಾಡುತ್ತಿವೆ. ಇದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವ್ಯತಿರಿಕ್ತವಾಗಿ ಕಂಡರೂ, ಆಯಾ ಪ್ರದೇಶದ ಆರ್ಥಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಸ್ವೀಕೃತವಾಗಿಯೇ ಕಂಡುಬಂದಿದೆ. ನವ ಉದಾರವಾದ ಸ್ಥಾಪಿತ ವ್ಯವಸ್ಥೆಯನ್ನು ಸಮರ್ಥಿಸುವವರಲ್ಲೂ ಅಭದ್ರತೆ ಸೃಷ್ಟಿಸುತ್ತಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ.

ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಆಧಿಪತ್ಯದಲ್ಲಿ ಭಾರತ ಹಾದುಹೋಗುತ್ತಿರುವ ನಾಲ್ಕನೆಯ ಔದ್ಯಮಿಕ ಕ್ರಾಂತಿ ಈ ದೇಶದ ಶ್ರಮಜೀವಿಗಳ ಪಾಲಿಗೆ ನರಕಸದೃಶವಾಗಲಿದೆ. ಶ್ರಮಿಕ ರಹಿತ ಅಭಿವೃದ್ಧಿಯ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಭಾರತ ಈಗಾಗಲೇ ಸಾರ್ವಜನಿಕ ಉದ್ದಿಮೆಗಳ ಸಮಾಧಿಯನ್ನು ನಿರ್ಮಿಸಲಾರಂಭಿಸಿದೆ. ಜಲಸಂಪನ್ಮೂಲಗಳನ್ನೂ ಕಾರ್ಪೊರೇಟ್ ಉದ್ಯಮಿಗಳಿಗೆ ವಹಿಸುವ ನಿಟ್ಟಿನಲ್ಲಿ ಜಲಸಂರಕ್ಷಣ್ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು ಕ್ಷಿಪ್ರಗತಿಯಲ್ಲಿ ನಡೆಯಲಿದ್ದು ಡಿಜಿಟಲೀಕರಣಗೊಂಡ ಬ್ಯಾಂಕುಗಳು ಹೊರಗುತ್ತಿಗೆಯ ಆಧಾರದ ಮೇಲೆಯೇ ಕಾರ್ಯ ನಿರ್ವಹಿಸಲಿದ್ದು, ಯಾಂತ್ರೀಕರಣದ ಮೂಲಕವೇ ಗ್ರಾಹಕರ ಸೇವೆ ಸಲ್ಲಿಸಲು ಸಜ್ಜಾಗುತ್ತಿವೆ. ದೇಶದ ಅತಿ ದೊಡ್ಡ ಸಾರ್ವಜನಿಕ ಸಂಸ್ಥೆಯಾದ ರೈಲ್ವೆ ಇಲಾಖೆಯ ಖಾಸಗೀಕರಣ ಈಗಾಗಲೇ ಆರಂಭವಾಗಿದ್ದು ಮೂರು ಲಕ್ಷಕ್ಕೂ ಹೆಚ್ಚು ನೌಕರರು ಅನಿಶ್ಚಿತ ಭವಿಷ್ಯ ಎದುರಿಸುತ್ತಿದ್ದಾರೆ. ಖಾಸಗಿ ಕ್ಷೇತ್ರದ ಬಹುತೇಕ ಉದ್ಯಮಗಳು ನಷ್ಟ ಅನುಭವಿಸುತ್ತಿದ್ದು ಕೈಗಾರಿಕೆಗಳು, ಉತ್ಪಾದನಾ ಘಟಕಗಳು ಮುಚ್ಚಿಹೋಗುತ್ತಿವೆ. ಭಾವನಾತ್ಮಕ ರಾಜಕಾರಣ ಮತ್ತು ಉನ್ಮತ್ತ ರಾಷ್ಟ್ರೀಯತೆಯ ಮೂಲಕ ದುಡಿಯುವ ವರ್ಗಗಳನ್ನು ವಶೀಕರಣಗೊಳಿಸುವ ತಂತ್ರಗಾರಿಕೆ ಎಷ್ಟೇ ಫಲಪ್ರದವಾದರೂ, ದುಡಿಯುವ ವರ್ಗಗಳ ಬದುಕು ಸಾವಿನ ಪ್ರಶ್ನೆ ಎದುರಾದಾಗ ಆಳುವವರು ತೀವ್ರ ಪ್ರತಿರೋಧ ಎದುರಿಸಲೇಬೇಕಾಗುತ್ತದೆ. ಇದು ಚಾರಿತ್ರಿಕ ಸತ್ಯ ಅಷ್ಟೇ ಅಲ್ಲ, ಐರೋಪ್ಯ ರಾಷ್ಟ್ರಗಳಲ್ಲಿ ಮತ್ತು ಪಶ್ಚಿಮದ ದೇಶಗಳಲ್ಲಿ ಈಗಾಗಲೇ ಸಂಭವಿಸುತ್ತಿದ್ದು, ಭಾರತವೂ ಹೊರತಾಗುವುದಿಲ್ಲ. ಇಲ್ಲಿ ಮಾರ್ಕ್ಸ್ ಮತ್ತು ಲೆನಿನ್ ಆಳುವ ವರ್ಗಗಳ ಕಾಲಾಳುಗಳಿಗೆ ಹಗಲಿರುಳೂ ಕಾಡುವ ಭೂತದಂತೆ ಕಾಣುತ್ತಾರೆ.

