ಭಾರತದ ಮಡಿಲಿಗೆ ಅಂಡರ್- 19 ಏಶ್ಯ ಕಪ್

Update: 2019-09-14 18:21 GMT

ಕೊಲಂಬೊ, ಸೆ.14: ಎಡಗೈ ಸ್ಪಿನ್ನರ್ ಅಥರ್ವ ಅಂಕೋಲೆಕರ್ ಕಬಳಿಸಿದ ಐದು ವಿಕೆಟ್ ಗೊಂಚಲು ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಫೈನಲ್ ಪಂದ್ಯವನ್ನು 5ರನ್‌ನಿಂದ ರೋಚಕವಾಗಿ ಗೆದ್ದುಕೊಂಡಿರುವ ಭಾರತ ಅಂಡರ್-19 ಏಶ್ಯಕಪ್‌ನ್ನು ತನ್ನದಾಗಿಸಿಕೊಂಡಿದೆ.

ಶನಿವಾರ ನಡೆದ ಕಡಿಮೆ ಮೊತ್ತದ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 106 ರನ್ ಗಳಿಸಿದ್ದರೂ, ಎದುರಾಳಿ ಬಾಂಗ್ಲಾದೇಶವನ್ನು 33 ಓವರ್‌ಗಳಲ್ಲಿ 101 ರನ್‌ಗೆ ನಿಯಂತ್ರಿಸಿ ರೋಚಕ ಜಯ ದಾಖಲಿಸಿತು.

8 ಓವರ್‌ಗಳಲ್ಲಿ 28 ರನ್‌ಗೆ ಐದು ವಿಕೆಟ್‌ಗಳನ್ನು ಕಬಳಿಸಿದ 18ರ ಹರೆಯದ ಅಂಕೋಲೆಕರ್ ಭಾರತೀಯ ತಂಡದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದರು. ಅಂಕೋಲೆಕರ್ ಸ್ಪಿನ್ ಬೌಲಿಂಗ್ ಮೂಲಕ ಬಾಂಗ್ಲಾದೇಶದ ರನ್ ಚೇಸಿಂಗ್‌ಗೆ ತೊಡಕಾದರು. ಆರ್.ಪ್ರೇಮದಾಸ ಸ್ಟೇಡಿಯಂ ಪಿಚ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ ಆಕಾಶ್ ಸಿಂಗ್ (3-12)ಅಂಕೊಲೇಕರ್‌ಗೆ ಉತ್ತಮ ಸಾಥ್ ನೀಡಿದರು. ವಿ.ಪಾಟೀಲ್(1-25) ಹಾಗೂ ಎಸ್‌ಎಸ್ ಮಿಶ್ರಾ(1-27)ತಲಾ ಒಂದು ವಿಕೆಟ್ ಪಡೆದರು.

ಗೆಲ್ಲಲು 107 ರನ್ ಬೆನ್ನಟ್ಟಿದ ಬಾಂಗ್ಲಾದ ಪರವಾಗಿ ನಾಯಕ ಅಕ್ಬರ್ ಅಲಿ(23) ಹಾಗೂ ಮೃತ್ಯುಂಜಯ ಚೌಧರಿ(21)ಒಂದಷ್ಟು ಪ್ರತಿರೋಧ ಒಡ್ಡಿದರು. ಈ ಇಬ್ಬರು ಪೆವಿಲಿಯನ್‌ಗೆ ವಾಪಸಾದ ಬಳಿಕ ಕೆಳ ಕ್ರಮಾಂಕದಲ್ಲಿ ತಂಝಿಮ್ ಹಸನ್(12) ಹಾಗೂ ರಕಿಬುಲ್ ಹಸನ್(11) ಬಾಂಗ್ಲಾಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು. ಪ್ರತಿ ಹೋರಾಟ ನೀಡಿದ ಭಾರತ ಎದುರಾಳಿ ಬಾಂಗ್ಲಾವನ್ನು ಕಡಿಮೆ ಮೊತ್ತಕ್ಕೆ ಕಡಿವಾಣ ಹಾಕಿತು.

