ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ಸಾಕ್ಷ್ಯಾಧಾರವಿಲ್ಲ: ಹಿಂದು ಗ್ರೂಪ್ ಅಧ್ಯಕ್ಷ ಎನ್.ರಾಮ್

Update: 2019-09-16 14:34 GMT

 ಚೆನ್ನೈ,ಸೆ.16: ‘ಕೊಲೆ ಆರೋಪಿಗಳ ’(ಇಂದ್ರಾಣಿ ಮತ್ತು ಪೀಟರ್ ಮುಖರ್ಜಿಯಾ) ಹೇಳಿಕೆಯನ್ನು ಬಿಟ್ಟರೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದರೂ ಅವರನ್ನು ಜೈಲಿಗೆ ಕಳುಹಿಸುವ ಮೂಲಕ ‘ರಾಕ್ಷಸೀಯ ಅನ್ಯಾಯ ’ವನ್ನು ಎಸಗಲಾಗಿದೆ ಎಂದು ಹಿಂದು ಗ್ರೂಪ್‌ನ ಟಿಎಚ್‌ಜಿ ಪಬ್ಲಿಕೇಷನ್ಸ್ ಪ್ರೈ.ಲಿ.ನ ಅಧ್ಯಕ್ಷ ಎನ್.ರಾಮ್ ಅವರು ಹೇಳಿದ್ದಾರೆ.

ರವಿವಾರ ಇಲ್ಲಿ ಚಿದಂಬರಂ ಬಂಧನವನ್ನು ಖಂಡಿಸಲು ಕರೆಯಲಾಗಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡಿದ ರಾಮ್, ಸಾಧ್ಯವಾದಷ್ಟು ದೀರ್ಘ ಸಮಯ ಚಿದಂಬರಂ ಅವರಿಗೆ ಸ್ವಾತಂತ್ರ್ಯವನ್ನು ನಿರಾಕರಿಸುವುದು ಈ ಬಂಧನದ ಹಿಂದಿರುವ ರೂವಾರಿಗಳ ಏಕೈಕ ಉದ್ದೇಶವಾಗಿದೆ ಮತ್ತು ಈ ದೇಶದ ಅತ್ಯುನ್ನತ ನ್ಯಾಯಾಲಯಗಳೂ ಈ ಕುತಂತ್ರಕ್ಕೆ ಬಲಿಯಾಗಿವೆ ಎಂದರು.

 ಪ್ರಕರಣದಲ್ಲಿ ಉನ್ನತ ನ್ಯಾಯಾಲಯಗಳು, ವಿಶೇಷವಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ಪ್ರತಿಸ್ಪಂದಿಸಿರುವ ರೀತಿಯನ್ನು ಕಟುವಾಗಿ ಟೀಕಿಸಬೇಕಿದೆ ಎಂದು ಹೇಳಿದ ಅವರು,ಅವು ಅಕ್ಷರಶಃ ಪ್ರಾಸಿಕ್ಯೂಷನ್‌ನ ಪಾತ್ರವನ್ನು ವಹಿಸಿದ್ದವು. ಏಳು ತಿಂಗಳವರೆಗೆ ತೀರ್ಪನ್ನು ಕಾಯ್ದಿರಿಸಲಾಗಿತ್ತು. ನ್ಯಾಯಾಧೀಶರ ನಿವೃತ್ತಿಗೆ ಕೆಲವೇ ಸಮಯದ ಮುನ್ನ ಹೊರಬಿದ್ದಿದ್ದ ತೀರ್ಪು ಚಿದಂಬರಂ ಅವರಿಗೆ ಮೇಲ್ಮನವಿಯನ್ನು ಸಲ್ಲಿಸುವ ಯಾವುದೇ ಅವಕಾಶದಿಂದ ವಂಚಿತರನ್ನಾಗಿಸಿತ್ತು. ಹೀಗಾಗಿ ವಕೀಲರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವಂತಾಗಿತ್ತು ಎಂದರು.

ಚಿದಂಬರಂ ಅವರಿಗೆ ಜಾಮೀನನ್ನು ನಿರಾಕರಿಸಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಭಾನುಮತಿ ಮತ್ತು ಬೋಪಣ್ಣ ಅವರ ಪೀಠದ ಆದೇಶದಲ್ಲಿ ಹಲವಾರು ವಾಸ್ತವಿಕ ತಪ್ಪುಗಳಿವೆ. ಉದಾಹರಣೆಗೆ ಚಿದಂಬರಂ ಅವರ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ ಮತ್ತು ಇದು ಸಂಪೂರ್ಣವಾಗಿ ತಪ್ಪಾಗಿದೆ ಎಂದ ರಾಮ್,ಇದೇ ಪೀಠದ ಮುಂದೆ ಪುನರ್ ಪರಿಶೀಲನಾ ಅರ್ಜಿಯನ್ನು ಅಥವಾ ಐವರು ನ್ಯಾಯಾಧೀಶರ ಪೀಠಕ್ಕೆ ಒಪ್ಪಿಸಲಾಗುವ ತಿದ್ದುಪಡಿ ಕೋರಿಕೆ ಅರ್ಜಿಯನ್ನು ತುರ್ತಾಗಿ ಸಲ್ಲಿಸುವ ಅಗತ್ಯವಿದೆ ಎಂದರು.

ಇಬ್ಬರು ಕೊಲೆ ಆರೋಪಿಗಳ ಹೇಳಿಕೆಯನ್ನು ಹೊರತುಪಡಿಸಿ ಯಾವುದೇ ಆಧಾರವಿಲ್ಲ. ದಾಖಲೆಗಳನ್ನು ಮುಚ್ಚಿಡುವ ಅಥವಾ ಹಸ್ತಕ್ಷೇಪ ನಡೆಸುವ ಯಾವುದೇ ಅಪಾಯವಿಲ್ಲ,ಯಾವುದೇ ಸಾಕ್ಷಿಗಳಿಗೆ ಬೆದರಿಕೆಯೂ ಇಲ್ಲ. ಈ ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲ ಎನ್ನುವುದು ತುಂಬ ನಾಚಿಕೆಗೇಡಿನ ವಿಷಯವಾಗಿದೆ ಎಂದೂ ರಾಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News