ಟಿವಿ ಪ್ಯಾನಲ್‌ಗಳ ಮೇಲಿನ ಆಮದು ಸುಂಕ ರದ್ದುಗೊಳಿಸಿದ ಸರಕಾರ

Update: 2019-09-18 14:12 GMT

ಹೊಸದಿಲ್ಲಿ,ಸೆ.18: ಬೇಡಿಕೆ ಕುಸಿತದಿಂದ ಕಂಗಾಲಾಗಿರುವ ಸ್ಥಳೀಯ ಟಿವಿ ತಯಾರಕರ ನಿರ್ಮಾಣ ವೆಚ್ಚವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಸರಕಾರ ಟಿವಿ ಪ್ಯಾನಲ್‌ಗಳ ಮೇಲಿನ ಆಮದು ಸುಂಕವನ್ನು ರದ್ದುಗೊಳಿಸಿದೆ. ಶೇ.5 ಕಸ್ಟಮ್ಸ್ ಸುಂಕ ರದ್ದತಿಯಿಂದ ತಯಾರಿಕಾ ವೆಚ್ಚದಲ್ಲಿ ಶೇ.3ರಷ್ಟು ಇಳಿಕೆಯಾಗಲಿದೆ. ಆದರೆ ಎಲ್ಲ ಟಿವಿ ತಯಾರಕರು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿದ್ದಾರೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ಯಾನಸೋನಿಕ್ ಕಂಪೆನಿ ಮಾತ್ರ ತಾನು ಗ್ರಾಹಕರಿಗೆ ಶೇ.3ರಿಂದ 4ರಷ್ಟು ದರ ಕಡಿತ ಮಾಡುವುದಾಗಿ ತಿಳಿಸಿದೆ. 15.6 ಇಂಚು ಮತ್ತು ಹೆಚ್ಚಿನ ಗಾತ್ರದ ಎಲ್‌ಸಿಡಿ ಮತ್ತು ಎಲ್‌ಇಡಿ ಟಿವಿ ತಯಾರಿಕೆಯಲ್ಲಿ ಬಳಸಲಾಗುವ ಓಪನ್ ಸೆಲ್ ಪ್ಯಾನಲ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ರದ್ದುಗೊಳಿಸಲಾಗಿದೆ ಎಂದು ವಿತ್ತ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಎಲ್‌ಇಡಿ ಟಿವಿ ತಯಾರಿಕೆಯ ವೆಚ್ಚದಲ್ಲಿ ಓಪನ್ ಸೆಲ್ ಪ್ಯಾನಲ್ ವೆಚ್ಚವೇ ಶೇ.60ರಿಂದ 70 ಆಗುತ್ತದೆ. ಬಹುತೇಕ ಟಿವಿ ತಯಾರಕರು ಈ ಪ್ಯಾನಲ್‌ಗಳನ್ನು ಆಮದು ಮಾಡಿಕೊಳ್ಳುತ್ತಾರೆ.

ಸ್ಯಾಮ್‌ಸಂಗ್ ಇಲೆಕ್ಟ್ರಾನಿಕ್ಸ್ ಕಂಪೆನಿ ಕಳೆದ ವರ್ಷ ಭಾರತದ ತನ್ನ ಟಿವಿ ತಯಾರಿಕಾ ಘಟಕವನ್ನು ಸ್ಥಗಿತಗೊಳಿಸಿ ವಿಯೇಟ್ನಾಂಗೆ ವರ್ಗಾಯಿಸಲು ಕಾರಣ ಇಲ್ಲಿನ ಕಸ್ಟಮ್ಸ್ ಸುಂಕವಾಗಿತ್ತು ಎಂದು ಹೇಳಲಾಗಿತ್ತು. ಪ್ಯಾನಲ್ ಹೊರತಾಗಿ, ಫಿಲ್ಮ್ ಚಿಪ್, ಮುದ್ರಿತ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ ಮತ್ತು ಗಾಜಿನ ಬೋರ್ಡ್ ಮೇಲಿನ ಆಮದು ಸುಂಕವನ್ನೂ ರದ್ದುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News