ವಿನೇಶ್ ಪೋಗಟ್ ಪ್ರಶಸ್ತಿ ಕನಸು ಭಗ್ನ

Update: 2019-09-17 17:54 GMT

ಕಝಖ್‌ಸ್ತಾನ, ಸೆ.17: ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಪೋಗಟ್ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳವಾರ ಹಾಲಿ ಚಾಂಪಿಯನ್ ಜಪಾನ್‌ನ ಮಾಯು ಮುಕೈಡಾ ವಿರುದ್ಧ 0-7 ಅಂತರದಿಂದ ಸೋಲುಣ್ಣುವ ಮೂಲಕ ಪ್ರಶಸ್ತಿ ಗೆಲ್ಲುವ ಸ್ಪರ್ಧೆಯಿಂದ ಹೊರ ನಡೆದರು.

ವಿನೇಶ್ ಈ ಋತುವಿನಲ್ಲಿ ಸತತ ಎರಡನೇ ಬಾರಿ ಜಪಾನ್ ಕುಸ್ತಿಪಟು ಮುಕೈಡಾಗೆ ಸೋತಿದ್ದಾರೆ. ಚೀನಾದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ಮುಕೈಡಾಗೆ ವಿನೇಶ್ ಶರಣಾಗಿದ್ದರು.

ವಿನೇಶ್ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್‌ಪಟ್ಟಕ್ಕೇರಿದ್ದು, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈತನಕ ಪದಕ ಜಯಿಸಿಲ್ಲ. ಮುಕೈಡಾ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿನೇಶ್‌ಗೆ ಕಂಚಿನ ಪದಕಕ್ಕಾಗಿ ಸ್ಪರ್ಧಿಸುವ ಅವಕಾಶ ಲಭಿಸಿದೆ. ಮಾತ್ರವಲ್ಲ ಟೋಕಿಯೊ ಒಲಿಂಪಿಕ್ಸ್ ಕ್ವಾಲಿಫಿಕೇಶನ್‌ಗೂ ಅರ್ಹತೆ ಪಡೆಯಬಹುದು.

ರಿಪಿಚೇಜ್ ಸುತ್ತಿನಲ್ಲಿ ವಿನೇಶ್ ಮೂವರು ಕುಸ್ತಿಪಟುಗಳನ್ನು ಸೋಲಿಸಿದರೆ ಕಂಚು ಗೆಲ್ಲಬಹುದು.

53 ಕೆಜಿ ವಿಭಾಗದಲ್ಲಿ ಸ್ಪರ್ಧೆಗಿಳಿದ ವಿನೇಶ್ ಮೊದಲ ಸುತ್ತಿನ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸೋಫಿಯಾ ಮ್ಯಾಟ್‌ಸನ್‌ರನ್ನು 13-0 ಅಂತರದಿಂದ ಮಣಿಸಿ ಶಾಕ್ ನೀಡಿದರು. ಆದರೆ, ಬಹುನಿರೀಕ್ಷಿತ ವಿಶ್ವದ ನಂ.2ನೇ ಕುಸ್ತಿಪಟು ಮುಕೈಡಾ ವಿರುದ್ಧ ಪಂದ್ಯದಲ್ಲಿ ತನ್ನ ಎಂದಿನ ಶೈಲಿಯ ದಾಳಿ ನಡೆಸಲು ವಿಫಲವಾದ ವಿನೇಶ್ 0-7 ಅಂತರದಿಂದ ಸೋತಿದ್ದಾರೆ.

