ಮಳೆಯಿಲ್ಲವೆಂದು ಕಪ್ಪೆಗಳಿಗೆ ಮದುವೆ ಮಾಡಿಸಿದರು, ಮಳೆ ಹೆಚ್ಚಾಯಿತೆಂದು ವಿಚ್ಛೇದನ ಕೊಡಿಸಿದರು!

Update: 2019-09-12 15:06 GMT

ಭೋಪಾಲ್, ಮಸೆ.12: ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡುವ ಬಗ್ಗೆ ಕೇಳಿದ್ದೇವೆ. ಆದರೆ ಮಳೆ ಆರ್ಭಟ ನಿಲ್ಲಿಸಲು ಕಪ್ಪೆಗಳಿಗೆ ವಿಚ್ಛೇದನ ಕೊಡಿಸುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?... ಇಂತಹ ಘಟನೆ ನಡೆದಿದ್ದು ಮಧ್ಯ ಪ್ರದೇಶದ ಭೋಪಾಲದಲ್ಲಿ.

ಎರಡು ತಿಂಗಳ ಹಿಂದೆ ಜುಲೈ 19ರಂದು ಮಳೆ ಬರಲಿ ಎಂದು ಕಪ್ಪೆಗಳಿಗೆ ಮದುವೆ ಮಾಡಿಸಲಾಗಿದ್ದರೆ ಇದೀಗ ಮಳೆ ನಿಲ್ಲಲೆಂದು ಅವುಗಳಿಗೆ ವಿಚ್ಛೇದನ ಕೊಡಿಸಲಾಗಿದೆ.

ಜುಲೈನಲ್ಲಿ ಬರ ಪರಿಸ್ಥಿತಿ ಎದುರಿಸುತ್ತಿದ್ದ ಮಧ್ಯ ಪ್ರದೇಶ ಇದೀಗ ಅತಿವೃಷ್ಟಿಯಿಂದ ನಲುಗುತ್ತಿದ್ದು, ಈ ವರ್ಷ ಹಿಂದಿಗಿಂತ ಶೇ. 26ರಷ್ಟು ಹೆಚ್ಚು ಮಳೆಯಾಗಿದೆಯಲ್ಲದೆ ಹಲವೆಡೆ ಪ್ರವಾಹ ಪರಿಸ್ಥಿತಿಯಿದೆ, ಭೋಪಾಲದ ತಗ್ಗು ಪ್ರದೇಶಗಳು ಬುಧವಾರ ವಿಪರೀತ ಮಳೆಯಿಂದ ಮುಳುಗಡೆಯಾಗಿದ್ದವು. ಇನ್ನು ಹೆಚ್ಚು ಮಳೆಯಾದರೆ ಆಪತ್ತು ಎಂದು ಅರಿತ ಇಂದ್ರಪ್ರಸ್ಥ  ಪ್ರದೇಶದ  ಓಂ ಶಿವ ಶಕ್ತಿ ಮಂಡಳದ ಸದಸ್ಯರು  ಬುಧವಾರ ಸಂಜೆ ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿ ಬಿಟ್ಟರು. ಮಂತ್ರಗಳನ್ನು ಪಠಿಸಿ ಕಪ್ಪೆಗಳನ್ನು ಪ್ರತ್ಯೇಕಗೊಳಿಸಲಾಯಿತು. ಇದರಿಂದ ಮಳೆ ಕಡಿಮೆಯಾಗಬಹುದೆಂದು ಮಂಡಳದ ಸದಸ್ಯರು ನಂಬಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News