ಇ-ಸಿಗರೇಟ್ ನಿಷೇಧಿಸಿದ ಕೇಂದ್ರ ಸರಕಾರ

Update: 2019-09-18 15:42 GMT

 ಹೊಸದಿಲ್ಲಿ,ಸೆ.18: ಭಾರತದಲ್ಲಿ ಇ-ಸಿಗರೇಟ್‌ಗಳನ್ನು ತಕ್ಷಣದಿಂದಲೇ ನಿಷೇಧಿಸಲಾಗುವುದು ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಇಲ್ಲಿ ಪ್ರಕಟಿಸಿದರು. ತಂಬಾಕು ಚಟದ ವಿರುದ್ಧ ಹೋರಾಡಲು ಸಾಧನವೆಂದು ಪರಿಗಣಿಸಲಾಗಿದ್ದ ಇ-ಸಿಗರೇಟ್‌ಗಳು ಮತ್ತು ನಿಕೋಟಿನ್‌ನ್ನು ಆವಿಯ ರೂಪದಲ್ಲಿ ಉಸಿರಾಡಿಸುವ ಅಂತಹುದೇ ಸಾಧನಗಳು ಈಗ ಬೃಹತ್ ಸಮಸ್ಯೆಯಾಗಿದ್ದು,ಮಕ್ಕಳೂ ಧೂಮ್ರಪಾನದ ಚಟಕ್ಕೆ ಅಂಟಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತಿವೆ ಎಂದು ಅವರು ಹೇಳಿದರು. ಇ-ಸಿಗರೇಟ್‌ಗಳ ಉತ್ಪಾದನೆ,ತಯಾರಿಕೆ,ಆಮದು ಅಥವಾ ರಫ್ತು,ಸಾಗಾಣಿಕೆ,ಮಾರಾಟ,ವಿತರಣೆ,ದಾಸ್ತಾನು ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ. ಈ ಸಂಬಂಧ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಕಳುಹಿಸಲಾದ ವಿಧೇಯಕಕ್ಕೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿತ್ತು ಎಂದು ಅವರು ತಿಳಿಸಿದರು.

 ಇ-ಸಿಗರೇಟ್ ‘ಫ್ಯಾಶನ್’ ಆಗಿ ಬಳಕೆಯಾಗುತ್ತಿದೆ ಮತ್ತು ಈ ಪಿಡುಗು ಇನ್ನಷ್ಟು ಹರಡುವ ಮುನ್ನವೇ ಅದನ್ನು ತಡೆಯಲು ಸರಕಾರವು ಬಯಸಿದೆ ಎಂದರು.

ಹಲವಾರು ಇ-ಸಿಗರೇಟ್ ಕಂಪನಿಗಳು ಹೊಸ ತಲೆಮಾರಿನ ನಿಕೋಟಿನ್ ಬಳಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಆರೋಪಕ್ಕೆ ಗುರಿಯಾಗಿವೆ.

400ಕ್ಕೂ ಅಧಿಕ ಇ-ಸಿಗರೇಟ್ ಬ್ರಾಂಡ್‌ಗಳಿದ್ದು,ಇವುಗಳಲ್ಲಿ ಯಾವುದೂ ಭಾರತದಲ್ಲಿ ತಯಾರಾಗುತ್ತಿಲ್ಲ. ಇವು 150ಕ್ಕೂ ಅಧಿಕ ಸ್ವಾದಗಳಲ್ಲಿ ದೊರೆಯುತ್ತಿವೆ. ಸಾರ್ವಜನಿಕ ಹಿತಾಸಕ್ತಿಯಲ್ಲಿ ಈ ಸಾಧನಗಳ ನಿಷೇಧವನ್ನು ಆರೋಗ್ಯ ಸಚಿವಾಲಯವು ಪ್ರಸ್ತಾಪಿಸಿತ್ತು. ಮಕ್ಕಳು ಮತ್ತು ಯುವಜನರಲ್ಲಿ ಇ-ಸಿಗರೇಟ್‌ಗಳು ಸಾಂಕ್ರಾಮಿಕವಾಗುವುದನ್ನು ತಡೆಯಲು ಈ ಕ್ರಮ ಅಗತ್ಯವಾಗಿತ್ತು ಎಂದು ಸೀತಾರಾಮನ್ ಹೇಳಿದರು.

ಇ-ಸಿಗರೇಟ್‌ಗಳ ನಿಷೇಧ ವಿಧೇಯಕ,2019 ಮೊದಲ ಬಾರಿ ಉಲ್ಲಂಘನೆಗಾಗಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಒಂದು ಲ.ರೂ.ವರೆಗೆ ದಂಡ ಹಾಗೂ ನಂತರದ ಉಲ್ಲಂಘನೆಗಳಿಗೆ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಐದು ಲ.ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದೆ.

ವಿಧೇಯಕವು ನವಂಬರ್‌ನಲ್ಲಿ ನಡೆಯಲಿರುವ ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಅಂಗೀಕಾರವನ್ನು ಪಡೆದುಕೊಳ್ಳುವ ಅಗತ್ಯವಿದೆ.

ವಾರದ ಹಿಂದಷ್ಟೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ವಾದವುಳ್ಳ ಇ-ಸಿಗರೇಟ್‌ಗಳ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದರು.

ದೇಶದಲ್ಲಿ ಪ್ರತಿವರ್ಷ ಒಂಭತ್ತು ಲಕ್ಷಕ್ಕೂ ಅಧಿಕ ಜನರು ತಂಬಾಕು ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿದ್ದಾರೆ. ಭಾರತ ವಿಶ್ವದಲ್ಲಿ ಚೀನಾದ ನಂತರ ಅತ್ಯಧಿಕ ಸಂಖ್ಯೆಯ (10 ಕೋ.ಗೂ.ಅಧಿಕ) ಧೂಮ್ರಪಾನಿಗಳನ್ನು ಹೊಂದಿರುವ ರಾಷ್ಟ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News