2029-30ರ ವೇಳೆಗೆ ಸಶಸ್ತ್ರ ಪಡೆಗಳಲ್ಲಿ ಶೇ.75ರಷ್ಟು ದೇಶೀಯ ತಂತ್ರಜ್ಞಾನದ ಬಳಕೆ: ರಾಜನಾಥ್ ಸಿಂಗ್

Update: 2019-09-19 14:53 GMT

ಬೆಂಗಳೂರು,ಸೆ.19: ಸಶಸ್ತ್ರ ಪಡೆಗಳಲ್ಲಿ 2029-30ರ ವೇಳೆಗೆ ಶೇ.75ರಷ್ಟು ದೇಶೀಯ ತಂತ್ರಜ್ಞಾನದ ಬಳಕೆಯಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಗುರುವಾರ ಇಲ್ಲಿ ತಿಳಿಸಿದರು.

   ಇಲ್ಲಿಯ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ ‘ತೇಜಸ್’ ನಲ್ಲಿ ಹಾರಾಟ ನಡೆಸಿದ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯು ಏರ್ಪಡಿಸಿದ್ದ ತನ್ನ ಉತ್ಪನ್ನಗಳ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಮಾತನಾಡುತ್ತಿದ್ದ ಅವರು, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ರೀತಿಯಲ್ಲಿ ದೇಶೀಯ ತಂತ್ರಜ್ಞಾನವನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ಶೇ.100ರಷ್ಟು ಅಗತ್ಯ ಸಾಧನಗಳು ದೇಶದಲ್ಲೇ ಸೃಷ್ಟಿಯಾಗುವ ದಿನ ದೂರವಿಲ್ಲ ಎಂದರು. ಸಿಂಗ್ ಎಚ್‌ಎಎಲ್‌ನಿಂದ ನಿರ್ಮಿತ ತೇಜಸ್‌ನಲ್ಲಿ ಹಾರಾಟ ನಡೆಸಿದ ದೇಶದ ಮೊದಲ ರಕ್ಷಣಾ ಸಚಿವರಾಗಿದ್ದಾರೆ.

ಇಡೀ ದೇಶವೇ ಡಿಆರ್‌ಡಿಒ ಬಗ್ಗೆ ಹೆಮ್ಮೆಯನ್ನು ಹೊಂದಿದೆ ಎಂದ ಅವರು,ಅದು ಭಾರತದ ವಿಶ್ವಾಸಾರ್ಹ ಸಂಸ್ಥೆ ಮಾತ್ರವಲ್ಲ,ಅಂತರರಾಷ್ಟ್ರೀಯ ಮಾನ್ಯತೆಯನ್ನೂ ಪಡೆದುಕೊಳ್ಳುತ್ತಿದೆ. ಇದು ಅತೀವ ಸಂತಸದ ವಿಷಯವಾಗಿದೆ ಎಂದರು.

 ಸ್ವದೇಶಿ ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳು ಭಾರತದಲ್ಲಿಯೇ ತಯಾರಾಗುತ್ತಿವೆ. ನಾವು ಇಂತಹ ಸಾಮರ್ಥ್ಯವನ್ನು ಕ್ರಮೇಣ ಹೆಚ್ಚಿಸುತ್ತಿದ್ದೇವೆ. ನಮ್ಮ ರಫ್ತು ಸಾಮರ್ಥ್ಯವನ್ನೂ ಹೆಚ್ಚಿಸಲಾಗುತ್ತಿದೆ ಎಂದ ಸಿಂಗ್,ಇತ್ತೀಚಿಗೆ ಅಭಿವೃದ್ಧಿಗೊಳಿಸಲಾಗಿರುವ ಕ್ಷಿಪಣಿ ನಿರೋಧಕ ಕ್ಷಿಪಣಿ ಎಸ್ಯಾಟ್,ಬಾಲಕೋಟ್ ವಾಯುದಾಳಿಯಲ್ಲಿ ‘ನೇತ್ರ ’ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವಿಮಾನದ ಬಳಕೆ,ಇತ್ತೀಚಿಗೆ ಆಗಸದಿಂದ ಆಗಸಕ್ಕೆ ಚಿಮ್ಮುವ ‘ಅಸ್ತ್ರ ’ ಕ್ಷಿಪಣಿಯ ಯಶಸ್ವಿ ಪರೀಕ್ಷೆ ಇವೆಲ್ಲ ಡಿಆರ್‌ಡಿಒದಲ್ಲಿ ದೇಶದ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ ಎಂದರು. ಪ್ರದರ್ಶನದಲ್ಲಿ ಖಾಸಗಿ ಉದ್ಯಮಗಳೂ ಭಾಗಿಯಾಗಿವೆ. ಬೃಹತ್ ಕೈಗಾರಿಕೆಗಳ ಕೊಡುಗೆಯನ್ನು ನಾವು ಕಡೆಗಣಿಸಲಾಗದು ಎಂದು ಅವರು ಹೇಳಿದರು.

ಎಚ್‌ಎಎಲ್ ತನ್ನ ಕಾರ್ಯಕ್ಕಾಗಿ ಹೆಚ್ಚಿನ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದೆ ಎಂದ ಅವರು,ಅದಕ್ಕೆ ಸರಕಾರದಿಂದ ಉತ್ತೇಜನ ದೊರೆಯಬೇಕು ಎಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News