ಭಾರತೀಯ ವಾಯುಪಡೆಯ 26ನೇ ಮುಖ್ಯಸ್ಥರಾದ ಏರ್‌ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್

Update: 2019-09-20 04:14 GMT

ಹೊಸದಿಲ್ಲಿ, ಸೆ.20: ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನವನ್ನು ಯುವ ಪರೀಕ್ಷಾರ್ಥ ಪೈಲಟ್ ಆಗಿ ಹಾರಾಟ ಮಾಡಿದ ಏರ್‌ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಡೂರಿಯಾ ಭಾರತೀಯ ವಾಯುಪಡೆಯ 26ನೇ ಮುಖ್ಯಸ್ಥರಾಗಲಿದ್ದಾರೆ. ವಾಯುಪಡೆಯ ಉಪ ಮುಖ್ಯಸ್ಥರಾಗಿ ಫ್ರಾನ್ಸ್ ಜತೆಗಿನ ರಫೇಲ್ ಯುದ್ಧ ವಿಮಾನಗಳ ವಾಣಿಜ್ಯ ಒಪ್ಪಂದದ ನೇತೃತ್ವವನ್ನೂ ಅವರು ವಹಿಸಿದ್ದರು.

ಸದ್ಯ ವಾಯುಪಡೆಯ ಉಪಮುಖ್ಯಸ್ಥರಾಗಿರುವ ಬಡೂರಿಯಾ ಅವರನ್ನು ಈ ತಿಂಗಳ 30ರಂದು ನಿವೃತ್ತರಾಗುವ ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಅವರ ಉತ್ತರಾಧಿಕಾರಿಯನ್ನಾಗಿ ಸರ್ಕಾರ ಗುರುವಾರ ಘೋಷಿಸಿದೆ. 26 ವಿವಿಧ ಬಗೆಯ ಯುದ್ಧವಿಮಾನಗಳು ಮತ್ತು ಸಾರಿಗೆ ವಿಮಾನಗಳನ್ನು ಚಲಾಯಿಸಿ ಒಟ್ಟು 4,250 ಗಂಟೆಗಳ ವಿಮಾನ ಹಾರಾಟದ ಅನುಭವ ಇರುವ ಬಡೂರಿಯಾ ಅವರ ಹೆಸರನ್ನು ಈ ಮೊದಲು ಪರಿಗಣಿಸಿರಲಿಲ್ಲ. ಏಕೆಂದರೆ ಸೆಪ್ಟೆಂಬರ್ 30ರಂದು ಅವರು ಕೂಡಾ 60ನೇ ವರ್ಷ ಪೂರೈಸುತ್ತಿದ್ದಾರೆ.

ಆದರೆ ಇದೀಗ ಎರಡು ವರ್ಷಗಳಿಗೆ ಐಎಎಫ್ ಮುಖ್ಯಸ್ಥರಾಗಿ ಮುಂದುವರಿಯಬಹುದಾಗಿದೆ. ಏಕೆಂದರೆ ಸೇನಾ ಮುಖ್ಯಸ್ಥರು 62 ವರ್ಷ ವಯಸ್ಸಿನವರೆಗೆ ಅಥವಾ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ಮುಂದುವರಿಯಲು ಅವಕಾಶವಿದೆ. ಆದರೆ ಸೇನೆಯ ಲೆಫ್ಟಿನೆಂಟ್ ಜನರಲ್ ಅಥವಾ ನೌಕಾಪಡೆಯ ಉಪ ಅಡ್ಮಿರಲ್ ಹುದ್ದೆಗೆ ಸಮಾನವಾದ ಏರ್ ಮಾರ್ಷಲ್‌ಗಳು 60ನೇ ವರ್ಷಕ್ಕೆ ನಿವೃತ್ತಿಯಾಗುತ್ತಾರೆ.

"ಪ್ರಧಾನಿ ಕಚೇರಿಗೆ ಮೊದಲು ಸಲ್ಲಿಸಿದ ಕಡತದಲ್ಲಿ ಬಡೂರಿಯಾ ಅವರ ಹೆಸರು ಇರಲಿಲ್ಲ. ದಕ್ಷಿಣ ಕಮಾಂಡ್ ಮುಖ್ಯಸ್ಥ ಏರ್ ಮಾರ್ಷಲ್ ಬಾಲಕೃಷ್ಣನ್ ಸುರೇಶ್ ಮತ್ತು ಪಶ್ಚಿಮ ಕಮಾಂಡ್ ಮುಖ್ಯಸ್ಥ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಅವರು ಈ ಹುದ್ದೆಯ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ ಆ ಬಳಿಕ ಪ್ರಧಾನಿ ಕಚೇರಿ ಬಡೂರಿಯಾ ಅವರ ಕಡತವನ್ನೂ ತರಿಸಿಕೊಂಡಿತು. ಹಿಂದೆಯೂ ಇಂಥ ನಿದರ್ಶನ ಇದೆ. 1991ರಲ್ಲಿ ಅಂದಿನ ಎಐಎಫ್ ಉಪ ಮುಖ್ಯಸ್ಥ ಎನ್.ಸಿ.ಸೂರಿಯವರು ಜುಲೈ 31ರಂದು ನಿವೃತ್ತರಾಗಬೇಕಿತ್ತು. ಆದರೆ ಅದೇ ದಿನ ನಿವೃತ್ತರಾಗಲಿದ್ದ ಎಸ್.ಕೆ.ಮೆಹ್ರಾ ಅವರ ಉತ್ತರಾಧಿಕಾರಿಯಾದರು" ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News