ನ್ಯಾಯಾಧೀಶರ ಎದುರಿನಲ್ಲೇ ತನ್ನ ಗಂಟಲನ್ನು ಕತ್ತರಿಸಿಕೊಂಡ ಅತ್ಯಾಚಾರ ಆರೋಪಿ

Update: 2019-09-18 06:09 GMT

ಭೋಪಾಲ್ , ಸೆ.18: ಅತ್ಯಾಚಾರ ಆರೋಪದಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ ಬೆನ್ನೆಲ್ಲೇ ಅತ್ಯಾಚಾರ ಆರೋಪಿಯೊಬ್ಬನು ನ್ಯಾಯಾಧೀಶರ ಎದುರಿನಲ್ಲೇ ಚಾಕುವಿನಿಂದ ತನ್ನ ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಧ್ಯಪ್ರದೇಶದ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದೆ.

ಓಂಕಾರ್  ಮೆಹ್ರಾ (33) ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರ ಎದುರಿನಲ್ಲೇ ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅತ್ಯಾಚಾರ ಪ್ರಕರಣದ ಅಪರಾಧಿ. ನ್ಯಾಯಾಧೀಶರು ಶಿಕ್ಷೆ ಘೋಷಿಸಿದ ಕ್ಷಣವೇ ಆರೋಪಿ ಜೇಬಿನಿಂದ ಚಾಕು ತೆಗೆದು ಮೂರು ಬಾರಿ ಗಂಟಲಿಗೆ ಚುಚ್ಚಿಕೊಂಡ ಎನ್ನಲಾಗಿದೆ. ತಕ್ಷಣ ಆತನನ್ನು ವಶಕ್ಕೆ ತೆಗದುಕೊಂಡು ಪೊಲೀಸರು ಆಸ್ಪತ್ರೆಗೆ ಸೇರಿಸಿದರು. ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಿನಾ ನಿವಾಸಿ ಮೆಹ್ರಾ ಬೈನಾ ತೈಲ ಸಂಸ್ಕರಣಾಗಾರದಲ್ಲಿ ಕೆಲಸ ಮಾಡುತ್ತಿದ್ದನು. ಮೂರು ವರ್ಷಗಳ ಹಿಂದೆ ಚಟ್ಟರ್ಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಯೊಂದಿಗೆ ಫೇಸ್ಬುಕ್ ಮೂಲಕ ಸ್ನೇಹ ಬೆಳೆಸಿದ್ದನು.  ಬಳಿಕ ಆಕೆಯನ್ನು ಭೇಟಿಯಾಗಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.  2016 ರಲ್ಲಿ ಆತನ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಬಾಲಕಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಪೊಲೀಸರು ಆರೋಪಿ ಮೆಹ್ರಾನನ್ನು  ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆತ ಬಳಿಕ ಜಾಮೀನಿನ ಮೂಲಕ ಹೊರಬಂದಿದ್ದ ಎನ್ನಲಾಗಿದೆ. 

ಅತ್ಯಾಚಾರದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೊರಿನ್ ನಿಗಮ್ ಅವರು ಆರೋಪಿ ಮೆಹ್ರಾಗೆ ಮಂಗಳವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದರು. ನ್ಯಾಯಾಧೀಶರು ತನ್ನ ತೀರ್ಪನ್ನು ಉಚ್ಚರಿಸಿದ ತಕ್ಷಣ ಆರೋಪಿ ತನ್ನ ಪ್ಯಾಂಟ್ ನಿಂದ  ಚಾಕುವನ್ನು ಹೊರತೆಗೆದು ಮೂರು ಬಾರಿ ಇರಿದನು ಎಂದು ತಿಳಿದು ಬಂದಿದೆ. 

ಜಾಮೀನಿನ ಮೇಲೆ ಹೊರಗಿದ್ದ ಕಾರಣ ಮತ್ತು ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದರಿಂದ ಆರೋಪಿ ನ್ಯಾಯಾಲಯದ ಒಳಗೆ ಚಾಕು ಕೊಂಡು ಹೋಗಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಟ್ಟರ್ಪುರ  ಮಾಹಿತಿ ನೀಡಿದ್ದಾರೆ.

ಮೆಹ್ರಾ ನಿರಪರಾಧಿ. ಬಾಲಕಿಯ ನೆರೆಹೊರೆಯವರು ಯಾರೂ ಆತನ ವಿರುದ್ಧ ಸಾಕ್ಷ್ಯ ನೀಡಿಲ್ಲ ಎಂದು ಆರೋಪಿಯ ತಂದೆ ರಾಂಪ್ರಸಾದ್ ಅಹಿರ್ವಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News