ಮಾಜಿ ಕ್ರಿಕೆಟಿಗ ಚಂದ್ರಶೇಖರ್ ಆತ್ಮಹತ್ಯೆ ಹಿಂದೆ ಬೆಟ್ಟಿಂಗ್ ಜಾಲದ ಕರಿಛಾಯೆ: ಪೊಲೀಸರ ತನಿಖೆ

Update: 2019-09-17 18:04 GMT

ಚೆನ್ನೈ/ಮುಂಬೈ, ಸೆ.17: ತಮಿಳುನಾಡು ಪ್ರೀಮಿಯರ್ ಲೀಗ್(ಟಿಎನ್‌ಪಿಎಲ್)ದಿಢೀರನೇ ಭಾರತೀಯ ಕ್ರಿಕೆಟ್‌ನಲ್ಲಿ ವಿವಾದವನ್ನು ಸೃಷ್ಟಿಸಿದೆ. ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿರುವ ಟಿಎನ್‌ಪಿಎಲ್ ತಂಡದ ಮಾಲಕ, ಮಾಜಿ ಕ್ರಿಕೆಟಿಗ ವಿ.ಬಿ. ಚಂದ್ರಶೇಖರ್ ಅವರ ತಂಡ ಸೇರಿದಂತೆ ಹಲವು ತಂಡಗಳ ಮೇಲೆ ಬುಕ್ಕಿಗಳು ನಿಯಂತ್ರಣ ಸಾಧಿಸಿದ್ದಾರೆ ಎಂಬ ವರದಿ ಸೋಮವಾರ ಬಂದಿತ್ತು. ಈ ವರದಿಯಿಂದ ಚೆನ್ನೈ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.

ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಚಂದ್ರಶೇಖರ್ ಅವರ ಆತ್ಮೀಯ ಮಿತ್ರರು ಹಾಗೂ ರಾಜ್ಯದ ಕ್ರಿಕೆಟಿಗರನ್ನು ವಿಚಾರಣೆ ನಡೆಸಿದಾಗ ಸಂಭಾವ್ಯ ಬೆಟ್ಟಿಂಗ್ ಜಾಲದ ಬಗ್ಗೆ ಮಾಹಿತಿ ಲಭಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದಲ್ಲಿ ಕೆಲವರು ನೇರ ಸಂಬಂಧ ಹೊಂದಿರದೇ ಇದ್ದರೂ, ನಾವು ಕೆಲವು ಪ್ರಮುಖ ಅಂಶವನ್ನು ದಾಖಲಿಸಿಕೊಂಡಿದ್ದು, ಮುಂಬೈ ಹಾಗೂ ದಿಲ್ಲಿಯಲ್ಲಿರುವ ನಮ್ಮ ಸಹೋದ್ಯೋಗಿಗಳಿಗೆ ಈ ಮಾಹಿತಿಯನ್ನು ರವಾನಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಯು)ದಿಂದ ವಿವರವಾದ ಪ್ರಾಥಮಿಕ ತನಿಖೆಗೆ ಒಳಗಾಗಿರುವ ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿ ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ) ಹಲವಾರು ಅನಾಮಧೇಯ ಪತ್ರಗಳನ್ನು ಸ್ವೀಕರಿಸಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿರುವ ಕೆಲವು ಹೆಸರುಗಳು ಪ್ರಕರಣದತ್ತ ನಮ್ಮ ದೃಷ್ಟಿ ಹರಿಸುವಂತೆ ಮಾಡಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ನಿರ್ದಿಷ್ಟ ಆಟಗಾರರನ್ನು ಬುಕ್ಕಿಗಳು ಸಂಪರ್ಕಿಸಿದ್ದಾರೆ. ಆ ವಿಚಾರವನ್ನು ಆಟಗಾರರು ನಮ್ಮ ಗಮನಕ್ಕೆ ತಂದಿದ್ದಾರೆ ಎಂದು ದೃಢಪಡಿಸಿರುವ ಎಸಿಯು, ಯಾವುದೇ ತಂಡದ ಆಟಗಾರ ಹಾಗೂ ಮಾಲಕರನ್ನು ತನಿಖೆಗೆ ಒಳಪಡಿಸಿಲ್ಲ ಎಂದಿದೆ.

ಆಟಗಾರರು ನೀಡಿದ ಮಾಹಿತಿಯ ಮೇರೆಗೆ ಆಟಗಾರರನ್ನು ಸಂಪರ್ಕಿಸಿದ ವ್ಯಕ್ತಿಯನ್ನು ಹುಡುಕಲು ಯತ್ನಿಸುತ್ತಿದ್ದೇವೆ. ಈ ಕುರಿತು ಮಾಹಿತಿ ನೀಡಿರುವ ಆಟಗಾರರನ್ನು ತನಿಖೆಗೆ ಒಳಪಡಿಸುವುದಿಲ್ಲ ಎಂದು ಎಸಿಯು ಮುಖ್ಯಸ್ಥ ಅಜಿತ್ ಸಿಂಗ್ ತಿಳಿಸಿದ್ದಾರೆ.

ನಾವು ದೂರನ್ನು ಸ್ವೀಕರಿಸಿದ ತಕ್ಷಣವೇ ತ್ರಿಸದಸ್ಯ ಸಮಿತಿಯನ್ನು ತನಿಖೆಗಾಗಿ ನೇಮಿಸಿದ್ದೇವೆ. ನಮಗೆ ಲಭಿಸಿದ ಮಾಹಿತಿ ಸಲ್ಲಿಕೆಯಾಗುವ ತನಕ ವಿವರವನ್ನು ನೀಡಲಾರೆವು. ಸಮಿತಿಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಹಿರಿಯ ವಕೀಲರಿದ್ದಾರೆ. ಆಗಸ್ಟ್ 15ರಂದು ನಾಲ್ಕನೇ ಆವೃತ್ತಿಯ ಟಿಎನ್‌ಪಿಎಲ್ ಫೈನಲ್ ಪಂದ್ಯ ನಡೆದ ಮರುದಿನವೇ ಸಮಿತಿ ರಚಿಸಲಾಗಿತ್ತು. ಮುಂದಿನ ವಾರ ವರದಿ ಕೈಸೇರುವ ನಿರೀಕ್ಷೆಯಲ್ಲಿದ್ದೇವೆ ಎಂದು ಟಿಎನ್‌ಪಿಎಲ್ ಆಡಳಿತ ಮಂಡಳಿಯ ಅಧ್ಯಕ್ಷ ರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News