ಹಾಲಿನ ಅಂಗಡಿಗಳಲ್ಲಿ ಕಡಕನಾಥ್ ಕೋಳಿಮಾಂಸದ

Update: 2019-09-14 14:52 GMT

ಭೋಪಾಲ,ಸೆ.14: ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅದನ್ನು ಹಾಲಿನ ಅಂಗಡಿಗಳ ಮೂಲಕ ಮಾರಾಟ ಮಾಡಲು ಮಧ್ಯಪ್ರದೇಶದ ಕಾಂಗ್ರೆಸ್ ನೇತೃತ್ವದ ಸರಕಾರವು ಉದ್ದೇಶಿಸಿದ್ದು,ಇದಕ್ಕೆ ಬಿಜೆಪಿ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.

ಆಕಳ ಹಾಲನ್ನು ‘ಪವಿತ್ರ ’ ಎಂದು ಪರಿಗಣಿಸಲಾಗಿರುವುದರಿಂದ ಸರಕಾರದ ಈ ಕ್ರಮವು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಲಿದೆ. ಹಾಲು ಮತ್ತು ಕಡಕನಾಥ್ ಕೋಳಿಮಾಂಸದ ಮಾರಾಟಕ್ಕೆ ಪ್ರತ್ಯೇಕ್ ಪಾರ್ಲರ್‌ಗಳನ್ನು ಸ್ಥಾಪಿಸುವಂತೆ ತಾನು ಸರಕಾರವನ್ನು ಆಗ್ರಹಿಸಲಿದ್ದೇನೆ ಎಂದು ಬಿಜೆಪಿ ಶಾಸಕ ರಾಮೇಶ್ವರ ಶರ್ಮಾ ಹೇಳಿದರು.

  ಸರಕಾರವು ಇಲ್ಲಿ ಮ.ಪ್ರ.ರಾಜ್ಯ ಜಾನುವಾರು ಮತ್ತು ಕೋಳಿ ಸಾಕಾಣಿಕೆ ಅಭಿವೃದ್ಧಿ ನಿಗಮದ ಮಿಲ್ಕ್ ಪಾರ್ಲರೊಂದರಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕಡಕನಾಥ್ ಕೋಳಿಮಾಂಸದ ಮಾರಾಟಕ್ಕೆ ಚಾಲನೆ ನೀಡಿದೆ ಎಂದು ಪಶು ಸಂಗೋಪನಾ ಸಚಿವ ಲಖನ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕಡಕನಾಥ್ ಕೋಳಿಮಾಂಸ ಹಾಲಿ ಪ್ರತಿ ಕೆಜಿಗೆ 900 ರೂ.ದರದಲ್ಲಿ ಮಾರಾಟವಾಗುತ್ತಿದೆ.

ರಾಜ್ಯದ ಜಬುವಾ ಜಿಲ್ಲೆಯ ಸ್ಥಳೀಯ ಉತ್ಪನ್ನವಾಗಿರುವ ಕಡಕನಾಥ್ ಕೋಳಿಮಾಂಸ ಕಪ್ಪುಬಣ್ಣದ್ದಾಗಿದ್ದು, ಪೋಷಕಾಂಶಗಳು ಮತ್ತು ವೈದ್ಯಕೀಯ ಗುಣಗಳನ್ನು ಹೊಂದಿದೆಯೆನ್ನಲಾಗಿರುವ ಅದು ಭಾರೀ ಬೇಡಿಕೆಯನ್ನು ಹೊಂದಿದೆ.

ರಾಜ್ಯಾದ್ಯಂತ ಇಂತಹ ಪಾರ್ಲರ್‌ಗಳ ಸ್ಥಾಪನೆಗಾಗಿ ಚರ್ಚೆಗಳು ನಡೆಯುತ್ತಿದ್ದು,ಯೋಜನೆಯ ಭವಿಷ್ಯವು ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಅವಲಂಬಿಸಿದೆ ಎಂದು ಸಿಂಗ್ ತಿಳಿಸಿದರು.

ಶಾಸಕ ಶರ್ಮಾರ ಆಕ್ಷೇಪ ಕುರಿತು ಅವರು,ಎರಡೂ ಉತ್ಪನ್ನಗಳ ಮಾರಾಟಕ್ಕಾಗಿ ಪಾರ್ಲರ್‌ನಲ್ಲಿ ಎರಡು ಪ್ರತ್ಯೇಕ ಕ್ಯಾಬಿನ್‌ಗಳನ್ನು ರೂಪಿಸಲಾಗುವುದು ಎಂದರು.

ಜಬುವಾ ಜಿಲ್ಲೆಯ ಕಡಕನಾಥ್ ಕೋಳಿಮಾಂಸವು ಜಿಐ ಟ್ಯಾಗ್‌ನ್ನು ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News