ಮೊದಲ 60-70 ಸೆಕೆಂಡ್‌ನಲ್ಲಿ ಸ್ಕೋರ್ ದಾಖಲಾಗಲಿಲ್ಲ. ವಿನೇಶ್ ಮೊದಲಿಗೆ ಪಾಯಿಂಟ್ ಕಳೆದುಕೊಂಡರು. ಆ ನಂತರ ಪ್ರಾಬಲ್ಯ ಸಾಧಿಸಿದ ಜಪಾನ್ ಕುಸ್ತಿಪಟು 7-0 ಮುನ್ನಡೆ ಸಾಧಿಸಿದರು. ವಿನೇಶ್ ಪ್ರತಿದಾಳಿ ನಡೆಸುವ ಅಗತ್ಯವಿತ್ತು. ಆದರೆ, ಮುಕೈಡಾ ಅದಕ್ಕೆ ಅವಕಾಶವನ್ನೇ ನೀಡದೇ ಬಂಡೆಗಲ್ಲಿನಂತೆ ನಿಂತರು. ವಿನೇಶ್ ಅವರು ಮುಕೈಡಾ ಎಡಗಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆದರೆ, ಅದನ್ನು ಪಾಯಿಂಟ್ಸ್ ಆಗಿ ಪರಿವರ್ತಿಸಲು ವಿಫಲರಾದರು. ಕಳೆದ ತಿಂಗಳು ಪೊಲೆಂಡ್ ಓಪನ್ ಪ್ರಶಸ್ತಿ ಜಯಿಸಿದ್ದ ವಿನೇಶ್ ಆರು ಬಾರಿಯ ವಿಶ್ವ ಚಾಂಪಿಯನ್ ಸೋಫಿಯಾರನ್ನು ಸೋಲಿಸಿದ್ದರು. ಮತ್ತೊಂದು ಒಲಿಂಪಿಕ್ಸ್ ವಿಭಾಗದಲ್ಲಿ ಸೀಮಾ ಬಿಸ್ಲಾ(50ಕೆಜಿ)ಮೂರು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಮರಿಯಾ ಸ್ಟ್ಯಾಡ್‌ನಿಕ್ ವಿರುದ್ಧ 2-9 ಅಂತರದಿಂದ ಸೋತಿದ್ದಾರೆ. ಅಝರ್‌ಬೈಜಾನ್‌ನ ಸೀಮಾ ಸೆಮಿ ಫೈನಲ್‌ಗೆ ತಲುಪಿದ್ದು, ಸೀಮಾ ಈಗಲೂ ಸ್ಪರ್ಧಾಕಣದಲ್ಲಿ ಉಳಿದಿದ್ದಾರೆ.

ಒಲಿಂಪಿಕ್ಸ್‌ಯೇತರ ವಿಭಾಗದಲ್ಲಿ 72 ಕೆಜಿ ಕ್ವಾಲಿಫಿಕೇಶನ್ ಪಂದ್ಯದಲ್ಲಿ ಕೋಮಲ್ ಗೋಲೆ ಟರ್ಕಿಯ ಬೆಸ್ಟೆ ಅಲ್ಟಗ್ ವಿರುದ್ಧ 1-4 ಅಂತರದಿಂದ ಸೋತಿದ್ದಾರೆ. 55 ಕೆಜಿ ವಿಭಾಗದಲ್ಲಿ ಲಲಿತಾ ಮಂಗೋಲಿಯದ ಬೊಲೊರ್ಟುಯಾ ಬಾಟ್ ಒಚಿರ್‌ಗೆ 3-10 ಅಂತರದಿಂದ ಹೀನಾಯವಾಗಿ ಶರಣಾದರು. ಬೊಲೊರ್ಟುಯಾ ಹಾಗೂ ಅಲ್ಟಗ್ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದ ಹಿನ್ನೆಲೆಯಲ್ಲಿ ಲಲಿತಾ ಹಾಗೂ ಕೋಮಲ್ ಚಾಂಪಿಯನ್‌ಶಿಪ್‌ನಿಂದ ಹೊರಗುಳಿದಿದ್ದಾರೆ. *ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ

130 ಕೆಜಿ ರಿಪಿಚೇಜ್ ಸುತ್ತಿನಲ್ಲಿ ಇಸ್ಟೋನಿಯದ ಹೆಕಿ ನಬಿ ವಿರುದ್ಧ ನವೀನ್ ಸೋಲುಂಡಿದ್ದಾರೆ.ಈ ಮೂಲಕ ಗ್ರೀಕೊ-ರೋಮ್ ಶೈಲಿಯ ಕುಸ್ತಿವಿಭಾಗದಲ್ಲಿ ಭಾರತದ ಸವಾಲು ಅಂತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News