ಮತ್ತೊಂದೆಡೆ ಭಾರತದ ಸಂದರ್ಭದಲ್ಲಿ ಶ್ರಮಜೀವಿಗಳು ಎಂದರೆ ಸಹಜವಾಗಿಯೇ ದಲಿತರು, ಅಸ್ಪಶ್ಯರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು ಕಣ್ಣೆದುರು ನಿಲ್ಲುತ್ತಾರೆ. ಭಾರತದ ಅರ್ಥವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನ ಗಳಿಸಿದ್ದರೆ ಅದರ ಶ್ರೇಯ ಈ ಶ್ರಮಜೀವಿಗಳಿಗೆ ಸಲ್ಲುವುದೇ ಹೊರತು ಕಳೆದ ಹತ್ತು ವರ್ಷಗಳಲ್ಲಿ ಉದ್ಭವಿಸಿರುವ ಬೆರಳೆಣಿಕೆಯಷ್ಟಿರುವ ಕೋಟ್ಯಧಿಪತಿಗಳಿಗಲ್ಲ. ಇಂದು ಭಾರತದ ಶೇ. 73ರಷ್ಟು ಸಂಪತ್ತು ಶೇ. 1ರಷ್ಟು ಜನರ ಕೈಯಲ್ಲಿದೆ. ದೇಶದ ಶೇ. 60ಕ್ಕಿಂತಲೂ ಹೆಚ್ಚು ಜನರು ನಾಳಿನ ಕೂಳಿಗಾಗಿ ಚಿಂತಿಸುವ ಸ್ಥಿತಿಯಲ್ಲಿದ್ದಾರೆ. ಆದರೂ ಮಾರುಕಟ್ಟೆಯಲ್ಲಿ ಭಾರತ ಪ್ರಕಾಶಿಸುತ್ತಿದ್ದರೆ ಅದು ಅರ್ಥಶಾಸ್ತ್ರೀಯ ಅಂಕಿಅಂಶಗಳಲ್ಲಿ ಮಾತ್ರ ಅಥವಾ ಷೇರು ಮಾರುಕಟ್ಟೆಯ ಸೂಚ್ಯಂಕಗಳಲ್ಲಿ ಮಾತ್ರ. ದೇಶದ ಒಟ್ಟು ಉತ್ಪನ್ನದ ಪ್ರಮಾಣವೇ ಆರ್ಥಿಕ ಪ್ರಗತಿಯ ಸೂಚಕವಾಗಿ ಪರಿಗಣಿಸುವ ಆಳುವ ವರ್ಗಗಳಿಗೆ ಈ ಉತ್ಪನ್ನದ ಹಿಂದಿರುವ ಉತ್ಪಾದಕೀಯ ಶಕ್ತಿಗಳ ಶ್ರಮ ಮತ್ತು ಬದುಕು ಕಾಣದೆ ಇರುವುದರಿಂದಲೇ, ಈ ದೇಶದ ಅಸ್ಪಶ್ಯರು, ದಲಿತರು, ಆದಿವಾಸಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವಂತಹ ಸನ್ನಿವೇಶ ಎದುರಾಗಿದೆ. ನೂರು ವರ್ಷಗಳ ಮೀಸಲಾತಿಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಮೀಸಲಾತಿ ಸೌಲಭ್ಯ ಪಡೆದ ಒಂದು ವರ್ಗ ಸಂತಸದಿಂದ ನಲಿಯುತ್ತಿದ್ದರೆ ಮೀಸಲಾತಿಯ ಸೋಂಕೂ ಇಲ್ಲದೆ ಬಳಲುತ್ತಿರುವ ಮತ್ತೊಂದು ಶೋಷಿತ ವರ್ಗ ಸಂಕಷ್ಟದಲ್ಲಿ ನುಲಿಯುತ್ತಿದೆ.

