ಇನ್ನು ಫೇಸ್ ಬುಕ್ ನಲ್ಲಿ ‘ಸುಪ್ರೀಂ ಕೋರ್ಟ್ !’

Update: 2019-09-18 16:25 GMT

ಸ್ಯಾನ್‌ಫ್ರಾನ್ಸಿಸ್ಕೊ, ಸೆ. 18: ‘ಸ್ವತಂತ್ರ ಮೇಲುಸ್ತುವಾರಿ ಮಂಡಳಿ’ಯ ರಚನೆಗೆ ಕಾರಣವಾಗುವ ನಿರ್ಣಯವೊಂದನ್ನು ಅಂತಿಮಗೊಳಿಸಿರುವುದಾಗಿ ಫೇಸ್‌ಬುಕ್ ಮಂಗಳವಾರ ತಿಳಿಸಿದೆ. ಫೇಸ್‌ಬುಕ್‌ನಲ್ಲಿ ಬರುವ ವಿಷಯಗಳಿಗೆ ಸಂಬಂಧಿಸಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ತೆಗೆದುಕೊಳ್ಳುವ ನಿರ್ಧಾರವನ್ನೂ ತಳ್ಳಿಹಾಕುವ ಅಧಿಕಾರ ಈ ಮಂಡಳಿಗೆ ಇರುತ್ತದೆ.

ಫೇಸ್‌ಬುಕ್‌ನಲ್ಲೇ ‘ಸುಪ್ರೀಂ ಕೋರ್ಟ್’ ಒಂದನ್ನು ಆರಂಭಿಸುವ ಇಂಗಿತವನ್ನು ಝುಕರ್‌ಬರ್ಗ್ ಈ ಹಿಂದೆ ವ್ಯಕ್ತಪಡಿಸಿದ್ದರು. ಈಗ ಅದಕ್ಕೆ ಚಾಲನೆ ದೊರಕಿದ್ದು, ಇನ್ನು ಮುಂದೆ ಬಳಕೆದಾರರ ಬರಹಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಫೇಸ್‌ಬುಕ್ ಹೆಚ್ಚಿನ ಜಾಗರೂಕತೆಯಿಂದ ತೆಗೆದುಕೊಳ್ಳಬೇಕಾಗುತ್ತದೆ.

ಬಳಕೆದಾರರ ಪೋಸ್ಟ್‌ಗಳನ್ನು ಫೇಸ್‌ಬುಕ್ ತೆಗೆದುಹಾಕಿದರೆ ಹಾಗೂ ಅದು ಸರಿಯಲ್ಲ ಎಂದು ಬಳಕೆದಾರರಿಗೆ ಅನಿಸಿದರೆ ಅವರು ಈ ‘ಸುಪ್ರೀಂ ಕೋರ್ಟ್’ನಲ್ಲಿ ಪ್ರಶ್ನಿಸಬಹುದಾಗಿದೆ. ಅದೂ ಅಲ್ಲದೆ, ಫೇಸ್‌ಬುಕ್ ನಿಗದಿಪಡಿಸಿದ ಪ್ರಕರಣಗಳ ವಿಚಾರಣೆಯನ್ನೂ ಅದು ಮಾಡುತ್ತದೆ.

ಈ ವರ್ಷದ ಕೊನೆಯಲ್ಲಿ ಮಂಡಳಿಗೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ನೇಮಕ ಮಾಡಲಾಗುತ್ತದೆ ಎಂದು ಫೇಸ್‌ಬುಕ್ ಹೇಳಿದೆ. ಮಂಡಳಿಯಲ್ಲಿ ಸುಮಾರು 40 ಸದಸ್ಯರು ಇರುತ್ತಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News