ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ದುರ್ಯೋಧನ ನೇಗಿ ಶುಭಾರಂಭ

Update: 2019-09-14 03:38 GMT

ಮಾಸ್ಕೊ, ಸೆ.13:ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಶುಕ್ರವಾರ ಜಯ ದಾಖಲಿಸಿರುವ ರಾಷ್ಟ್ರೀಯ ಚಾಂಪಿಯನ್ ದುರ್ಯೋಧನ ಸಿಂಗ್ ನೇಗಿ (69ಕೆಜಿ)ಶುಭಾರಂಭ ಮಾಡಿದ್ದಾರೆ.

ಮೊದಲ ಸುತ್ತಿನ ಪಂದ್ಯದಲ್ಲಿ ನೇಗಿ ಅರ್ಮೆನಿಯಾದ ಕೊರ್‌ಯುನ್ ಅಸ್ಟೊಯನ್‌ರನ್ನು 4-1 ಅಂಕಗಳ ಅಂತರದಿಂದ ಮಣಿಸಿದರು. ಸೋಮವಾರ ನಡೆಯಲಿರುವ ಅಂತಿಮ-32ರ ಸುತ್ತಿನ ಪಂದ್ಯದಲ್ಲಿ ಜೋರ್ಡನ್‌ನ ಆರನೇ ಶ್ರೇಯಾಂಕದ ಝೈದ್‌ರನ್ನು ಎದುರಿಸಲಿದ್ದಾರೆ.

ಇದಕ್ಕೂ ಮೊದಲು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಮನೀಶ್ ಕೌಶಿಕ್(63ಕೆಜಿ) ಹಾಗೂ ಬ್ರಿಜೇಶ್ ಯಾದವ್(81ಕೆಜಿ)ತಮ್ಮ ಮೊದಲ ಸುತ್ತಿನ ಪಂದ್ಯವನ್ನು ಜಯಿಸಿ ಎರಡನೇ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಮತ್ತೊಂದೆಡೆ, ಏಶ್ಯನ್ ಚಾಂಪಿಯನ್ ಅಮಿತ್ ಪಾಂಘಾಲ್(52ಕೆಜಿ) ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತರಾದ ಕವಿಂದರ್ ಸಿಂಗ್ ಬಿಶ್ತ್(57ಕೆಜಿ) ಹಾಗೂ ಆಶೀಶ್ ಕುಮಾರ್(75ಕೆಜಿ)ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News