ಅಳಿವಿನಂಚಿನಲ್ಲಿರುವ ಮನುಷ್ಯರ ಬಗ್ಗೆ ಕಾಳಜಿ ಬೇಡವೇ?

Update: 2019-09-14 05:37 GMT

ಇತ್ತೀಚೆಗೆ ರಶ್ಯಾದಲ್ಲಿ ನಿಂತು ಭಾರತ ಪ್ರಧಾನಿ ನರೇಂದ್ರ ಮೋದಿಯವರು ‘ಅಳಿವಿನಂಚಿನಲ್ಲಿರುವ ಹುಲಿ’ಗಳ ಕುರಿತಂತೆ ಕಾಳಜಿ ವ್ಯಕ್ತಪಡಿಸಿದ್ದರು. ಹುಲಿಗಳ ರಕ್ಷಣೆಗೆ ತೆಗೆದುಕೊಂಡ ಯಶಸ್ವೀಕ್ರಮಗಳ ಕುರಿತಂತೆಯೂ ಅವರು ಮಾತನಾಡಿದರು. ಆದರೆ ಇದೇ ಸಂದರ್ಭದಲ್ಲಿ, ಈ ದೇಶದ ಕಾಡುಗಳನ್ನು ಆಶ್ರಯಿಸಿ ಬದುಕುತ್ತಿರುವ ಆದಿವಾಸಿ, ಬುಡಕಟ್ಟು ಸಮುದಾಯಗಳಿಗೆ ಸೇರಿದ ಮನುಷ್ಯರು ಅಳಿವಿನಂಚಿನಲ್ಲಿ ನಿಂತಿದ್ದಾರೆ ಎನ್ನುವುದನ್ನು ಪ್ರಧಾನಿ ಮರೆತಿದ್ದರು. ಈ ದೇಶದಲ್ಲಿ ಹುಲಿಗಳಿಗಿರುವ ಘನತೆ, ಮನುಷ್ಯನಿಗೂ ಇರಬೇಕು. ಎಲ್ಲಿ ಮನುಷ್ಯನಿಗೇ ಬದುಕುವ ಹಕ್ಕುಗಳಿಲ್ಲವೋ ಅಲ್ಲಿ, ಹುಲಿಗಳ ಕುರಿತಂತೆ ವ್ಯಕ್ತವಾಗುವ ಕಾಳಜಿಗಳನ್ನು ಪ್ರಾಮಾಣಿಕ ಎಂದು ನಂಬಲಸಾಧ್ಯ. ಬುಡಕಟ್ಟು ಸಮುದಾಯದ ಜನರ ಸಂಖ್ಯೆ ಕ್ಷೀಣಿಸಲು ನಾಗರಿಕ ಸಮಾಜದ ಕ್ರೌರ್ಯ ಮತ್ತು ಸರಕಾರದ ನಿರ್ಲಕ್ಷವೇ ನೇರ ಕಾರಣವಾಗಿದೆ.ಈ ದೇಶದ ಅಭಿವೃದ್ಧಿಯೆನ್ನುವ ರೈಲಿನಿಂದ ಕೊಂಡಿ ಕಳಚಿ, ಹಳಿಯಿಂದ ದೂರ ನಿಂತಿರುವ ಬೋಗಿಗಳೆಂದೇ ಈ ಸಮುದಾಯವನ್ನು ಗುರುತಿಸಲಾಗುತ್ತಿದೆ.

