ರಶ್ಯದಿಂದ ತೈಲ ಆಮದು ಹೆಚ್ಚಿಸಲು ಭಾರತ ಚಿಂತನೆ: ಸಚಿವ ಧರ್ಮೇಂದ್ರ ಪ್ರಧಾನ್

Update: 2019-09-17 17:46 GMT

ಹೊಸದಿಲ್ಲಿ/ಮಾಸ್ಕೊ, ಸೆ. 17: ರಶ್ಯಾದಿಂದ ತೈಲ ಆಮದು ಹೆಚ್ಚಿಸಲು ಭಾರತ ಚಿಂತಿಸುತ್ತಿದೆ ಎಂದು ತೈಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಹೇಳಿದ್ದಾರೆ. ಸೌದಿ ಅರೇಬಿಯಾದ ತೈಲ ಸ್ಥಾವರಗಳ ಮೇಲೆ ದಾಳಿ ನಡೆದು ಉತ್ಪಾದನೆ ಸಾಮರ್ಥ್ಯ ಇಳಿಕೆಯಾದ ಬಳಿಕ ತೈಲ ಬೆಲೆ ಹೆಚ್ಚಿದ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಈ ಹೇಳಿಕೆ ನೀಡಿದ್ದಾರೆ. ಭಾರತದ ತ್ವರಿತ ಬೆಳವಣಿಗೆಯಾಗುತ್ತಿರುವ ಮಾರುಕಟ್ಟೆ ಪಾಲನ್ನು ಹಿಡಿಯುವಲ್ಲಿ ರಶ್ಯಾಕ್ಕೆ ಸೌದಿ ಅರೇಬಿಯಾ, ಖತರ್ ಹಾಗೂ ಯುಎಇ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

ತೈಲ ಉತ್ಪಾದಕ ರೋಸ್‌ನೆಫ್ಟ್‌ನ ಮುಖ್ಯಾಧಿಕಾರಿಯನ್ನು ತಾನು ಭೇಟಿಯಾಗಿದ್ದೇನೆ. ರಶ್ಯದ ತೈಲ ಗಣಿಯಲ್ಲಿ ತಮ್ಮ ಹೂಡಿಕೆ ಹೆಚ್ಚಿಸಲು ಭಾರತದ ನಾಲ್ಕು ಕಂಪೆನಿಗಳು ಯೋಜಿಸಿವೆ ಎಂದು ಪ್ರಧಾನ್ ತಿಳಿಸಿದ್ದಾರೆ. ‘‘ಇಂದು ನಾನು ರೋಸ್‌ನೆಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಗೋರ್ ಸೆಚಿನ್ ಅವರನ್ನು ಭೇಟಿಯಾದೆ. ತೈಲ ಆಮದಿನ ಸಾಧ್ಯತೆ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ’’ ಎಂದು ಪ್ರಧಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News