ವಂಚನೆ ತಡೆ,ಮಾಹಿತಿ ಪ್ರಮಾಣೀಕರಣಕ್ಕೆ ಕ್ರಮಗಳನ್ನು ಶಿಫಾರಸು ಮಾಡಿದ ಎನ್‌ಎಚ್‌ಎ,ಐಆರ್‌ಡಿಎಐ

Update: 2019-09-15 15:58 GMT

 ಹೊಸದಿಲ್ಲಿ,ಸೆ.15: ಆಯುಷ್ಮಾನ ಭಾರತ ಯೋಜನೆಯನ್ನು ಅನುಷ್ಠಾನಿಸುವ ಹೊಣೆಯನ್ನು ಹೊತ್ತಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಹಾಗೂ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ವರದಿಯೊಂದನ್ನು ಮಂಡಿಸಿದ್ದು,ಮಾಹಿತಿ ಪ್ರಮಾಣೀಕರಣಕ್ಕಾಗಿ ಮತ್ತು ವಂಚನೆ ತಡೆಗಾಗಿ ಅತ್ಯುತ್ತಮ ಪದ್ಧತಿಗಳು,ಸಾಮಾನ್ಯ ಮಾನದಂಡಗಳು,ಸಹಭಾಗಿತ್ವ ಕ್ರಮಗಳು ಮತ್ತು ಮಾದರಿ ಐಟಿ ಮಾರ್ಗಸೂಚಿಯನ್ನು ವರದಿಯು ಶಿಫಾರಸು ಮಾಡಿದೆ.

  ಪರಸ್ಪರ ಆಸಕ್ತಿ ಮತ್ತು ಸಹಕಾರದ ಪ್ರಮುಖ ಕ್ಷೇತ್ರಗಳ ಬಗ್ಗೆ ಪರಿಶೀಲನೆ ನಡೆಸಲು ರಚಿಸಲಾಗಿದ್ದ ಎನ್‌ಎಚ್‌ಎ ಮತ್ತು ಐಆರ್‌ಡಿಎಐಗಳ ಜಂಟಿ ಕಾರ್ಯಪಡೆಯು ಆಸ್ಪತ್ರೆಗಳ ನೆಟ್‌ವರ್ಕ್ ವ್ಯವಸ್ಥಾಪನೆ, ಮಾಹಿತಿ ಪ್ರಮಾಣೀಕರಣ ಮತ್ತು ವಿನಿಮಯ,ಆರೋಗ್ಯ ವಿಮೆ ಹಕ್ಕು ಕೋರಿಕೆಗಳ ನಿರ್ವಹಣೆಗಾಗಿ ಸಾಮಾನ್ಯ ಐಟಿ ಮೂಲಸೌಕರ್ಯ ಹಾಗೂ ವಂಚನೆ ಮತ್ತು ದುರುಪಯೋಗ ನಿಯಂತ್ರಣ ಈ ನಾಲ್ಕು ಕ್ಷೇತ್ರಗಳನ್ನು ಮುಖ್ಯವಾಗಿಟ್ಟುಕೊಂಡು ವರದಿಯನ್ನು ಸಿದ್ಧಗೊಳಿಸಿದೆ.

 ಇಂದು ಶೇ.60ರಷ್ಟು ಭಾರತೀಯ ಜನಸಂಖ್ಯೆಯು ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನಾ (ಎಬಿಪಿಎಂಜೆಎವೈ) ಮತ್ತು ಖಾಸಗಿ ಪಾವತಿಯ ಆರೋಗ್ಯ ವಿಮೆ ವ್ಯಾಪ್ತಿಗೊಳಪಟ್ಟಿದೆ. ಇದು ದೇಶದಲ್ಲಿ ಆರೋಗ್ಯ ವಿಮೆ ಪರಿಸರ ವ್ಯವಸ್ಥೆಯನ್ನು ಬಲಗೊಳಿಸಲು,ಅದನ್ನು ಇನ್ನಷ್ಟು ದಕ್ಷ ಮತ್ತು ಪರಿಣಾಮಕಾರಿಯಾಗಿಸಲು ಎನ್‌ಎಚ್‌ಎ ಮತ್ತು ಐಆರ್‌ಡಿಎಐಗೆ ಅತ್ಯುತ್ತಮ ಅವಕಾಶವನ್ನು ಒದಗಿಸಿದೆ ಎಂದು ಎನ್‌ಎಚ್‌ದ ಸಿಇಒ ಇಂದುಭೂಷಣ ಅವರು ತಿಳಿಸಿದರು.

ವರದಿಯಲ್ಲಿನ ಶಿಫಾರಸುಗಳು ರೋಗಿಗಳಿಗೆ ಗುಣಮಟ್ಟದ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳಾಗಿವೆ. ಈ ವರದಿಯು ಎಬಿಪಿಎಂಜೆಎವೈನ ಪಾರದರ್ಶಕತೆ,ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಕೋಟ್ಯಂತರ ಭಾರತೀಯರಿಗೆ ನೇರಲಾಭಗಳನ್ನೊದಗಿಸಲು ನೆರವಾಗಲಿವೆ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News