ವಾಯುಪಡೆಗೆ ಹೊಸ ಸಾಧನ ಖರೀದಿಗೆ ಬೇಕಾದ ಮೊತ್ತ ಎಷ್ಟು ಸಾವಿರ ಕೋಟಿ ಗೊತ್ತೇ ?

Update: 2019-09-14 04:20 GMT

ಹೊಸದಿಲ್ಲಿ: ಆಧುನೀಕರಣಕ್ಕೆ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಭಾರತೀಯ ವಾಯುಪಡೆ, ಹೊಸ ಸಾಧನಗಳ ಖರೀದಿಗಾಗಿ ಮತ್ತು ಈಗಾಗಲೇ ಖರೀದಿಗೆ ಕಾರ್ಯಾದೇಶ ನೀಡಿರುವ ಹೊಸ ಶಸ್ತ್ರಾಸ್ತ್ರಗಳು ಮತ್ತು ವ್ಯವಸ್ಥೆಗಳಿಗಾಗಿ ಹೆಚ್ಚುವರಿಯಾಗಿ 40 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಪ್ರಸಕ್ತ ಬಜೆಟ್‌ನಲ್ಲಿ ವಾಯುಪಡೆಗೆ 39300 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದ್ದು, ಇದು ತನ್ನ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಸಾಲದು; ಅನುದಾನ ಕೊರತೆಯನ್ನು ನೀಗಿಸುವ ಸಲುವಾಗಿ ಹೆಚ್ಚುವರಿ ನೆರವು ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಲಾಗಿದೆ. ಆಧುನೀಕರಣಕ್ಕಾಗಿ ಕನಿಷ್ಠ 40 ಸಾವಿರ ಕೋಟಿಯನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

"ವಾಯುಪಡೆಯ ಬೇಡಿಕೆ ಮತ್ತು ನಿಗದಿಪಡಿಸಿದ ಅನುದಾನದ ನಡುವೆ ದೊಡ್ಡ ಅಂತರವಿದೆ. ಆದ್ದರಿಂದ ಹೆಚ್ಚುವರಿ ಸಂಪನ್ಮೂಲ ಒದಗಿಸುವಂತೆ ಸರ್ಕಾರಕ್ಕೆ ಕೇಳಿದ್ದೇವೆ. ಡಿಸೆಂಬರ್‌ನಲ್ಲಿ ಅಂದಾಜು ಪರಿಷ್ಕರಿಸುವ ವೇಳೆ ವಾಯುಪಡೆಗೆ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಉದ್ದೇಶಿತ ದೊಡ್ಡ ಮೊತ್ತದ ಪ್ರಮುಖ ಖರೀದಿಗಳಲ್ಲಿ 114 ಹೊಸ ಮಧ್ಯಮತೂಕದ ಯುದ್ಧವಿಮಾನಗಳು, 83 ಲಘು ಯುದ್ಧ ವಿಮಾನಗಳು, 33 ಹೆಚ್ಚುವರಿ ಎಂಐಜಿ-29 ಹಾಗೂ ಸುಖೋಯ್-30 ವಿಮಾನಗಳು, ಆರು ವೈಮಾನಿಕ ಮರು ಇಂಧನ ಪೂರಣ ವಿಮಾನಗಳು, 56 ಹೊಸ ಮಧ್ಯಮ ಸಾರಿಗೆ ವಿಮಾನಗಳು, 70 ಮೂಲ ತರಬೇತಿ ವಿಮಾನಗಳು ಸೇರಿವೆ.

ಹೊಸ ಖರೀದಿಯ ಜತೆಗೆ ಈಗಾಗಲೇ ಖರೀದಿಗೆ ಗುತ್ತಿಗೆ ಮಾಡಿಕೊಂಡ ಸಾಧನಗಳು ಸೇರಿ 48 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News