ಕಪ್ಪುಹಣ ಕಾಯ್ದೆಯಡಿ ಮುಕೇಶ್ ಅಂಬಾನಿ, ಕುಟುಂಬಕ್ಕೆ ಐಟಿ ನೋಟಿಸ್: ವರದಿ

Update: 2019-09-14 07:38 GMT

ಮುಂಬೈ, ಸೆ.14: ಆದಾಯ ತೆರಿಗೆ ಇಲಾಖೆಯು 2015ರ ಕಾಳಧನ ಕಾಯಿದೆಯನ್ವಯ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ ಮತ್ತವರ ಮೂವರು ಮಕ್ಕಳಾದ ಅನಂತ್, ಆಕಾಶ್ ಹಾಗೂ ಇಶಾ ಅಂಬಾನಿಗೆ  ನೋಟಿಸ್ ಜಾರಿ ಮಾಡಿದೆ ಎಂದು The Indian Express ವಿಶೇಷ ವರದಿ ಪ್ರಕಟಿಸಿದೆ.

ಘೋಷಿಸದೇ ಇರುವ ವಿದೇಶಿ ಆದಾಯ ಹಾಗೂ ಸಂಪತ್ತುಗಳ ಕುರಿತಂತೆ ಮುಕೇಶ್ ಅಂಬಾನಿ ಮತ್ತವರ ಕುಟುಂಬಕ್ಕೆ ಈ ವರ್ಷದ ಮಾರ್ಚ್ 28, 2019ರಂದು ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಮುಂಬೈ ಆದಾಯ ತೆರಿಗೆ ಇಲಾಖೆ ಹಾಗೂ ಕೇಂದ್ರ ನೇರ ತೆರಿಗೆಗಳ ಮಂಡಳಿಯ ನಡುವೆ ಹಲವು ಹಿಂಜರಿಕೆಗಳ ನಂತರ ಈ ಐಟಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಆದರೆ ಐಟಿ ನೋಟಿಸ್ ಜಾರಿಯಾಗಿದೆ ಎಂಬ ವರದಿಗಳನ್ನು ರಿಲಯನ್ಸ್ ವಕ್ತಾರರು ನಿರಾಕರಿಸಿದ್ದಾರೆ.

ಸುಮಾರು 700 ಮಂದಿ ಭಾರತೀಯರು ಜಿನೇವಾದ ಎಚ್‍ಎಸ್‍ ಬಿಸಿಯಲ್ಲಿ ಖಾತೆಗಳನ್ನು ಹೊಂದಿದ್ದಾರೆಂಬ ಮಾಹಿತಿ ಸರಕಾರಕ್ಕೆ ದೊರೆತ ನಂತರ 2011ರಲ್ಲಿ ಐಟಿ ಇಲಾಖೆ ತನಿಖೆ ಆರಂಭಿಸಿತ್ತೆನ್ನಲಾಗಿದೆ. ಎಚ್‍ಎಸ್‍ ಬಿಸಿ ಜಿನೇವಾದಲ್ಲಿ 1,195 ಖಾತೆದಾರರಿದ್ದಾರೆಂದು 2015ರಲ್ಲಿ ನಡೆದ ಮಾಧ್ಯಮ ತನಿಖಾ ವರದಿಯಲ್ಲಿ ಸ್ವಿಸ್ ಲೀಕ್ಸ್ ಎಂದು ಕರೆಯಲ್ಪಡುವ ಇಂಟರ್‍ ನ್ಯಾಷನಲ್ ಕನ್ಸಾರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ ಹೇಳಿಕೊಂಡಿತ್ತು. ಈ ಖಾತೆದಾರರಲ್ಲಿ ವ್ಯಕ್ತಿಗಳು ಹಾಗೂ ಸಂಸ್ಥೆಗಳಿದ್ದವು. ಒಟ್ಟು 601 ಮಿಲಿಯನ್ ಡಾಲರ್ ಮೊತ್ತ ಹೊಂದಿದ್ದ  ತೆರಿಗೆದಾರರ ಸ್ವರ್ಗಗಳಲ್ಲಿರುವ ವಿದೇಶಿ ಸಂಸ್ಥೆಗಳಿಗೆ ಸೇರಿದ 14 ಎಚ್‍ಎಸ್‍ಬಿಸಿ ಜಿನೇವಾ ಖಾತೆಗಳು  ವಿವಿಧ ಮಧ್ಯವರ್ತಿಗಳ ಮೂಲಕ ರಿಲಯನ್ಸ್  ಗ್ರೂಪ್ ಜತೆ ನಂಟು ಹೊಂದಿದ್ದವು ಎಂದು ವರದಿಯೊಂದು ತಿಳಿಸಿತ್ತು.

ಫೆಬ್ರವರಿ 4ರ ಐಟಿ ತನಿಖಾ ವರದಿಯ ಪ್ರಕಾರ ಅಂಬಾನಿ ಕುಟುಂಬದ ಸದಸ್ಯರು ಸ್ವಿಸ್ ಲೀಕ್ಸ್ ನಲ್ಲಿ ನಮೂದಿಸಲಾಗಿದ್ದ 14 ಕಂಪೆನಿಗಳ ಪೈಕಿ ಒಂದು ಕಂಪೆನಿಯಿಂದ ಸಂಪೂರ್ಣ ಲಾಭ ಪಡೆದಿದ್ದರು. ಈ ಹಣವನ್ನು ವಿವಿಧ ವಿದೇಶಿ ಹಾಗೂ ದೇಶೀಯ ಸಂಸ್ಥೆಗಳ ಮೂಲಕ ಹೂಡಿಕೆ ಮಾಡಲಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News