ಫಿರೋಝ್ ಶಾ ಕೋಟ್ಲಾ ಕ್ಕೆ ಜೇಟ್ಲಿ ಸ್ಟೇಡಿಯಂ ಆಗಿ ಮರು ನಾಮಕರಣ

Update: 2019-09-12 18:21 GMT

  ಹೊಸದಿಲ್ಲಿ, ಸೆ.12: ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಫಿರೋಝ್ ಶಾ ಕೋಟ್ಲಾ ಕ್ರಿಕೆಟ್ ಸ್ಟೇಡಿಯಂನ್ನು ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಿದೆ. ಕಳೆದ ತಿಂಗಳು ನಿಧನರಾದ ಮಾಜಿ ಕೇಂದ್ರ ಸಚಿವ ಹಾಗೂ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಅಧ್ಯಕ್ಷರಾಗಿದ್ದ ಜೇಟ್ಲಿ ಸ್ಮರಣಾರ್ಥ ಸ್ಟೇಡಿಯಂಗೆ ಅವರ ಹೆಸರನ್ನು ಇಡಲಾಗಿದೆ. ಜೇಟ್ಲಿ 1999ರಿಂದ 2013ರ ತನಕ ಡಿಡಿಸಿಎ ಅಧ್ಯಕ್ಷರಾಗಿದ್ದರು. ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ ಮರುನಾಮಕರಣಗೊಂಡ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜೇಟ್ಲಿ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ದಿಲ್ಲಿಯ ಖ್ಯಾತ ಕ್ರಿಕೆಟ್ ಸ್ಟೇಡಿಯಂನ ಒಂದು ಹೊಸ ಸ್ಟಾಂಡ್‌ಗೆ ಟೆಸ್ಟ್ ಕ್ರಿಕೆಟ್‌ನ ಓರ್ವ ಯಶಸ್ವಿ ನಾಯಕ ವಿರಾಟ್ ಕೊಹ್ಲಿಯ ಹೆಸರಿಡಲಾಗಿದೆ. ಡಿಡಿಸಿಎ ವಿರಾಟ್ ಕೊಹ್ಲಿ ಸ್ಟಾಂಡ್‌ನ್ನು ಅನಾವರಣಗೊಳಿಸಿದೆ. ವಿರಾಟ್ ಕೊಹ್ಲಿ ಸ್ಟಾಂಡ್ ಅನಾವರಣದ ಬಳಿಕ ಕೊಹ್ಲಿ ಅವರು ಡಿಡಿಸಿಎ, ತನ್ನ ಸಹ ಆಟಗಾರರು ಹಾಗೂ ಬಾಲ್ಯದ ಕೋಚ್‌ಗೆ ಕೃತಜ್ಞತೆ ಸಲ್ಲಿಸಿದರು. 2001ರಲ್ಲಿ ಝಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ತನ್ನ ಸಹೋದರನೊಂದಿಗೆ ದಿಲ್ಲಿ ಸ್ಟೇಡಿಯಂಗೆ ತೆರಳಿದ್ದನ್ನು ಕೊಹ್ಲಿ ಸ್ಮರಿಸಿದರು.

 ‘‘ದಿಲ್ಲಿ ಸ್ಟೇಡಿಯಂನ ಸ್ಟಾಂಡ್‌ವೊಂದಕ್ಕೆ ಕೊಹ್ಲಿ ಹೆಸರಿಡಲು ನಿರ್ಧರಿಸಿದ ಬಳಿಕ ಈ ವಿಚಾರವನ್ನು ಅರುಣ್ ಜೇಟ್ಲಿ ಅವರ ಗಮನಕ್ಕೆ ತಂದಿದ್ದೆ. ವಿಶ್ವ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಉತ್ತಮ ಆಟಗಾರರಿಲ್ಲ. ಹೀಗಾಗಿ ನಿಮ್ಮ ನಿರ್ಧಾರ ಸರಿಯಿದೆ ಎಂದು ಜೇಟ್ಲಿ ನನಗೆ ತಿಳಿಸಿದರು’’ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News