ಇ-ಸಿಗರೇಟ್ ಸೇದಿ ಕೈ ಸುಟ್ಟುಕೊಳ್ಳಬೇಡಿ!

Update: 2019-09-19 16:11 GMT

ಹೊಸದಿಲ್ಲಿ, ಸೆ. 19: ಇ-ಸಿಗರೇಟ್ ಉತ್ಪಾದನೆ, ಆಮದು, ರಫ್ತು, ಸಾಗಾಟ, ಮಾರಾಟ, ವಿತರಣೆ ಹಾಗೂ ಅವುಗಳ ಜಾಹೀರಾತು ನಿಷೇಧಿಸಿ ಕೇಂದ್ರ ಸರಕಾರ ಗುರುವಾರ ಆಧ್ಯಾದೇಶ ಹೊರಡಿಸಿದೆ. ರಾಷ್ಟ್ರಪತಿಗಳ ಅನುಮತಿ ದೊರೆತ ಬಳಿಕ ಈ ಆಧ್ಯಾದೇಶ ಜಾರಿಗೆ ಬರಲಿದೆ.

ಸಂಸತ್ತಿನ ಮುಂದಿನ ಅಧಿವೇಶದಲ್ಲಿ ಇದು ಮಸೂದೆಯಾಗಿ ಬದಲಾಗಲಿದೆ. ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದವರಿಗೆ 1 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿ ವರೆಗೆ ದಂಡ. ಸತತವಾಗಿ ನಿಯಮ ಉಲ್ಲಂಘಿಸಿದವರಿಗೆ 3 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ವರೆಗೆ ದಂಡ. ದಾಸ್ತಾನು ಮಾಡುವವರಿಗೆ 6 ತಿಂಗಳ ವರೆಗೆ ಜೈಲು ಶಿಕ್ಷೆ ಅಥವಾ 50 ಸಾವಿರ ರೂಪಾಯಿ ದಂಡ ಅಥವಾ ಎರಡೂ ಕೂಡ. ಇಲೆಕ್ಟ್ರಾನಿಕ್ಸ್ ಸಿಗರೇಟ್‌ನ ಉತ್ಪಾದನೆ, ಆಮದು, ವಿತರಣೆ ಹಾಗೂ ಮಾರಾಟ ನಿಷೇಧಿಸಲು ಕೇಂದ್ರ ಸಂಪುಟ ಬುಧವಾರ ನಿರ್ಧರಿಸಿತ್ತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಈ ಆಧ್ಯಾದೇಶ ಅಧಿಕಾರಿಗಳಿಗೆ ದಾಳಿ ನಡೆಸುವ ಹಾಗೂ ಸೊತ್ತು ಮುಟ್ಟಗೋಲು ಹಾಕಿಕೊಳ್ಳುವ ಅಧಿಕಾರವನ್ನು ಕೂಡ ನೀಡಲಿದೆ. ಆದರೆ, ಸಿಗರೇಟು ಉದ್ದಿಮೆ ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರ ಇ-ಸಿಗರೇಟು ನಿಷೇಧಿಸಿ ಆಧ್ಯಾದೇಶ ಜಾರಿಗೆ ತಂದಿದೆ ಎಂದು ಇ-ಸಿಗರೇಟು ಬಳಕೆ ಉತ್ತೇಜಿಸುವ ವಾಣಿಜ್ಯ ಸಂಘಟನೆಗಳು ಆರೋಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News