ಈಶಾನ್ಯ ಭಾರತವೂ ಸೇರಿದಂತೆ ಈ ದೇಶದ ಅರಣ್ಯ ಪ್ರದೇಶಗಳ ಮೇಲೆ ಬೃಹತ್ ಉದ್ಯಮಿಗಳ ದೃಷ್ಟಿ ಬಿದ್ದ ದಿನಗಳಿಂದ ಇವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿದೆ. ತಮ್ಮ ನೆಲೆಯಿಂದ ಇವರನ್ನು ಹೊರಗಟ್ಟುವ ಪ್ರಯತ್ನಗಳು ಇವರ ಬದುಕನ್ನು ದಯನೀಯ ಸ್ಥಿತಿಗೆ ಇಳಿಸಿದೆ. ಅಂಕಿ ಅಂಶಗಳ ಪ್ರಕಾರ ಭಾರತದ ಉಳಿದ ಜನಸಮುದಾಯಗಳಿಗಿಂತ ಬುಡಕಟ್ಟು ಪಂಗಡಗಳು ರೋಗ ಹಾಗೂ ಅಪೌಷ್ಟಿಕತೆಗೆ ಹೆಚ್ಚು ತುತ್ತಾಗುತ್ತಿವೆ. ದೇಶಾದ್ಯಂತ ಸಾಮಾನ್ಯವಾಗಿ ಬುಡಕಟ್ಟು ಪಂಗಡಗಳ ಜನರು ಸಾಮುದಾಯಿಕ ಅಥವಾ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದರೆ ತಾವು ವಾಸಿಸುವ ಸ್ಥಳದಿಂದ ಸರಾಸರಿ 80 ಕಿ.ಮೀ. ದೂರದವರೆಗೂ ಪ್ರಯಾಣಿಸಬೇಕಾಗುತ್ತದೆ ಎಂದು 2017ನೇ ಸಾಲಿನ ಸಿಎಜಿ ವರದಿ ತಿಳಿಸಿದೆ. ದೇಶಾದ್ಯಂತ, ಇತರ ಸಮುದಾಯಗಳ ಜನರು ಸಾಮುದಾಯಿಕ ಆಸ್ಪತ್ರೆಯನ್ನು ತಲುಪಲು ಕ್ರಮಿಸುವ ಸರಾಸರಿ ದೂರ 33.55 ಕಿ.ಮೀ. ಗಳಾಗಿವೆ.

ಪೌಷ್ಟಿಕತೆ ಹಾಗೂ ಬುಡಕಟ್ಟು ಪಂಗಡಗಳ ಆರೋಗ್ಯ ಮಟ್ಟವು ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಬುಡಕಟ್ಟು ಜನರು ಭಾರತದ ಒಟ್ಟು ಜನಸಂಖ್ಯೆಯ ಶೇ.8ರಷ್ಟಿದ್ದಾರೆ. ಆದರೆ 2015ರಲ್ಲಿ ಮೆದುಳುಜ್ವರ ಸೇರಿದಂತೆ ದೇಶದಲ್ಲಿ ವರದಿಯಾದ ಮಲೇರಿಯಾ ಪ್ರಕರಣಗಳ ಪೈಕಿ ಶೇ.30ರಷ್ಟು ಬುಡಕಟ್ಟು ಜನರೇ ಬಾಧಿತರಾಗಿದ್ದಾರೆ. ಮಲೇರಿಯಾದಿಂದ ಉಂಟಾದ ಶೇ.50ರಷ್ಟು ಪ್ರಕರಣಗಳಲ್ಲಿ ಸಾವನ್ನಪ್ಪಿದವರು ಬುಡಕಟ್ಟು ಜನರಾಗಿದ್ದಾರೆ. ಇದರಿಂದಾಗಿ ದೇಶದ ಆರ್ಥಿಕತೆಗೆ 6 ಸಾವಿರ ಕೋಟಿ ರೂ. ಹೊರೆ ಬಿದ್ದಿದೆಯೆಂದು 2018ರಲ್ಲಿ ಪ್ರಕಟವಾದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ವರದಿಯು ತಿಳಿಸಿದೆ. ಇದನ್ನು ಹೊರೆಯಾಗಿ ಮಾರ್ಪಡಿಸಿರುವುದು ನಮ್ಮ ಸರಕಾರದ ಆಡಳಿತ ವೈಫಲ್ಯವೇ ಆಗಿದೆ.