ಈ ಅವಕಾಶವಂಚಿತ ಸಮುದಾಯಗಳ ಆಗ್ರಹಗಳು ಆಳುವ ವರ್ಗಗಳಿಗೆ ಅಪಾಯಕಾರಿಯಾಗಿ ಕಾಣುತ್ತವೆ. ಇದರೊಂದಿಗೆ ನವ ಉದಾರವಾದಿ ನೀತಿಗಳ ಪರಿಣಾಮ ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುತ್ತಿರುವ ಬುಡಕಟ್ಟು ಸಮುದಾಯಗಳು, ಆದಿವಾಸಿಗಳು ಮತ್ತು ಅಭಿವೃದ್ಧಿ ಯೋಜನೆಗಳಿಂದ ತಮ್ಮ ನಾಳಿನ ಭರವಸೆಯನ್ನೇ ಕಳೆದುಕೊಳ್ಳುತ್ತಿರುವ ಗ್ರಾಮೀಣ ಜನತೆ ತಮ್ಮ ಹಕ್ಕೊತ್ತಾಯಗಳನ್ನು ಬಲವಾಗಿ ಮಂಡಿಸುವ ದಿನಗಳು ಎದುರಾಗುತ್ತಿವೆ. ಈ ಜನಸಮುದಾಯಗಳ ನೊಂದ ಮನಸ್ಸು ಸಹ ಆಳುವ ವರ್ಗಗಳಿಗೆ ಅಪಾಯಕಾರಿಯಾಗಿಯೇ ಕಾಣುತ್ತದೆ. ಹಾಗಾಗಿಯೇ ಭೀಮ ಕೋರೆಗಾಂವ್‌ನಂತಹ ಚಾರಿತ್ರಿಕ ಸಂದರ್ಭದ ಆಚರಣೆಯೂ ನಗರ ನಕ್ಸಲರ ಹೆಸರಿನಲ್ಲಿ ಅಪಕೀರ್ತಿ ಪಡೆದುಬಿಡುತ್ತದೆ. ಈ ಜನಸಮುದಾಯಗಳ ಬದುಕಿನ ಪ್ರಶ್ನೆಗೆ ಆರ್ಥಿಕ ನೆಲೆಯಲ್ಲಿ ಮಾರ್ಕ್ಸ್ ಮತ್ತು ಲೆನಿನ್, ಸಮಾಜೋ ಸಾಂಸ್ಕೃತಿಕ ನೆಲೆಯಲ್ಲಿ ಅಂಬೇಡ್ಕರ್ ಬೆಳಕಿನ ಕಿರಣಗಳಂತೆ ಕಂಡುಬರುತ್ತಾರೆ. ಇಂದಿಗೂ ಅಸ್ಪಶ್ಯ ಸಮುದಾಯಗಳು ಮತ್ತು ದಲಿತ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ ತಾರತಮ್ಯ, ಶೋಷಣೆ ಮತ್ತು ದೌರ್ಜನ್ಯ ತಳಮಟ್ಟದ ಜನತೆಯನ್ನು ಅಂಬೇಡ್ಕರರತ್ತ ಕರೆದೊಯ್ಯುತ್ತದೆ. ಇಲ್ಲಿ ಅಂಬೇಡ್ಕರ್ ಆಳುವ ವರ್ಗಗಳಿಗೆ ಮತ್ತು ಅವರ ಕಾಲಾಳುಗಳಿಗೆ ಹಗಲಿರುಳೂ ಕಾಡುವ ಭೂತದಂತೆ ಕಾಣುತ್ತಾರೆ.

