ಕುಟುಂಬ ಎದುರಿಸುತ್ತಿರುವ ಬೆದರಿಕೆ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸಿ: ಹೈಕೋರ್ಟ್‌ಗೆ ಶ್ವೇತಾ ಭಟ್ ಮೊರೆ

Update: 2019-09-13 17:23 GMT

ಅಹ್ಮದಾಬಾದ್,ಸೆ.13: ತನ್ನ ಕುಟುಂಬಕ್ಕೆ ರಕ್ಷಣೆ ಕೋರಿ ಕಳೆದ ವರ್ಷ ಗುಜರಾತ್ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ,ಸೇವೆಯಿಂದ ವಜಾಗೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರ ಪತ್ನಿ ಶ್ವೇತಾ ಭಟ್ ಅವರು,ಕುಟುಂಬವು ಎದುರಿಸುತ್ತಿರುವ ಬೆದರಿಕೆ ವಿಷಯವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆಯನ್ನು ಕೋರುತ್ತಿದ್ದೇನೆ,ಕಳೆದೊಂದು ವರ್ಷದಿಂದ ಜೈಲಿನಲ್ಲಿರುವ ತನ್ನ ಪತಿಗಾಗಿ ಅಲ್ಲ ಎಂದು ಗುರುವಾರ ನ್ಯಾ.ಎಸ್.ಎಚ್.ವೋರಾ ಅವರ ಮುಂದೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಶ್ವೇತಾ ತಿಳಿಸಿದ್ದಾರೆ.

ಭಟ್ ಅವರಿಗಾಗಲೀ ಅವರ ಕುಟುಂಬಕ್ಕಾಗಲೀ ಯಾವುದೇ ಬೆದರಿಕೆಯಿರದಿದ್ದ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಅವರನ್ನು ಬಂಧಿಸುವ ಎರಡು ತಿಂಗಳು ಮೊದಲು,2018 ಜುಲೈನಲ್ಲಿ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಗಿತ್ತು ಎಂದು ಅಹ್ಮದಾಬಾದ್ ಪೊಲೀಸರು ಕಳೆದ ತಿಂಗಳು ಶ್ವೇತಾ ಅವರ ಅರ್ಜಿಗೆ ಉತ್ತರವಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ಪೊಲೀಸರ ವಾದವನ್ನು ಪ್ರಶ್ನಿಸಿರುವ ಶ್ವೇತಾ,ರಕ್ಷಣೆ ಕೋರುವುದು ತನ್ನ ಮೂಲಭೂತ ಹಕ್ಕು ಆಗಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿದ್ದಾರೆ.

ತನಗೆ ಮತ್ತು ತನ್ನ ಕುಟುಂಬಕ್ಕೆ ಬೆದರಿಕೆ ವಿಷಯವನ್ನು ಹೊಸದಾಗಿ ವಿಶ್ಲೇಷಿಸುವಂತೆ ಪೊಲೀಸರಿಗೆ ನಿರ್ದೇಶ ನೀಡುವಂತೆ ಶ್ವೇತಾ ಉಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.

ತನಗೆ ಮತ್ತು ತನ್ನ ಕುಟುಂಬ ಸದಸ್ಯರಿಗೆ ಸರಕಾರದ ವೆಚ್ಚದಲ್ಲಿ ಸಶಸ್ತ್ರ ಪೊಲೀಸರ ರಕ್ಷಣೆಯನ್ನು ಒದಗಿಸುವಂತೆ ಅವರು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ.

2015ರಲ್ಲಿ ಸೇವೆಯಿಂದ ವಜಾಗೊಂಡಿದ್ದ ಸಂಜೀವ ಭಟ್ ಅವರನ್ನು 1996ರಲ್ಲಿ ಬನಾಸಕಾಂತಾ ಜಿಲ್ಲೆಯ ಎಸ್‌ಪಿ ಆಗಿದ್ದಾಗ ವ್ಯಕ್ತಿಯೋರ್ವನನ್ನು ಮಾದಕ ದ್ರವ್ಯ ಹೊಂದಿದ್ದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದ ಆರೋಪದಲ್ಲಿ 2018ರಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದರು. ಬಳಿಕ ಕಸ್ಟಡಿ ಸಾವು ಪ್ರಕರಣವೊಂದರಲ್ಲಿ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು.

2012ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಶ್ವೇತಾ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ  ವಿರುದ್ಧ ವಿಫಲ ಸ್ಪರ್ಧೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News