ಒಡಿಶಾದಲ್ಲಿ ದುರ್ಬಲ ಬುಡಕಟ್ಟು ಪಂಗಡಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ದತ್ತಾಂಶ ಲಭ್ಯವಿಲ್ಲ. ಈ ಪಂಗಡಗಳ ಸ್ಥಿತಿ ಇತರ ಪರಿಶಿಷ್ಟ ಪಂಗಡಗಳ ಜನರಿಗಿಂತಲೂ ದಯನೀಯವಾಗಿರುವುದಾಗಿ ವಿನಾಶದಂಚಿನಲ್ಲಿರುವ ಬುಡಕಟ್ಟು ಪಂಗಡಗಳ ಕುರಿತಾದ ಕ್ಸಾಕ್ಸಾ ಸಮಿತಿಯು 2014ರಲ್ಲಿ ಪ್ರಕಟಿಸಿದ ವರದಿ ತಿಳಿಸಿದೆ. 2015-16ರ ಸಾಲಿನಲ್ಲಿ ಒಂದು ವರ್ಷ ಪ್ರಾಯದೊಳಗೆ ಮೃತಪಟ್ಟ ಪ್ರತಿ 1 ಸಾವಿರ ನವಜಾತ ಶಿಶುಗಳ ಪೈಕಿ ಶೇ.44.4 ಪರಿಶಿಷ್ಟ ಪಂಗಡಗಳಿಗೆ ಸೇರಿದವಾಗಿದ್ದವು. ಇದು ಉಳಿದ ಜನಸಂಖ್ಯೆಯಲ್ಲಿ ಸಂಭವಿಸಿದ ಶಿಶು ಮರಣ ಪ್ರಮಾಣಕ್ಕಿಂತ ಶೇ.30ರಷ್ಟು ಅಧಿಕವಾಗಿದೆ.

ಈ ಅಂದಾಜುಗಳನ್ನು ಆಧರಿಸಿ, 2018ರಲ್ಲಿ ಕೇಂದ್ರ ಬುಡಕಟ್ಟು ಸಚಿವಾಲಯವು ಪ್ರಕಟಿಸಿದ ವರದಿಯೊಂದು, ಪರಿಶಿಷ್ಟ ಪಂಗಡಗಳಲ್ಲಿ ಜನಿಸಿರುವ ಪ್ರತಿ 1 ಸಾವಿರ ಶಿಶುಗಳ ಪೈಕಿ ಒಂದು ವರ್ಷದೊಳಗೆ ಸಾವನ್ನಪ್ಪುವ ಶಿಶುಗಳ ಸಂಖ್ಯೆ 44ರಿಂದ 74ರಷ್ಟಿರುತ್ತದೆ ಎಂದು ತಿಳಿಸಿದೆ.

ಕಳೆದ ಒಂದು ದಶಕದಿಂದ 2015-16ರವರೆಗೆ, ಬುಡಕಟ್ಟು ಜನಸಂಖ್ಯೆಯು ಉಳಿದ ಜನಸಮುದಾಯಗಳಿಗಿಂತ ಹೆಚ್ಚು ತ್ವರಿತವಾಗಿ ಕ್ಷೀಣಿಸುತ್ತಿದೆ. 2005-06ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳಲ್ಲಿನ ಶಿಶು ಮರಣದ ಪ್ರಮಾಣವು ಶೇ. 62.1 ಆಗಿದ್ದು, ಇತರ ಜನಸಮುದಾಯಗಳ ಶಿಶುಮರಣ ಸಂಖ್ಯೆ ಶೇ. 38.9 ಆಗಿತ್ತು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ದತ್ತಾಂಶ ತಿಳಿಸಿದೆ. 2017ರಲ್ಲಿ ದೇಶಾದ್ಯಂತ ಸಾಮುದಾಯಿಕ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಶೇ. 82.3 ವಿಶೇಷ ಹುದ್ದೆಗಳಲ್ಲಿ ಶೇ. 32.6 ತಾಂತ್ರಿಕ ಹುದ್ದೆಗಳು ಹಾಗೂ ಶೇ. 27.9 ನರ್ಸ್ ಹುದ್ದೆಗಳು ಖಾಲಿ ಬಿದ್ದಿರುವುದಾಗಿ 2018ನೇ ಸಾಲಿನ ಬುಡಕಟ್ಟು ಸಚಿವಾಲಯದ ವರದಿ ತಿಳಿಸಿದೆ.

