ಜಮ್ಮು: ಭದ್ರತಾ ಅಧಿಕಾರಿಯಿಂದ ರೈಫಲ್ ಕಿತ್ತೊಯ್ದ ಉಗ್ರರು

Update: 2019-09-13 17:12 GMT

ಶ್ರೀನಗರ, ಸೆ.13: ಪಿಡಿಪಿ ಪಕ್ಷದ ಕಿಸ್ತ್‌ವಾರ್ ಜಿಲ್ಲಾಧ್ಯಕ್ಷರ ವೈಯಕ್ತಿಕ ಭದ್ರತಾ ಅಧಿಕಾರಿಯ ರೈಫಲನ್ನು ಶಂಕಿತ ಉಗ್ರರು ಕಿತ್ತೊಯ್ದ ಘಟನೆಯ ಬಳಿಕ ಜಿಲ್ಲೆಯಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ ಎಂದು ಜಮ್ಮು ಕಾಶ್ಮೀರದ ಆಡಳಿತ ತಿಳಿಸಿದೆ. ಕಿಸ್ತ್‌ವಾರ್‌ನ ಗುರಿಯನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ರೈಫಲ್ ಕಿತ್ತೊಯ್ದ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರದಲ್ಲಿ ಮತ್ತೆ ಕರ್ಫ್ಯೂ ಹೇರಿ ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಉಗ್ರರ ಬಂಧನಕ್ಕೆ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಿಸ್ತ್‌ವಾರ್‌ನಲ್ಲಿ ಮಾರ್ಚ್ 8ರಂದೂ ಇಂತಹ ಘಟನೆ ನಡೆದಿತ್ತು. ಮುಸುಕುಧಾರಿಗಳ ತಂಡವೊಂದು ವೈಯಕ್ತಿಕ ಭದ್ರತಾ ಅಧಿಕಾರಿಯ ಮನೆಗೆ ನುಗ್ಗಿ ಅವರ ಎಕೆ-47 ರೈಫಲ್ ಹಾಗೂ 90 ಬುಲೆಟ್‌ಗಳನ್ನು ಕಸಿದುಕೊಂಡಿತ್ತು. ಶುಕ್ರವಾರದ ಪ್ರಾರ್ಥನೆಗೂ ಮುನ್ನ ಶ್ರೀನಗರದ ಕೆಲವು ಪ್ರದೇಶಗಳಲ್ಲಿ ಮತ್ತೆ ಕರ್ಫ್ಯೂ ವಿಧಿಸಲಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದು ಸುಮಾರು ಒಂದು ತಿಂಗಳಿಂದ ರಾಜ್ಯದ ಪ್ರಮುಖ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ನಿರಾಕರಿಸಲಾಗುತ್ತಿದೆ. ಶ್ರೀನಗರದ ಒಳಪ್ರದೇಶದ ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರ್ಬಂಧ ಇನ್ನೂ ಜಾರಿಯಲ್ಲಿದೆ. ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಿರ ದೂರವಾಣಿ ಸಂಪರ್ಕ ಮರುಸ್ಥಾಪಿಸಲಾಗಿದೆ ಮತ್ತು ಉತ್ತರ ಕಾಶ್ಮೀರದ ಕುಪ್ವಾರಾ ಹಾಗೂ ಹಂದ್ವಾರಾ ಜಿಲ್ಲೆಗಳಲ್ಲಿ ಮೊಬೈಲ್ ಪೋಸ್ಟ್‌ಪೇಯ್ಡ್ ಸಂಪರ್ಕ ಕಾರ್ಯ ನಿರ್ವಹಿಸುತ್ತಿದೆ ಎಂದು ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News