ಗಣಪತಿ ವಿಸರ್ಜನೆ ವೇಳೆ ದುರಂತ: 40 ಮಂದಿ ಜಲಸಮಾಧಿ

Update: 2019-09-14 03:48 GMT

ಮುಂಬೈ: ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಗಣಪತಿ ವಿಸರ್ಜನೆ ವೇಳೆ 40 ಮಂದಿ ಜಲಸಮಾಧಿಯಾಗಿದ್ದಾರೆ.

ಅತಿದೊಡ್ಡ ದುರಂತ ಭೋಪಾಲ್‌ನಲ್ಲಿ ಸಂಭವಿಸಿದ್ದು, ಬೃಹತ್ ಗಣೇಶ ವಿಗ್ರಹವನ್ನು ಒಯ್ಯಲು ಕಟ್ಟಿದ್ದ ಎರಡು ದೋಣಿಗಳು ಶುಕ್ರವಾರ ಲೋವರ್‌ಲೇಕ್‌ನಲ್ಲಿ ಅವಘಡಕ್ಕೀಡಾದಾಗ 11 ಮಂದಿ ಜೀವ ಕಳೆದುಕೊಂಡರು. ಭೋಪಾಲ್‌ನಲ್ಲಿ ಕಳೆದ 10 ವರ್ಷಗಳಲ್ಲಿ ಗಣೇಶೋತ್ಸವ ವೇಳೆ ನಡೆದ ಅತಿದೊಡ್ಡ ದುರಂತ ಇದಾಗಿದೆ.

ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ ಒಟ್ಟು 23 ಮಂದಿ ಮುಳುಗಿ ಸತ್ತಿದ್ದಾರೆ. ದೆಹಲಿಯಲ್ಲಿ ನಾಲ್ವರು ಹಾಗೂ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಇಬ್ಬರು ಜಲಸಮಾಧಿಯಾಗಿದ್ದಾರೆ.

ಭೋಪಾಲ್ ದುರಂತದಲ್ಲಿ ಮಡಿದ ಎಲ್ಲರೂ 100 ಕ್ವಾಟ್ರಸ್ ಪ್ರದೇಶದವರಾಗಿದ್ದು, ಹಿಂದಿನ ದಿನ ರಾತ್ರಿ ವಿಸರ್ಜನಾ ಮೆರವಣಿಯಲ್ಲಿ ಸಂಭ್ರಮಿಸಿದ್ದ ನಗರದಲ್ಲಿ ಮರುದಿನ ಶವಯಾತ್ರೆ ನಡೆಸಬೇಕಾದ ಪರಿಸ್ಥಿತಿ ಉಂಟಾಯಿತು. ಮೃತಪಟ್ಟವರಲ್ಲಿ 12 ವರ್ಷದ ಪರ್ವೇಝ್ ಸೇರಿದ್ದು, ಬಾಲಕನ ಶವ ಸಂಸ್ಕಾರವನ್ನು ಶುಕ್ರವಾರ ನೆರವೇರಿಸಿದರು.

ಭೋಪಾಲ್ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಶೋಕ ವ್ಯಕ್ತಪಡಿಸಿದ್ದು, ಘಟನೆ ಸಂಬಂಧ ಎಎಸ್‌ಐ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮೃತರ ಕುಟುಂಬಗಳಿಗೆ ತಲಾ 11 ಲಕ್ಷ ರೂ. ಪರಿಹಾರ ಘೋಷಿಸಿರುವ ಮುಖ್ಯಮಂತ್ರಿ ಕಮಲ್‌ನಾಥ್, ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ.

ಹೆಚ್ಚು ಕುಣಿದು ಕುಪ್ಪಳಿಸದಂತೆ ಹಾಗೂ ಸುಮ್ಮನೆ ಕೂರುವಂತೆ ಗಣಪತಿ ವಿಸರ್ಜನೆಗೆ ತೆರಳಿದ್ದ ಗುಂಪಿಗೆ ಮನವಿ ಮಾಡಿಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕೇಳಿ ಬರುತ್ತಿದೆ. ದೋಣಿಗಳು ಸರೋವರದ ದಂಡೆಯಿಂದ ಕೇವಲ 50 ಅಡಿ ಕ್ರಮಿಸಿದ್ದಾಗ ಈ ದುರಂತ ಸಂಭವಿಸಿದೆ.

ಮಹಾರಾಷ್ಟ್ರದ ಪುಣೆ, ನಾಗ್ಪುರ, ಮುಂಬೈ, ಅಮರಾವತಿ, ನಾಸಿಕ್, ಥಾಣೆ, ಸಿಂಧುದುರ್ಗ, ರತ್ನಗಿರಿ, ಧೂಲೆ, ಭಂದಾರಾ, ನಾಂದೇಡ್, ಅಹ್ಮದ್‌ನಗರ, ಅಕೋಲಾ ಹಾಗೂ ಸತಾರಾ ಜಿಲ್ಲೆಗಳಲ್ಲಿ ಒಟ್ಟು 23 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News