ರಾಷ್ಟ್ರಪತಿ ಭವನದ ಸಮೀಪ ಡ್ರೋನ್ ಹಾರಾಟ: ಅಮೆರಿಕದ ಇಬ್ಬರು ಪ್ರಜೆಗಳ ಬಂಧನ

Update: 2019-09-16 16:52 GMT

 ಹೊಸದಿಲ್ಲಿ, ಸೆ. 16: ಡ್ರೋನ್ ಹಾರಾಟ ನಿಷೇಧ ಉಲ್ಲಂಘಿಸಿ ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ಭವನದ ಸಮೀಪ ಡ್ರೋನ್ ಹಾರಾಟ ನಡೆಸಿದ ಅಮೆರಿಕ ಪ್ರಜೆಗಳಾದ ತಂದೆ ಹಾಗೂ ಮಗನನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಅಮೆರಿಕ ಮೂಲದ ಈ ಪ್ರಜೆಗಳನ್ನು ಪೀಟರ್ ಜೇಮ್ಸ್ ಲಿನ್ (65) ಹಾಗೂ ಪುತ್ರ ಗುಯಿಲೌಮ್ ಲೆಡ್‌ಬೆಟ್ಟರ್ (30) ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರವಾಸಿ ವೀಸಾದಲ್ಲಿ ಶನಿವಾರ ಭಾರತಕ್ಕೆ ಆಗಮಿಸಿದ್ದರು. ಇಬ್ಬರನ್ನು ಸೆಪ್ಟಂಬರ್ 14ರಂದು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರೋನ್‌ಗೆ ಅಳವಡಿಸಲಾದ ವೀಡಿಯೋ ಕೆಮರಾದ ಮೂಲಕ ತೆಗೆಯಲಾದ ಅತ್ಯುಚ್ಚ ಭದ್ರತೆಯ ಕೇಂದ್ರ ಕಾರ್ಯಾಲಯದ ಪ್ರದೇಶಗಳ ಕೆಲವು ಫೋಟೊಗಳನ್ನು ಪೊಲೀಸರು ಅವರಿಂದ ವಶಪಡಿಸಿಕೊಂಡಿದ್ದಾರೆ.

‘‘ನಾವು ಆನ್‌ಲೈನ್ ಪೋರ್ಟಲ್‌ಗೆ ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿ ವೀಡಿಯೊ ರೆಕಾರ್ಡ್ ಮಾಡಿದೆವು’’ ಎಂದು ಅವರು ಪೊಲೀಸರ ವಿಚಾರಣೆ ಸಂದರ್ಭ ಹೇಳಿದ್ದಾರೆ. ದಿಲ್ಲಿಯಲ್ಲಿ ಡ್ರೋನ್‌ಗಳ ಹಾರಾಟಕ್ಕೆ ನಿಷೇಧ ವಿಧಿಸಿರುವ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅವರು ಪೊಲೀಸರಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News