ಮೋದಿ ಜನ್ಮದಿನದಂದು ಅವರ ಪ್ರತಿಕೃತಿ ನರ್ಮದಾ ನದಿಗೆ ಎಸೆದು ಪ್ರತಿಭಟನೆ

Update: 2019-09-18 04:16 GMT

ಬರ್ವಾನಿ, ಸೆ.18: ಗುಜರಾತ್‌ನಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಸರ್ದಾರ್ ಸರೋವರ ಅಣೆಕಟ್ಟಿನಿಂದಾಗಿ ನಿರಾಶ್ರಿತರಾದ ಸಂತ್ರಸ್ತರು ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟುಹಬ್ಬವನ್ನು ಮಂಗಳವಾರ "ಧಿಕ್ಕಾರ ದಿವಸ"ವಾಗಿ ಆಚರಿಸಿದರು. ಇಡೀ ದಿನ ಪ್ರತಿಭಟನೆ ನಡೆಸಿ ಮಧ್ಯಪ್ರದೇಶದಲ್ಲಿ ನರ್ಮದಾ ನದಿಗೆ ಮೋದಿ ಪ್ರತಿಕೃತಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಖ್ಯಾತ ಪರಿಸರವಾದಿ ಮೇಧಾ ಪಾಟ್ಕರ್ ನೇತೃತತ್ವದ ನರ್ಮದಾ ಬಚಾವೋ ಆಂದೋಲನದ ಕಾರ್ಯಕರ್ತರೂ ಸೇರಿದಂತೆ ಹಲವು ಮಂದಿ ಪ್ರತಿಭಟನಾಕಾರರು ಖಾಂಡ್ವಾ- ಬರೋಡಾ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಕೆಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಕೆಲ ಪ್ರತಿಭಟನಾಕಾರರು ಪ್ರತಿಭಟನಾರ್ಥವಾಗಿ ತಲೆ ಬೋಳಿಸಿಕೊಂಡಿದ್ದರು. ಅಣೆಕಟ್ಟಿನ ಹಿನ್ನೀರಿನಿಂದಾಗಿ ತಮ್ಮ ಮನೆಗಳು ಮುಳುಗಿವೆ. ಆದ್ದರಿಂದ ತಕ್ಷಣವೇ ಅಣೆಕಟ್ಟಿನ ಗೇಟುಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಮೋದಿಯವರ 69ನೇ ಹುಟ್ಟುಹಬ್ಬದ ಸಂದರ್ಭ ಅಣೆಕಟ್ಟಿನ ಸ್ಥಳದಲ್ಲಿ ಗುಜರಾತ್ ಸರ್ಕಾರ ನರ್ಮದಾ ಉತ್ಸವ ಹಮ್ಮಿಕೊಂಡಿದ್ದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು 'ಧಿಕ್ಕಾರ ದಿವಸ' ಆಚರಿಸಿ ಪ್ರಧಾನಿ ಪ್ರತಿಕೃತಿಯನ್ನು ನದಿಗೆ ಎಸೆದರು. ಅಣೆಕಟ್ಟಿನ ಸಂಪೂರ್ಣ ಸಾಮರ್ಥ್ಯದಷ್ಟು ಅಂದರೆ 138.68 ಮೀಟರ್ ನೀರು ಸಂಗ್ರಹವಾದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ "ನಮಾಮಿ ನರ್ಮದಾ" ಉತ್ಸವ ಹಮ್ಮಿಕೊಂಡಿತ್ತು. ಕೆವಾಡಿಯಾ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News