ಅಕ್ರಮ ವಲಸಿಗರು: ಅಮಿತ್ ಶಾಗೆ ಹೊಸ ಸವಾಲು!

Update: 2019-09-17 05:33 GMT

‘‘ಒಬ್ಬನೇ ಒಬ್ಬ ಅಕ್ರಮ ವಲಸಿಗನನ್ನೂ ದೇಶದಲ್ಲಿರಲು ಬಿಡುವುದಿಲ್ಲ. ಅವರನ್ನು ಒದ್ದೋಡಿಸುತ್ತೇವೆ. ಅಕ್ರಮ ವಲಸಿಗರು ಈ ದೇಶದ ಗೆದ್ದಲುಗಳು’’ ಎಂಬಿತ್ಯಾದಿ ಘೋಷಣೆಗಳ ಮೂಲಕ ಅಸ್ಸಾಂಮಿನಲ್ಲಿ ರಣೋತ್ಸಾಹದಿಂದ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪೌರತ್ವ ನೋಂದಣಿ ಮಾಡಿಸಿದ ಕೇಂದ್ರ ಸರಕಾರ, ಇದೀಗ ಗುಡ್ಡ ಅಗೆದು ಇಲಿಯನ್ನೂ ಹಿಡಿಯಲಾಗದೆ ವಿಲವಿಲ ಒದ್ದಾಡುತ್ತಿದೆ. ಎನ್‌ಆರ್‌ಸಿ ಹೆಸರಿನಲ್ಲಿ ಅಸ್ಸಾಮನ್ನು ಇನ್ನೊಂದು ರೊಹಿಂಗ್ಯಾ ಮಾಡುವುದಕ್ಕಾಗಿಯೇ ಕೋಟ್ಯಂತರ ರೂಪಾಯಿ ವ್ಯಯ ಮಾಡಿದ ಸರಕಾರ, ಈ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ನಿರಾಶಾ ಸ್ಥಿತಿಯಲ್ಲಿ ನಿಂತಿದೆ. ಸಂಘಪರಿವಾರ ಪ್ರಕಾರ ಇಂದು ಅಸ್ಸಾಮಿನಲ್ಲಿ ಕೋಟ್ಯಂತರ ಅಕ್ರಮ ವಲಸಿಗರಿದ್ದಾರೆ ಮತ್ತು ಅವರೆಲ್ಲ ಅಸ್ಸಾಮಿನ ಸವಲತ್ತುಗಳನ್ನು ಕಬಳಿಸುತ್ತಿದ್ದಾರೆ. ಆದರೆ ಎನ್‌ಆರ್‌ಸಿಯ ಬಳಿಕ 19 ಲಕ್ಷ ಅಕ್ರಮ ವಲಸಿಗರ ಹೆಸರುಗಳು ಹೊರಬಿದ್ದಿವೆ. ಈ ಪಟ್ಟಿಯಲ್ಲಿ ಇನ್ನಷ್ಟು ಹೆಸರುಗಳನ್ನು ಕೈ ಬಿಡುವ ಅವಕಾಶವಿರುವುದರಿಂದ ಹತ್ತು ಲಕ್ಷದಷ್ಟು ಅಕ್ರಮ ವಲಸಿಗ    ಹೆಸರುಗಳು ಅಂತಿಮ ಪಟ್ಟಿಯಲ್ಲಿ ದಾಖಲಾಗಬಹುದು. ಈ ಪಟ್ಟಿಯಲ್ಲಿರುವವರೆಲ್ಲರೂ ಮುಸ್ಲಿಮರಲ್ಲ ಎನ್ನುವುದು ಸಂಘಪರಿವಾರದ ಹೊಸ ತಲೆನೋವು.