 2009-10ನೇ ಸಾಲಿನಲ್ಲಿ ಗ್ರಾಮೀಣ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿರುವ ಪರಿಶಿಷ್ಟ್ಟ ಪಂಗಡಗಳ ಜನಸಂಖ್ಯೆಯು ಶೇ. 47.4 ಆಗಿದ್ದರೆ, ಉಳಿದ ಜನಸಮೂಹದ ಪ್ರಮಾಣ ಶೇ.33.8 ಆಗಿತ್ತು. ನಗರ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗೆ ವಾಸಿಸುವ ಬುಡಕಟ್ಟು ಜನರ ಸಂಖ್ಯೆ ಶೇ. 30.4 ಆಗಿದ್ದರೆ, ಉಳಿದ ಜನಸಮುದಾಯದ್ದು ಶೇ. 20.9 ಆಗಿತ್ತು.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಅಧಿಕಾರಕ್ಕೇರಿದ ಬಳಿಕ ಬುಡಕಟ್ಟು ಉಪಯೋಜನೆ ವೆಚ್ಚವು 2014-15ನೇ ಸಾಲಿನಲ್ಲಿ 32,387 ಕೋಟಿ ರೂ.ಗಳಾಗಿದ್ದರೆ, 2015-16ನೇ ಸಾಲಿನಲ್ಲಿ ಅದು 20 ಸಾವಿರ ಕೋಟಿ ರೂ.ಗಳಿಗೆ ಕುಸಿಯಿತು ಹಾಗೂ 2016-17ರಲ್ಲಿ 24,005 ಕೋಟಿ ರೂ.ಯಷ್ಟು ತುಸು ಹೆಚ್ಚಳ ಮಾಡಲಾಯಿತು ಎಂದು ಎಪ್ರಿಲ್‌ನಲ್ಲಿ ಮಾಧ್ಯಮ ವರದಿಯೊಂದು ತಿಳಿಸಿದೆ. ಮೂಲಸೌಕರ್ಯ ನಿರ್ವಹಣೆ, ಕೃಷಿ ಸಾಲ ಮನ್ನಾ, ಉತ್ತಮ ಆಡಳಿತ ನಿಧಿ, ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಅನುದಾನಗಳು ಪರಿಶಿಷ್ಟ ಬುಡಕಟ್ಟು ಪಂಗಡಗಳಿಗೆ ತಲುಪುತ್ತಿಲ್ಲವೆಂದು ದಲಿತ ಮಾನವಹಕ್ಕುಗಳು-ದಲಿತ ಆರ್ಥಿಕ ಆಂದೋಲನ ಕುರಿತಾದ ರಾಷ್ಟ್ರೀಯ ಅಭಿಯಾನವು ಪ್ರಕಟಿಸಿದ ದಲಿತ ಆದಿವಾಸಿ ಬಜೆಟ್ ವಿಶ್ಲೇಷಣೆ ವರದಿಯು ತಿಳಿಸಿದೆ.

2019-20ರ ಸಾಲಿನಲ್ಲಿ ಕೇಂದ್ರ ಸರಕಾರವು ಬುಡಕಟ್ಟು ಜನರಿಗಾಗಿ ಒಟ್ಟು 52,885 ಕೋಟಿ ರೂ.ಗಳ ಅನುದಾನ ನೀಡಿದ್ದು, ಇದು ಬುಡಕಟ್ಟು ಜನರನ್ನು ಗುರಿಯಿರಿಸಿಕೊಂಡು ಜಾರಿಗೊಳಿಸಲಾಗಿರುವ ಕಾರ್ಯಕ್ರಮಗಳಿಗೆ ನಿಗದಿಪಡಿಸಿರುವ ಅನುದಾನದ ಶೇ. 40.9 ರಷ್ಟು ಮಾತ್ರವೇ ಆಗಿದೆ. ಇತ್ತೀಚೆಗಷ್ಟೇ ಮೋದಿಯವರು ರಶ್ಯದಲ್ಲಿ ನಿಂತು ಹುಲಿಗಳ ಸಂಖ್ಯೆ ಹೆಚ್ಚುತ್ತಿರುವ ಕುರಿತಂತೆ ಆಶಾದಾಯಕ ಮಾತುಗಳನ್ನಾಡಿದರು. ಕಾಡಿನಲ್ಲಿರುವ ಹುಲಿಗಳ ಕುರಿತಂತೆ ಪ್ರಧಾನಿಗಿರುವ ಕಾಳಜಿ, ಮನುಷ್ಯರ ಕುರಿತಂತೆಯೂ ವ್ಯಕ್ತವಾಗಬೇಕಾಗಿದೆ. ಅಳಿವಿನಂಚಿನಲ್ಲಿರುವ ಮನುಷ್ಯರನ್ನು ಉಳಿಸುವ ಕುರಿತಂತೆ ಸರಕಾರ ತಕ್ಷಣ ಕಾರ್ಯಯೋಜನೆಗಳನ್ನು ರೂಪಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News