ಕನ್ನಡ ಭಾಷೆಗೆ ಯಾಕೆ ಪ್ರಾಧಾನ್ಯತೆ ಸಿಗುತ್ತಿಲ್ಲ..?

Update: 2019-09-13 18:10 GMT

ಮಾನ್ಯರೇ,

ಕೆಲ ತಿಂಗಳ ಹಿಂದೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಯ ಮುಖ್ಯ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಲಾಗಿತ್ತು. ಅದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಹುದ್ದೆಗಾಗಿ ನಡೆಯುವ ಪರೀಕ್ಷೆಯನ್ನು ಸಹ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂಬ ಭರವಸೆಯೂ ಸಿಕ್ಕಿತ್ತು. ಆದರೆ ಅದು ಇನ್ನೂ ಈಡೇರಿಲ್ಲ. ಮೊನ್ನೆ ರಾಷ್ಟ್ರೀಕೃತ ಬ್ಯಾಂಕ್‌ಗಳ 953 ಕ್ಲರ್ಕ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆದರೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಈ ಮೂಲಕ ಕೇಂದ್ರ ಸರಕಾರ ತಾನು ನೀಡಿದ ಭರವಸೆಯನ್ನು ಈಡೇರಿಸದೆ ಕನ್ನಡಿಗರಿಗೆ ಮೋಸ ಮಾಡಿದೆ.

ಹಿಂದಿ, ಇಂಗ್ಲಿಷ್ ಬೇಕು ನಿಜ. ಆದರೆ ಅದರ ಜೊತೆಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಕೊಡಬೇಕಿತ್ತಲ್ಲವೇ?. ಇದ್ಯಾವ ನ್ಯಾಯ..? ಈ ಹಿಂದೆ ಬ್ಯಾಂಕಿಂಗ್ ಹುದ್ದೆಗಾಗಿ ನಡೆಯುವ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲೂ ನಡೆಸಬೇಕೆಂದು ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಅನೇಕ ಬಾರಿ ಹೋರಾಟ ಮಾಡಿದ್ದವು. ಈ ಹೋರಾಟಕ್ಕೆ ಮೊನ್ನೆ ಶತದಿನ ಪೂರೈಸಿದ ಮೋದಿ ನೇತೃತ್ವದ ಕೇಂದ್ರ ಸರಕಾರ ಸ್ಪಂದಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ ಕನಸು ನನಸಾಗಲಿಲ್ಲ. ಸಂಸತ್ತಿನಲ್ಲೂ ಈ ಬಗ್ಗೆ ಚರ್ಚೆ ನಡೆದಿತ್ತು. ದೇಶಾದ್ಯಂತ ನಡೆಯುವ ವಿವಿಧ ರೀತಿಯ ಎಲ್ಲಾ ಪರೀಕ್ಷೆಗಳನ್ನು ದಕ್ಷಿಣ ಭಾರತದ ಭಾಷೆಗಳಲ್ಲ್ಲೂ ನಡೆಸಲು ಹಿಂದೇಟು ಯಾಕೆ..? ಸ್ಥಳೀಯರಿಗೆ ಸ್ಥಳೀಯ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕಲ್ಲವೇ?. ರಾಜ್ಯದಲ್ಲಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೊರರಾಜ್ಯದವರೇ ತುಂಬಿದ್ದಾರೆ. ಹೀಗಾಗಿ ಹಳ್ಳಿಯ ಜನರಿಗೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಜೊತೆಗೆ ಮಾತನಾಡಲು ಕಷ್ಟವಾಗುತ್ತಿದೆ. ಇದಕ್ಕೆಲ್ಲಾ ಅಂತ್ಯ ಯಾವಾಗ..? 

Writer - -ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - -ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News