ತ್ರಿಪುರಾದಲ್ಲಿ ಲೆನಿನ್ ಪ್ರತಿಮೆ ಧ್ವಂಸವಾದಾಗ ದಲಿತರು ಪ್ರತಿಭಟಿಸಿದ್ದರೇ ಎಂದು ಪ್ರಶ್ನಿಸುವ ಕಮ್ಯುನಿಸ್ಟರು ಮತ್ತು ವೇದಾರಣ್ಯಂನಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸವಾದಾಗ ಕಮ್ಯುನಿಸ್ಟರು ಪ್ರತಿಭಟನೆ ನಡೆಸಿದ್ದರೇ ಎಂದು ಕೇಳುವ ದಲಿತರು ಈ ಎರಡೂ ಪ್ರತಿಮೆಗಳನ್ನು ಸಾಂಕೇತಿಕವಾಗಿ ನೋಡದೆ ಆಳುವ ವರ್ಗಗಳಲ್ಲಿ, ಪ್ರಭುತ್ವದ ವಲಯದಲ್ಲಿ ಭೀತಿ ಹುಟ್ಟಿಸುವ ಒಂದು ಶಕ್ತಿಯಾಗಿ ಗೋಚರಿಸುವುದನ್ನು ಗಮನಿಸಬೇಕಿದೆ. ಇಲ್ಲಿ ಪರಸ್ಪರ ಮುಖಾಮುಖಿಯಾಗಿ ಪ್ರಶ್ನೆಗಳ ಸಂಘರ್ಷ ನಡೆಸುವುದಕ್ಕಿಂತಲೂ ಕೈಜೋಡಿಸಿ ಉತ್ತರಗಳ ಶೋಧದಲ್ಲಿ ತೊಡಗುವುದು ನಮ್ಮ ಆದ್ಯತೆಯಾಗಬೇಕಿದೆ. ಸಾಮಾಜಿಕ ದೌರ್ಜನ್ಯ, ಸಾಂಸ್ಕೃತಿಕ ತಾರತಮ್ಯ, ಆರ್ಥಿಕ ಶೋಷಣೆ ಎಲ್ಲವನ್ನೂ ಎದುರಿಸುತ್ತಿರುವ ಬೃಹತ್ ಜನಸಮುದಾಯಗಳು ನವ ಉದಾರವಾದದ ಫಲಾನುಭವಿಗಳೂ ಆಗದೆ, ಸಾಮಾಜಿಕ ನ್ಯಾಯದ ಫಲಾನುಭವಿಗಳೂ ಆಗದೆ ಅನಿಶ್ಚಿತ ಬದುಕು ಎದುರಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ದುರಂತ ಎಂದರೆ ಸ್ಥಾಪಿತ ವ್ಯವಸ್ಥೆಯೊಡನೆ ಗುರುತಿಸಿಕೊಳ್ಳಲು ತವಕಿಸುತ್ತಿರುವ ಸಾಮಾಜಿಕ ನ್ಯಾಯದ ಫಲಾನುಭವಿಗಳು ಈ ಅವಕಾಶವಂಚಿತರಿಗೆ ವಿಮುಖರಾಗುತ್ತಿದ್ದಾರೆ.

ಮತ್ತೊಂದೆಡೆ ಸಮಾಜವಾದಿ ಆರ್ಥಿಕ ನೀತಿಯ ಫಲಾನುಭವಿಗಳಾಗಿ ಮೂರು ಪೀಳಿಗೆಗಳ ಬದುಕಿನ ಸುದಿನಗಳನ್ನು ಕಂಡು ಇಂದು ಮಧ್ಯಮ ವರ್ಗವಾಗಿ ರೂಪುಗೊಂಡಿರುವ ಈ ದೇಶದ ಸಂಘಟಿತ ಕಾರ್ಮಿಕ ವರ್ಗ ಹೋರಾಟದ ಮಾರ್ಗಗಳಿಂದ ವಿಮುಖವಾಗಿದೆ. ಸ್ವಹಿತಾಸಕ್ತಿಯನ್ನು ಹೊರತುಪಡಿಸಿ ಮತ್ತಾವುದೇ ಸಮಸ್ಯೆಗೆ ಸ್ಪಂದಿಸದಷ್ಟು ಮಟ್ಟಿಗೆ ನಿಷ್ಕ್ರಿಯತೆ ಈ ದೇಶದ ಸಂಘಟಿತ ಕಾರ್ಮಿಕರಲ್ಲಿ ಮನೆ ಮಾಡಿದೆ. ಎಡಪಂಥೀಯ ಕಾರ್ಮಿಕ ಸಂಘಟನೆಗಳ ಹೋರಾಟಗಳ ಸಂದರ್ಭದಲ್ಲಿ ಕಾಣುವ ಕೆಂಬಾವುಟ ಹಿಡಿದ ಲಕ್ಷಾಂತರ ಕಾರ್ಮಿಕರು ಚುನಾವಣೆಗಳ ಸಂದರ್ಭದಲ್ಲಿ ಕೇಸರಿ ಪಡೆಗಳ ಕಾಲಾಳುಗಳಾಗಿ ದುಡಿಯುವುದು ಸಹಜ ಪ್ರಕ್ರಿಯೆಯಾಗಿಬಿಟ್ಟಿದೆ. ಶ್ರಮಜೀವಿಗಳ ಹೋರಾಟದ ಮುಂಚೂಣಿ ನಾಯಕತ್ವ ವಹಿಸಬೇಕಾದ ಸಂಘಟಿತ ಕಾರ್ಮಿಕ ವಲಯ ಬಹುತೇಕವಾಗಿ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದೇ ಅಲ್ಲದೆ, ಸಾಮಾಜಿಕ ನ್ಯಾಯ, ಸಮ ಸಮಾಜ ಮತ್ತು ಶೋಷಣೆ ಮುಕ್ತ ಸಮಾಜದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದೆ. ಇದು ನವ ಉದಾರವಾದ ಮತ್ತು ಉನ್ಮತ್ತ ರಾಷ್ಟ್ರೀಯತೆಯ ಪ್ರತಿಪಾದಕರಿಗೆ ವರದಾನವಾಗಿ ಪರಿಣಮಿಸಿದೆ.

