ದುಬೈ ಶಾಪಿಂಗ್ ಫೆಸ್ಟಿವಲ್ ಮಾದರಿಯಲ್ಲಿ ವಾರ್ಷಿಕ ಶಾಪಿಂಗ್ ಉತ್ಸವ: ನಿರ್ಮಲಾ ಸೀತಾರಾಮನ್

Update: 2019-09-14 11:41 GMT

ಹೊಸದಿಲ್ಲಿ, ಸೆ.14: ಮಧ್ಯಮ ವರ್ಗದ ಮನೆ ಖರೀದಿದಾರರಿಗೆ ಹಾಗೂ ಗೃಹ ಯೋಜನೆಗಳಿಗೆ ಪ್ರೋತ್ಸಾಹ ನೀಡುವ  ಯೋಜನೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಘೋಷಿಸಿದ್ದಾರೆ. ಅರ್ಧದಲ್ಲಿಯೇ ನಿಂತ ಗೃಹ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು 20,000 ಕೋಟಿ ರೂ. ಮೀಸಲಿರಿಸುವ ಕುರಿತಂತೆ ಅವರು ಮಾಹಿತಿ ನೀಡಿದ್ದಾರೆ.

ದೇಶದ ಆರ್ಥಿಕತೆ ನಿಧಾನಗತಿಯಲ್ಲಿರುವ ಸಂದರ್ಭ ಸಚಿವೆಯ ಹೇಳಿಕೆ ಬಂದಿದೆ. ಅಪೂರ್ಣ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಸರಕಾರ ರೂ 10,000 ಕೋಟಿ ಒದಗಿಸಲಿದ್ದು, ಅಷ್ಟೇ ಮೊತ್ತವನ್ನು ಬಾಹ್ಯ ಹೂಡಿಕೆದಾರರು ಹೂಡಲಿದ್ದಾರೆ. ಮನೆ ನಿರ್ಮಾಣ ಸಾಲದ ಮೇಲಿನ ಬಡ್ಡಿ ದರಗಳನ್ನು ಇಳಿಸುವ ಪ್ರಸ್ತಾಪ ಕುರಿತಂತೆಯೂ ಸಚಿವೆ ಹೇಳಿದ್ದಾರೆ.

ರಫ್ತು ಉತ್ತೇಜಕ ಕ್ರಮಗಳನ್ನೂ ಸಚಿವೆ ಘೋಷಿಸಿದ್ದಾರೆ. ರಫ್ತು ಉತ್ಪನ್ನಗಳ ಮೇಲಿನ ಸುಂಕ ಹಾಗೂ ತೆರಿಗೆಗಳನ್ನು ತೆಗೆದು ಹಾಕುವ ಯೋಜನೆ ಮುಂದಿನ ವರ್ಷದ ಜನವರಿ 1ರಿಂದ ಆರಂಭಗೊಳ್ಳಲಿದೆ ಎಂದು ಸಚಿವೆ ಹೇಳಿದ್ದಾರೆ.

ರಫ್ತಿಗೆ ಅಗತ್ಯವಿರುವ ಬಂಡವಾಳ ನೀಡುವ ಬ್ಯಾಂಕುಗಳಿಗೆ ಹೆಚ್ಚುವರಿ ವಿಮಾ ಸೌಲಭ್ಯ ಒದಗಿಸಲಾಗುವುದು ಹಾಗೂ ಇದರಿಂದ ಸರಕಾರದ ಬೊಕ್ಕಸಕ್ಕೆ ರೂ 1700 ಕೋಟಿ ಹೊರೆ ಬೀಳಲಿದೆ ಎಂದು ಸಚಿವೆ ತಿಳಿಸಿದರು.

ಕೈಗಾರಿಕೆಗಳಿಗೆ ಪ್ರೋತ್ಸಾಹಕ ಕ್ರಮವಾಗಿ ದುಬೈ ಶಾಪಿಂಗ್ ಫೆಸ್ಟಿವಲ್ ಮಾದರಿಯಲ್ಲಿ ವಾರ್ಷಿಕ ಶಾಪಿಂಗ್ ಉತ್ಸವ  ಆಯೋಜಿಸಿ ಈ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News