ಮೂರ್ಖ ಸಿದ್ಧಾಂತಗಳು ಅಗತ್ಯ ಇಲ್ಲ: ರಾಹುಲ್ ಗಾಂಧಿ

Update: 2019-09-12 18:26 GMT

ಹೊಸದಿಲ್ಲಿ, ಸೆ. 12: ಆರ್ಥಿಕ ನಿಧಾನಗತಿ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದು ಸಮಸ್ಯೆ ಎಂಬುದನ್ನು ಒಪ್ಪಿಕೊಳ್ಳುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ದೇಶದಲ್ಲಿ ಆರ್ಥಿಕ ಕುಸಿತ ಕಂಡು ಬಂದಿರುವ ಈ ಸಂದರ್ಭ ಪ್ರಚಾರ, ಪ್ರಚೋದಿಸುವ ಸುದ್ದಿಗಳು, ಮೂರ್ಖ ಸಿದ್ಧಾಂತಗಳು ನಮಗೆ ಬೇಕಾಗಿಲ್ಲ. ಆರ್ಥಿಕತೆಯನ್ನು ಸರಿಪಡಿಸುವ ವಾಸ್ತವ ಯೋಜನೆಯ ಅಗತ್ಯ ಇದೆ ಎಂದು ಅವರು ಹೇಳಿದರು. ಓಲಾ ಹಾಗೂ ಉಬರ್ ಕ್ಯಾಬ್ ಸೇವೆ ಬಳಸುತ್ತಿರುವುದರಿಂದ ಜನರು ಕಾರುಗಳನ್ನು ಖರೀದಿಸುತ್ತಿಲ್ಲ. ಇದರಿಂದ ಭಾರತದ ಆಟೊಮೊಬೈಲ್ ಉದ್ಯಮ ಹಿಂಜರಿತ ಅನುಭವಿಸುತ್ತಿದೆ ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ನಮ್ಮಲ್ಲಿ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದು ಸುಧಾರಣೆಯ ಉತ್ತಮ ಆರಂಭ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ‘ಹಿಂದೂ’ ಹಾಗೂ ‘ಬಿಸಿನೆಸ್ ಲೈನ್’ಗೆ ನೀಡಿದ ಸಂದರ್ಶನದ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News