ಮೋಟರ್ ವಾಹನ ತಿದ್ದುಪಡಿ ಕಾಯ್ದೆ ಕೇಂದ್ರ ಸರಕಾರದ ‘‘ತುಘ್ಲಕ್ ಆದೇಶ’’: ಮಧ್ಯಪ್ರದೇಶ ಸಚಿವ

Update: 2019-09-12 18:21 GMT

ಭೋಪಾಲ್, ಸೆ. 12: ಮೋಟರ್ ವಾಹನ ತಿದ್ದುಪಡಿ ಕಾಯ್ದೆ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮಧ್ಯಪ್ರದೇಶದ ಸಚಿವ, ಇದು ಕೇಂದ್ರ ಸರಕಾರದ ‘ತುಘ್ಲಕ್’ ಆದೇಶ ಎಂದು ಕರೆದಿದ್ದಾರೆ. ಹೆಚ್ಚಿನ ದಂಡಗಳು ಸಾಮಾನ್ಯ ಜನರಿಗೆ ಪಾವತಿಸಲು ಸಾಧ್ಯವಾಗದೇ ಇರುವಂತದ್ದು. ಮಧ್ಯಪ್ರದೇಶದ ಜನರ ಮೇಲೆ ಇಷ್ಟೊಂದು ದೊಡ್ಡ ಮೊತ್ತದ ದಂಡ ವಿಧಿಸುವುದನ್ನು ನಾನು ಬಯಸಲಾರೆ. ನಾನು ಈ ವಿಷಯದ ಕುರಿತು ಮುಖ್ಯಮಂತ್ರಿ ಕಮಲ್‌ನಾಥ್ ಅವರೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಮಧ್ಯಪ್ರದೇಶದ ಸಾರಿಗೆ ಸಚಿವ ಗೋವಿಂದ್ ಸಿಂಗ್ ರಾಜ್‌ಪೂತ್ ಹೇಳಿದ್ದಾರೆ.

ಕೇಂದ್ರ ಸರಕಾರಕ್ಕೆ ಅಹಂಕಾರ ಇದೆ. ಆ ಕಾರಣಕ್ಕೆ ಅದು ಈ ದಿನಗಳಲ್ಲಿ ‘ತುಘ್ಲಕ್’ ಆದೇಶಗಳನ್ನು ನೀಡುತ್ತಿದೆ. ಅವರ ಹೆಚ್ಚಿನ ಆದೇಶಗಳು ಅಹಂಕಾರದಿಂದ ಕೂಡಿವೆ ಎಂದು ಅವರು ಹೇಳಿದರು. ಕುಡಿದು ವಾಹನ ಚಾಲನೆ ಮಾಡಿದವರಿಗೆ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ರಾಜ್‌ಪೂತ್ ಹೇಳಿದ್ದಾರೆ. ‘‘ಸರಕಾರ ಕಾಯ್ದೆಯ ಕೆಲವು ಭಾಗಗಳಿಗೆ ತಿದ್ದುಪಡಿ ತರಬೇಕು. ನಾವು ಈ ಕಾಯ್ದೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸದಿರಲು ಇದೇ ಕಾರಣ. ಮುಖ್ಯಮಂತ್ರಿಯವರೊಂದಿಗೆ ಈ ಕಾಯ್ದೆಯ ಎಲ್ಲಾ ಆಯಾಮಗಳ ಬಗ್ಗೆ ಚರ್ಚಿಸಿದ ಬಳಿಕ ಅನುಷ್ಠಾನಗೊಳಿಸಲಿದ್ದೇವೆ’’ ಎಂದು ಸಚಿವರು ಹೇಳಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಪರಿಶೀಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಾವು ಆದೇಶಿಸಿದ್ದೇವೆ. ನಮ್ಮ ಪ್ರಕೃತಿ ವಿಪತ್ತು ನಿರ್ವಹಣಾ ಕೇಂದ್ರ 24 ಗಂಟೆಗಳ ಕಾಲವೂ ಕಾರ್ಯ ನಿರ್ವಹಿಸುತ್ತಿದೆ. ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News