ಈ ಸಂದರ್ಭದಲ್ಲಿ ನಮ್ಮ ಆದ್ಯತೆಗಳೇನು? ವೇದಾರಣ್ಯಂನ ಅಂಬೇಡ್ಕರ್, ತ್ರಿಪುರಾದ ಲೆನಿನ್ ಈ ಎರಡೂ ಪ್ರತಿಮೆಗಳ ಧ್ವಂಸದ ಹಿಂದೆ ಒಂದು ಸಿದ್ಧಾಂತವಿದೆ. ಈ ಸಿದ್ಧಾಂತದ ಪ್ರತಿಪಾದಕರು ಭಾರತದ ಚಿತ್ರಣವನ್ನೇ ಬದಲಿಸಲು ಯತ್ನಿಸುತ್ತಿದ್ದಾರೆ. ತಮಿಳುನಾಡಿನ ಜೈ ಭೀಮ್, ತ್ರಿಪುರಾದ ಲಾಲ್ ಸಲಾಂ ಕೇವಲ ಪ್ರತಿಮೆಗಳನ್ನೇ ಅವಲಂಬಿಸಿದ ಘೋಷಣೆಗಳಲ್ಲ. ಛತ್ತೀಸ್‌ಗಡದಿಂದ ತೆಲಂಗಾಣದವರೆಗೆ, ಅಸ್ಸಾಮಿನಿಂದ ಕೇರಳದವರೆಗೆ ಈ ಎರಡೂ ಘೋಷಣೆಗಳು ಸಾರ್ವಜನಿಕ ಅಭಿವ್ಯಕ್ತಿಯಂತೆ ಕಂಡುಬರುತ್ತವೆ. ವೇದಾರಣ್ಯಂ ಮತ್ತು ತ್ರಿಪುರಾದ ನಡುವೆ ಸಾವಿರಾರು ಮೈಲಿ ಅಂತರವಿದೆ. ಆದರೆ ಲೆನಿನ್ ಮತ್ತು ಅಂಬೇಡ್ಕರ್ ನಡುವೆ ಈ ಅಂತರ ಇರಬೇಕಿಲ್ಲ ಅಲ್ಲವೇ? ಪ್ರತಿಮೆಗಳ ವಿಧ್ವಂಸಕರ ಐಕ್ಯತೆ ಜನಸಮುದಾಯಗಳನ್ನೇ ಧ್ವಂಸ ಮಾಡುವ ಶಕ್ತಿಯಾಗಿ ಹೊರಹೊಮ್ಮುತ್ತದೆ. ಈ ಪ್ರತಿಮೆಗಳನ್ನು ಸಾಂಕೇತಿಕವಾಗಿ, ಭಾವನಾತ್ಮಕವಾಗಿ ಗೌರವಿಸುವ ಶ್ರಮಿಕರ ಐಕ್ಯತೆ ಈ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ಮುಂದಿನ ಆಯ್ಕೆ ಸ್ಪಷ್ಟವಾಗಿದೆ. ಹೆಜ್ಜೆಯೂ ಸ್ಪಷ್ಟವಾಗಬೇಕಷ್ಟೆ.

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News

ಜಗದಗಲ
ಜಗ ದಗಲ