ಸ್ವತಃ ಅಸ್ಸಾಮಿನ ಬಿಜೆಪಿಯೇ ಪಟ್ಟಿಯ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದೆ. ಇಷ್ಟಕ್ಕೂ ಈ ವಲಸಿಗರು ಯಾರು? ಅಸ್ಸಾಮಿನ ತೋಟಗಳಲ್ಲಿ ದುಡಿಯಲು ಬಂದ ಕೂಲಿ ಕಾರ್ಮಿಕರು. ಜೊತೆಗೆ ಬುಡಕಟ್ಟು ಜನರ ಹೆಸರುಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ಅಸ್ಸಾಮಿನಲ್ಲಿ ವಿಫಲವಾಗಿರುವ ಎನ್‌ಆರ್‌ಸಿಯ ಕುರಿತಂತೆ ಇದೀಗ ಉತ್ತರ ಪ್ರದೇಶ ಆಸಕ್ತಿಯನ್ನು ತೋರಿಸುತ್ತಿದೆ. ದೇಶಾದ್ಯಂತ ಪೌರತ್ವ ನೋಂದಣಿ ಹಮ್ಮಿಕೊಳ್ಳುವ ಕುರಿತಂತೆಯೂ ಅಮಿತ್ ಶಾ ಇಂಗಿತ ವ್ಯಕ್ತಪಡಿಸಿದ್ದಾರೆ. ದೇಶ ಭಾರೀ ಆರ್ಥಿಕ ಹಿಂಜರಿಕೆಯನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ, ದೇಶಕ್ಕೆ ಎಳ್ಳಷ್ಟ್ಟೂ ಲಾಭವನ್ನು ನೀಡದ ಎನ್‌ಆರ್‌ಸಿಯ ಹೆಸರನ್ನು ಮುಂದಿಟ್ಟುಕೊಂಡು ತನ್ನ ವೈಫಲ್ಯವನ್ನು ಮುಚ್ಚಿ ಹಾಕಬಹುದು ಎಂದು ಕೇಂದ್ರ ಸರಕಾರ ಭಾವಿಸಿದಂತಿದೆ.

ಎನ್‌ಆರ್‌ಸಿ ಪಟ್ಟಿಯಲ್ಲಿರುವವರು ಅಕ್ರಮ ವಲಸಿಗರೋ ಅಲ್ಲವೋ, ಆದರೆ ಈ ದೇಶದ ನಿಜವಾದ ಅಕ್ರಮ ವಲಸಿಗರ ಡಿಎನ್‌ಎ ಇದೀಗ ಪತ್ತೆಯಾಗಿ ಸಾಕಷ್ಟು ಚರ್ಚೆಯಲ್ಲಿದೆ. ಈ ಡಿಎನ್‌ಎ ಆಧಾರದಲ್ಲಿ ಈ ದೇಶದ ಮೂಲನಿವಾಸಿಗಳಲ್ಲದ ಅಕ್ರಮ ಪ್ರವೇಶಿಗರನ್ನು ಹೊರ ಹಾಕಲು ಅಮಿತ್ ಶಾ ಧಾರಾಳವಾಗಿ ಮುಂದಾಗಬಹುದಾಗಿದೆ. ಆರ್ಯನ್ನರು ಮಧ್ಯ ಏಶ್ಯದಿಂದ ವಲಸೆ ಬಂದರು ಎನ್ನುವ ಇತಿಹಾಸವನ್ನು ತಿದ್ದಲು ಸಂಘಪರಿವಾರ ಹಲವು ದಶಕಗಳಿಂದ ಪ್ರಯತ್ನಿಸುತ್ತಲೇ ಇದೆ. ಆರ್ಯನ್ನರೇ ಈ ದೇಶದ ಮೂಲನಿವಾಸಿಗಳು ಎನ್ನುವುದನ್ನು ಸಾಬೀತು ಪಡಿಸಲು ಸಿಂಧೂ ನಾಗರಿಕತೆಯ ಪ್ರಾಚೀನತೆಯನ್ನೂ ತಿರುಚುವುದಕ್ಕೆ ಸಾಕಷ್ಟು ಪ್ರಯತ್ನವನ್ನು ನಡೆಸುತ್ತಲೇ ಬಂದಿದ್ದಾರೆ. ಆದರೆ ಇವರೆಲ್ಲರ ಪ್ರಯತ್ನವನ್ನು ಸಾರಾಸಗಟಾಗಿ ನಿರಾಕರಿಸುವಂತೆ ವಂಶವಾಹಿಗಳ ಅಧ್ಯಯನದ ವರದಿಯೊಂದು ಹೊರ ಬಿದ್ದಿದೆ. ಸಿಂಧೂ ನದಿ ನಾಗರಿಕತೆ ಮತ್ತು ಆರ್ಯರ ವಲಸೆಯ ನಡುವೆ ಗೊಂದಲಗಳನ್ನು ಇದು ನಿವಾರಿಸಿದೆ.

