ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡ ಚಾನು

Update: 2019-09-19 18:10 GMT

ಪಟ್ಟಾಯಾ(ಥಾಯ್ಲೆಂಡ್), ಸೆ.19: ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗುರುವಾರ ಮಹಿಳೆಯರ 49 ಕೆಜಿ ವಿಭಾಗದಲ್ಲಿ ತನ್ನದೇ ರಾಷ್ಟ್ರೀಯ ದಾಖಲೆ ಉತ್ತಮಪಡಿಸಿಕೊಂಡರು. ಆದರೆ, ಪದಕ ಗೆಲ್ಲಲು ವಿಫಲರಾದರು. 25ರ ಹರೆಯದ ಮೀರಾಬಾಯಿ ಮೂರರಲ್ಲಿ ಎರಡು ವಿಭಾಗಗಳಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದು, ಸ್ನಾಚ್‌ನಲ್ಲಿ 87 ಕೆಜಿ ಹಾಗೂ ಕ್ಲೀನ್ ಹಾಗೂ ಜರ್ಕ್‌ನಲ್ಲಿ 114 ಕೆಜಿ ಸಹಿತ ಒಟ್ಟು 201 ಕೆಜಿ ಎತ್ತಿ ಹಿಡಿದರು.

ಮೀರಾಬಾಯಿ ಈ ಹಿಂದೆ 199 ಕೆಜಿ(99+111ಕೆಜಿ)ಎತ್ತಿ ಹಿಡಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಎಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದಿದ್ದ ಏಶ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿದ್ದರು. ಚೀನಾದ ಜಿಯಾಂಗ್ ಹ್ಯುವಾ 221 ಕೆಜಿ(94+118ಕೆಜಿ)ಎತ್ತಿ ಹಿಡಿದು ನೂತನ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಒಕ್ಕೂಟ ಕಳೆದ ವರ್ಷ ತೂಕ ವಿಭಾಗವನ್ನು ಬದಲಿಸಿದ ಬಳಿಕ ಮೀರಾಬಾಯಿ 48 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿರುವ ನಾಲ್ಕನೇ ಅಂತರ್‌ರಾಷ್ಟ್ರೀಯ ಸ್ಪರ್ಧೆ ಇದಾಗಿದೆ. 2017ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಒಟ್ಟು 194 ಕೆಜಿ ಎತ್ತಿ ಹಿಡಿದು ಚಿನ್ನದ ಪದಕ ಜಯಿಸಿದರು. ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮೀರಾಬಾಯಿ ಈವರ್ಷದ ಫೆಬ್ರವರಿಯಲ್ಲಿ ಸಕ್ರಿಯ ವೇಟ್‌ಲಿಫ್ಟಿಂಗ್‌ಗೆ ವಾಪಸಾಗಿದ್ದರು. ಬೆನ್ನುನೋವಿನಿಂದಾಗಲೇ ಕಳೆದ ವರ್ಷ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಿರಲಿಲ್ಲ. 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಿಂದಲೂ ಹೊರಗುಳಿದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News