ಇದಕ್ಕೂ ಮೊದಲು ನಾಯಕ ಧುೃವ್ ಜುರೆಲ್(33) ಹಾಗೂ ಕೆಳ ಕ್ರಮಾಂಕದ ಆಟಗಾರ ಕರಣ್ ಲಾಲ್(37) ಉಪಯುಕ್ತ ಕೊಡುಗೆ ಸಹಾಯದಿಂದ ಭಾರತ 106 ರನ್ ಗಳಿಸಿತು.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತದ ನಿರ್ಧಾರ ತಪ್ಪೆಂದು ತಿಳಿಯಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಎಡಗೈ ವೇಗಿ ಮೃತ್ಯುಂಜಯ ಚೌಧರಿ(3-18) ಹಾಗೂ ಆಫ್ ಸ್ಪಿನ್ನರ್ ಶಮೀಮ್ ಹುಸೇನ್(3-8)ಭಾರತದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿ ಪರಿಣಮಿಸಿದರು.

ಆರಂಭಿಕ ಆಟಗಾರ ಅರ್ಜುನ್ ಆಝಾದ್(0)ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ತಂಝಿಮ್ ಹಸನ್ ಸಾಕಿಬ್ ಬೌಲಿಂಗ್‌ನಲ್ಲಿ ಅಕ್ಬರ್ ಅಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಮುಂದಿನ ಓವರ್‌ನಲ್ಲಿ ಎನ್.ಟಿ. ತಿಲಕ್ ಅವರು ಮೃತ್ಯುಂಜಯ್‌ಗೆ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಎಸ್.ವಿ. ಸರ್ಕಾರ್ ರನೌಟಾದರು. ಆಗ ಭಾರತದ ಸ್ಕೋರ್ 3 ವಿಕೆಟ್‌ಗೆ 8 ರನ್.

ಶಾಶ್ವತ್ ರಾವತ್(19) ಹಾಗೂ ನಾಯಕ ಧುೃವ್ ಜುರೆಲ್(33) ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ರಾವತ್ ಎಲ್ಬಿಡಬ್ಲು ಬಲೆಗೆ ಬಿದ್ದರು. ಎರಡು ಎಸೆತಗಳ ಬಳಿಕ ವರುಣ್(0)ಶೂನ್ಯಕ್ಕೆ ಔಟಾದರು. ಆಗ ಭಾರತದ ಸ್ಕೋರ್ 14.4 ಓವರ್‌ಗಳಲ್ಲಿ 53ಕ್ಕೆ 5.

ಕರಣ್(37) ಔಟಾಗುವ ಮೂಲಕ ಭಾರತದ ಅಂಡರ್-19 ತಂಡ 32.4 ಓವರ್‌ಗಳಲ್ಲಿ 106 ರನ್‌ಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರ್

► ಭಾರತ ಅಂಡರ್-19: 32.4 ಓವರ್‌ಗಳಲ್ಲಿ 106 ರನ್‌ಗೆ ಆಲೌಟ್

(ಧುೃವ್ ಜುರೆಲ್ 33, ಕರಣ್ ಲಾಲ್ 37, ಮೃತ್ಯುಂಜಯ ಚೌರಿ 3-18,ಶಮೀಮ್ ಹುಸೇನ್ 3-8)

► ಬಾಂಗ್ಲಾದೇಶ ಅಂಡರ್-19: 33 ಓವರ್‌ಗಳಲ್ಲಿ 101 ರನ್‌ಗೆ ಆಲೌಟ್

(ಅಕ್ಬರ್ ಅಲಿ 23, ಮೃತ್ಯುಂಜಯ ಚೌಧರಿ 21, ಅಥರ್ವ ಅಂಕೋಲೆಕರ್ 5-28,ಆಕಾಶ್ ಸಿಂಗ್ 3-12)

► ಪಂದ್ಯಶ್ರೇಷ್ಠ: ಅಥರ್ವ ಅಂಕೋಲೆಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News