ಈ ದೇಶದ ಸಂಸ್ಕೃತಿಯ ಮೇಲೆ ಪಾರಮ್ಯವನ್ನು ಸಾಧಿಸಲು ಯತ್ನಿಸುತ್ತಿರುವ ವೈದಿಕ ಶಕ್ತಿಗಳಿಗೆ ಈ ಅಧ್ಯಯನ ವರದಿ ಭಾರೀ ಹಿನ್ನಡೆಯನ್ನು ನೀಡಿದೆ. ವಿಶ್ವದ ಪ್ರಾಚೀನ ನಾಗರಿಕತೆ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿರುವ ಸಿಂಧೂನದಿ ನಾಗರಿಕತೆಯ ಮೇಲೆ ಹಕ್ಕು ಸಾಧಿಸಲು ಆರ್ಯನ್ ಮೂಲಗಳು ಹೊರಟಿರುವುದು ಇಂದು ನಿನ್ನೆಯಲ್ಲ. ಈ ನಾಗರಿಕತೆಯ ಹಿಂದಿರುವವರು ದ್ರಾವಿಡರೇ, ಆರ್ಯನ್ನರೇ ಎನ್ನುವ ಕುರಿತಂತೆ ಸ್ವತಃ ಸಂಶೋಧಕರಲ್ಲೇ ಭಿನ್ನಾಭಿಪ್ರಾಯಗಳಿದ್ದವು. ಆದರೆ ಕೆಲ ವರ್ಷಗಳ ಹಿಂದೆ ರಾಖಿಗರಿಯಲ್ಲಿ ದೊರೆತ 4600 ವರ್ಷಗಳಷ್ಟು ಪುರಾತನ ಮಾನವ ಅಸ್ಥಿ ಪಂಜರದ ಮಾದರಿಗಳನ್ನು ಸಂಗ್ರಹಿಸಿ, ಅದರ ಆಳ ಅಧ್ಯಯನ ನಡೆಸಿದ ಸಂಶೋಧಕರು ಇವರಲ್ಲಿ ಆರ್ಯನ್ನರ ಡಿಎನ್‌ಎಯನ್ನು ನಿರಾಕರಿಸಿದ್ದಾರೆ. ಆರ್ಯರು ಈ ನೆಲಕ್ಕೆ ಕಾಲಿಡುವುದಕ್ಕೆ ಮುನ್ನ ಅಂದರೆ ಸುಮಾರು 3000 ವರ್ಷಗಳ ಮುಂಚೆಯೇ ವಿಶ್ವಕ್ಕೆ ಮಾದರಿಯಾಗಿದ್ದ ನಾಗರಿಕತೆಯನ್ನು ಇಲ್ಲಿನ ಜನ ಕಟ್ಟಿ ಬೆಳೆಸಿದ್ದರು ಎನ್ನುವುದನ್ನು ಈ ಸಂಶೋಧನೆ ಕೊನೆಗೂ ಸಾಬೀತು ಪಡಿಸಿದೆ. ಸಿಂಧೂನಾಗರಿಕತೆಯೊಂದಿಗೆ ಈ ದೇಶದ ದ್ರಾವಿಡ ಸಂಸ್ಕೃತಿ ನೇರ ಸಂಬಂಧವನ್ನು ಹೊಂದಿರುವುದೂ ಸಂಶೋಧನೆಯಲ್ಲಿ ಗೊತ್ತಾಗಿದೆ. ಈ ಸಂಶೋಧನೆಗೆ ಜಾಗತಿಕವಾಗಿ ಭಾರೀ ಮಹತ್ವವಿದೆ.

