ಮಾರ್ಕ್ರಮ್,ಮುಲ್ಡರ್ ಶತಕ, ದ.ಆಫ್ರಿಕಾ ಮರು ಹೋರಾಟ

Update: 2019-09-19 18:09 GMT

 ಮೈಸೂರು, ಸೆ.19: ನಾಯಕ ಏಡೆನ್ ಮಾರ್ಕ್ರಮ್ ಹಾಗೂ ಆಲ್‌ರೌಂಡರ್ ವಿಯಾನ್ ಮುಲ್ಡರ್ ಆಕರ್ಷಕ ಶತಕದ ಬೆಂಬಲದಿಂದ ದಕ್ಷಿಣ ಆಫ್ರಿಕಾ ‘ಎ’ ತಂಡ ಭಾರತ ‘ಎ’ ವಿರುದ್ಧ ದ್ವಿತೀಯ ಅನಧಿಕೃತ ಟೆಸ್ಟ್ ನ ಮೂರನೇ ದಿನದಾಟದಲ್ಲಿ ಮರು ಹೋರಾಟ ನೀಡಲು ಯತ್ನಿಸಿದೆ.

161 ರನ್ ಸಿಡಿಸಿದ ಮಾರ್ಕ್ರಮ್ ಭಾರತ ವಿರುದ್ಧ ಮುಂಬರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾದರು. ಮುಲ್ಡರ್ ಔಟಾಗದೆ 131 ರನ್ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದರು. ಭಾರತದ ಮೊದಲ ಇನಿಂಗ್ಸ್ 417 ರನ್‌ಗೆ ಉತ್ತರವಾಗಿ ದಕ್ಷಿಣ ಆಫ್ರಿಕ ಎ ತಂಡ 400 ರನ್ ಗಳಿಸಿ ಆಲೌಟಾಗುವುದರೊಂದಿಗೆ 17 ರನ್ ಹಿನ್ನಡೆ ಕಂಡಿತು. ದ.ಆಫ್ರಿಕಾ ಒಂದು ಹಂತದಲ್ಲಿ 142 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಆರನೇ ವಿಕೆಟ್ ಜೊತೆಯಾಟದಲ್ಲಿ 155 ರನ್ ಸೇರಿಸಿದ ಮಾರ್ಕ್ರಮ್ ಹಾಗೂ ಮುಲ್ಡರ್ ತಂಡವನ್ನು ಆಧರಿಸಿದರು.

 ಎರಡನೇ ಇನಿಂಗ್ಸ್ ಆರಂಭಿಸಿದ ಆತಿಥೇಯ ಭಾರತ ಮಂದ ಬೆಳಕಿನಿಂದಾಗಿ ಇನ್ನೂ 25 ಓವರ್‌ಗಳ ಆಟ ಬಾಕಿ ಇರುವಾಗಲೇ ದಿನದಾಟ ಸ್ಥಗಿತಗೊಳ್ಳುವ ಮೊದಲು ವಿಕೆಟ್‌ನಷ್ಟವಿಲ್ಲದೆ 14 ರನ್ ಗಳಿಸಿತು. 5 ವಿಕೆಟ್‌ಗಳ ನಷ್ಟಕ್ಕೆ 159 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ದಕ್ಷಿಣ ಆಫ್ರಿಕಾಕ್ಕೆ ಮಾರ್ಕ್ರಮ್ ಹಾಗೂ ಮುಲ್ಡರ್ ಆಸರೆಯಾದರು. ಭಾರತ ಎ ತಂಡದ ವೇಗದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಮಾರ್ಕ್ರಮ್, ಮೂರು ಸ್ಪಿನ್ ಬೌಲರ್‌ಗಳನ್ನು ಅಷ್ಟೇ ಲೀಲಾಜಾಲವಾಗಿ ಎದುರಿಸಿದರು. 263 ಎಸೆತಗಳ ಇನಿಂಗ್ಸ್ ನಲ್ಲಿ 20 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಸಿಡಿಸಿದರು. ಮಾರ್ಕ್ರಮ್ ಹಾಗೂ ಮುಲ್ಡರ್ ಶತಕದ ಜೊತೆಯಾಟ ನಡೆಸಿ ದ.ಆಫ್ರಿಕಾ ಇನಿಂಗ್ಸ್ ಗೆ ಬೇಗನೆ ತೆರೆ ಎಳೆಯಬೇಕೆಂಬ ಭಾರತ ಎ ತಂಡದ ವಿಶ್ವಾಸಕ್ಕೆ ಧಕ್ಕೆ ತಂದರು. 87ನೇ ಓವರ್‌ನಲ್ಲಿ ಮಾರ್ಕ್ರಮ್ ವಿಕೆಟನ್ನು ಉರುಳಿಸಿದ ಮುಹಮ್ಮದ್ ಸಿರಾಜ್ ದೊಡ್ಡ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.

ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಆಟದೊಂದಿಗೆ ಆತಿಥೇಯ ಬೌಲರ್‌ಗಳನ್ನು ಕಾಡಿದ ಮುಲ್ಡರ್ ಅವರು ವೆರ್ನಾನ್ ಫಿಲ್ಯಾಂಡರ್(21)ಜೊತೆ ಏಳನೇ ವಿಕೆಟ್‌ಗೆ 59 ರನ್ ಹಾಗೂ ಡ್ಯಾನ್ ಪೀಟ್(11)ಜೊತೆ 8ನೇ ವಿಕೆಟ್‌ಗೆ 39 ರನ್ ಜೊತೆಯಾಟದಲ್ಲಿ ಭಾಗಿಯಾದರು. ಮುಲ್ಡರ್-ಫಿಲ್ಯಾಂಡರ್ ಜೊತೆಯಾಟವನ್ನು ಶಿವಂ ದುಬೆ ಕೊನೆಗೊಳಿಸಿದರು. ಸ್ಪಿನ್ ಬೌಲರ್‌ಗಳಾದ ಕುಲದೀಪ್ ಯಾದವ್(4-121)ಹಾಗೂ ಶಹಬಾಝ್ ನದೀಂ(3-76)ಯಶಸ್ವಿ ಪ್ರದರ್ಶನ ನೀಡಿದರು. ಔಟಾಗದೆ 131 ರನ್ ಗಳಿಸಿದ ಮುಲ್ಡರ್ 230 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 1 ಸಿಕ್ಸರ್‌ನ್ನು ಸಿಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News