ಪ್ರಧಾನಿ ಮೋದಿಗೆ ‘ಗೇಟ್ಸ್ ಪ್ರತಿಷ್ಠಾನ’ ಪ್ರಶಸ್ತಿ: ನೊಬೆಲ್ ಪುರಸ್ಕೃತರ ವಿರೋಧ

Update: 2019-09-15 17:09 GMT

  ನ್ಯೂಯಾರ್ಕ್,ಸೆ.15: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುರಸ್ಕಾರ ನೀಡಿ ಸನ್ಮಾನಿಸುವ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ನಿರ್ಧಾರಕ್ಕೆ ಅಮೆರಿಕದ ಕೆಲವು ಪ್ರಮುಖ ನ್ಯಾಯವಾದಿಗಳು, ಮಾನವಹಕ್ಕು ಕಾರ್ಯಕರ್ತರು ಹಾಗೂ ನೊಬೆಲ್ ಪುರಸ್ಕೃತರಿಂದ ವಿರೋಧ ವ್ಯಕ್ತವಾಗಿದೆ.

ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಅಲ್ಲಿ ಸೇನಾನಿರ್ಬಂಧಗಳನ್ನು ಹೇರಲಾಗಿದೆ ಮತ್ತು ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರಿಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಿರುವುದಾಗಿ ಅವರು ತಿಳಿಸಿದ್ದಾರೆ.

   ಭಾರತದಲ್ಲಿ ನೈರ್ಮಲೀಕರಣಕ್ಕಾಗಿ ಪ್ರಧಾನಿ ಮೋದಿಯವರ ಕೊಡುಗೆಯನ್ನು ಪರಿಗಣಿಸಿ ಅಮೆರಿಕ ಮೂಲದ ಬಿಲ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ಅವರಿಗೆ ಪ್ರಶಸ್ತಿಯನ್ನು ಘೋಷಿಸಿತ್ತು. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಮೋದಿ ಈ ಪುರಸ್ಕಾರವನ್ನು ಸ್ವೀಕರಿಸಲಿದ್ದಾರೆ.

  ಜಮ್ಮುಕಾಶ್ಮೀರದಲ್ಲಿ ವ್ಯಾಪಕವಾದ ಮಾನವಹಕ್ಕುಗಳ ಉಲ್ಲಂಘನೆಯಾಗತ್ತಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಅವ್ಯಾಹತವಾಗಿ ನಡೆಯುತ್ತಿವೆ ಹಾಗೂ 2002ರ ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರವಿದ್ದು, ಅವರಿಗೆ ಘೋಷಿಸಲಾಗಿರುವ ಪ್ರಶಸ್ತಿಯನ್ನು ರದ್ದುಪಡಿಸಬೇಕೆಂದು ನೊಬೆಲ್ ಪುರಸ್ಕೃತರಾದ ಮೈರೀದ್ ಮಾಗುರೆ, ತವಲ್ಕೊಲ್ ಅಬ್ದುಲ್ ಸಲಾಂ ಕರ್ಮಾನ್ ಹಾಗೂ ಶಿರಿನ್ ಇಬಾದಿ ಪ್ರತಿಷ್ಠಾನವನ್ನು ಆಗ್ರಹಿಸಿದ್ದಾರೆ.

ಮೋದಿ ನಾಯಕತ್ವದಲ್ಲಿ ಭಾರತವು ಅತ್ಯಂತ ಅಪಾಯಕಾರಿ ಹಾಗೂ ಮಾರಣಾಂತಿಕವಾದ ಅರಾಜಕತೆಯತ್ತ ಸಾಗುತ್ತದೆ ಮತ್ತು ನಿರಂತರವಾಗಿ ಮಾನವಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಉಲ್ಲಂಘನೆಯಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News