ಮುಖ್ಯವಾಗಿ ಈ ಸಂಶೋಧನೆ ಯಾವುದೋ ಆರೆಸ್ಸೆಸ್‌ನ ಶಾಖೆಯೊಳಗಿನ ಕೆಲವು ಗೊಡ್ಡು ಸಂಪ್ರದಾಯವಾದಿಗಳು ಮಾಡಿರುವುದಲ್ಲ. ಅಸ್ಥಿಪಂಜರದ ವಂಶವಾಹಿಗಳ ವಿಶ್ಲೇಷಣೆ ನಡೆದಿರುವುದು ಅಮೆರಿಕದಲ್ಲಿ. ಖ್ಯಾತ ತಳಿ ವಿಜ್ಞಾನಿ ಡೇವಿಡ್ ರೀಚ್ ಅವರ ಪ್ರಯೋಗಾಲಯದಲ್ಲಿ. ಈ ಕುರಿತಂತೆ ವಿಶ್ಲೇಷಣೆ ನಡೆಸಲು ಅರ್ಹವಾಗಿರುವ ಪ್ರಯೋಗಾಲಯ ಭಾರತದಲ್ಲಿ ಇಲ್ಲ. ಡೇವಿಡ್ ರೀಚ್ ತಂಡದಲ್ಲಿ ಅಂತರ್‌ರಾಷ್ಟ್ರೀಯ ತಳಿ ವಿಜ್ಞಾನಿಗಳಲ್ಲದೆ, ವಾಗೀಶ್ ನರಸಿಂಹನ್, ನೀರಜ್ ರಾಯ್, ಪ್ರಿಯಾ ಮೂರ್ಜಾನಿ ಮೊದಲಾದ ಭಾರತೀಯ ವಿಜ್ಞಾನಿಗಳೂ ಇದ್ದರು. ದುರಂತವೆಂದರೆ, ಸಂಘಪರಿವಾರ ಈ ದೇಶದ ಎಲ್ಲಾ ತನಿಖಾ ಸಂಸ್ಥೆಗಳು, ವಿಶ್ವ ವಿದ್ಯಾನಿಲಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಂತೆಯೇ ಈ ವಿಷಯದಲ್ಲಿ ಸಂಶೋಧನೆಯ ದಿಕ್ಕನ್ನೇ ತಿರುಚಲು ಕೆಲವು ವಿಜ್ಞಾನಿಗಳನ್ನು ಬಳಸುತ್ತಿರುವುದು. ಈ ಸಂಶೋಧನೆಯಲ್ಲಿ ಭಾಗವಹಿಸಿದ ವಿಜ್ಞಾನಿಗಳಲ್ಲಿ ಪುಣೆಯ ಡೆಕ್ಕನ್ ಕಾಲೇಜಿನ ಸಂಶೋಧಕ ಪ್ರೊ. ವಸಂತ ಶಿಂಧೆ ಕೂಡ ಒಬ್ಬರು. ರಾಖಿಗರಿ ಸಂಶೋಧನೆಯ ಫಲಿತಾಂಶಗಳು ಹೊರ ಬೀಳುತ್ತಿರುವ ಸಂದರ್ಭದಲ್ಲಿ, ಅದನ್ನು ಬಿಡುಗಡೆಗೊಳಿಸದಂತೆ ಈ ಪ್ರೊಫೆಸರ್ ಅವರಿಗೆ ಕೆಲವು ರಾಜಕೀಯ ಶಕ್ತಿಗಳು ವರ್ಷದ ಹಿಂದೆ ಒತ್ತಡ ಹೇರಿದ್ದವು. ಈ ಒತ್ತಡದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸಂಘಪರಿವಾರದ ಹಿರಿಯರು ಪ್ರತಿಪಾದಿಸಿಕೊಂಡು ಬಂದ ಆರ್ಯನ್ ಸಿದ್ಧಾಂತಕ್ಕೆ ತೀರಾ ವಿರುದ್ಧವಾಗಿದ್ದುದರಿಂದಲೇ ವರದಿಗಳು ಬಿಡುಗಡೆಯಾಗುವುದು ಅವರಿಗೆ ಬೇಡವಾಗಿತ್ತು. ಆದರೆ ಇತ್ತೀಚೆಗೆ ಈ ಸಂಶೋಧನೆಯ ಮಹತ್ವದ ವಿವಿಧ ವಿವರಗಳು ಅಂತರ್‌ರಾಷ್ಟ್ರೀಯ ಮಟ್ಟದ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಇದೇ ಶಿಂಧೆಯವರು ಪತ್ರಿಕಾಗೋಷ್ಠಿ ಕರೆದು, ಫಲಿತಾಂಶವನ್ನೇ ತಿರುಚಿ ಹೇಳಿದರು.

ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ ಇವರ ಮಾತುಗಳನ್ನು ಆಧರಿಸಿ ಕೆಲವು ಪತ್ರಿಕೆಗಳು ‘‘ಆರ್ಯರು ವಲಸಿಗರಲ್ಲ’’, ‘‘ಆರ್ಯರ ದಾಳಿಯನ್ನು ಸಂಶೋಧನೆಗಳು ನಿರಾಕರಿಸಿವೆ’’ ಎಂಬಿತ್ಯಾದಿಯಾಗಿ ಬರೆದವು. ಆದರೆ ಸಂಶೋಧನೆಯಲ್ಲಿ ಮಹತ್ವದ ಪಾತ್ರವಹಿಸಿದ ಡೇವಿಡ್ ರೀಚ್ ಮತ್ತು ಅವರ ಸಹೋದ್ಯೋಗಿಗಳು ‘‘ಶಿಂಧೆಯವರ ಯಾವುದೇ ಅಭಿಪ್ರಾಯಗಳು ಸಂಶೋಧನೆಯಲ್ಲಿ ಕಂಡು ಬರುವುದಿಲ’’ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಬಹುಶಃ ಈ ಸಂಶೋಧನೆಯೇನಾದರೂ ಭಾರತದ ಪ್ರಯೋಗಾಲಯದಲ್ಲಿ ನಡೆದಿದ್ದರೆ ವಸಂತ ಶಿಂಧೆಯನ್ನು ಬಳಸಿಕೊಂಡು, ಭಾರತದ ಪ್ರಾಚೀನತೆಗೆ ಜನಿವಾರ ತೊಡಿಸಿ, ವೈದಿಕತೆಯೇ ಭಾರತದ ಸಂಸ್ಕೃತಿ ಎಂದು ಘೋಷಿಸಿ ಬಿಡುತ್ತಿದ್ದರೇನೋ. ಅದೇನೇ ಇರಲಿ. ವಲಸಿಗರನ್ನು ಉಚ್ಚಾಟಿಸುವ ಅಮಿತ್ ಶಾ ಅವರ ಮಹಾನ್ ಕಾರ್ಯಕ್ಕೆ ಈ ಸಂಶೋಧನೆ ಸಹಾಯ ಮಾಡಬಹುದು. ಯಾರು ಈ ದೇಶಕ್ಕೆ ಮೊದಲು ವಲಸೆ ಬಂದಿದ್ದಾರೆಯೋ ಅವರನ್ನು ಮೊದಲು ಒದ್ದು ಓಡಿಸಲಿ. ಸದ್ಯಕ್ಕೆ ದೇಶವನ್ನು ಹಿಂದಿ ಹೇರಿಕೆಯ ಮೂಲಕ ಒಂದಾಗಿಸುವುದಲ್ಲ, ಹಿಂದಿಯನ್ನು ಹೊರ ದಬ್ಬುವುದರ ಮೂಲಕ ಒಂದಾಗಿಸಬೇಕಾಗಿದೆ ಎನ್ನುವುದನ್ನು ಅವರು ಅರಿತುಕೊಳ್ಳುವುದಕ್ಕೂ ಈ ಸಂಶೋಧನೆ ಸಹಾಯ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News