ಜಮ್ಮು-ಕಾಶ್ಮೀರ : ಅಕ್ರಮ ಬಂಧನ ಪ್ರಶ್ನಿಸಿ 250ಕ್ಕೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಕೆ

Update: 2019-09-20 14:17 GMT

ಶ್ರೀನಗರ, ಸೆ.20: ಸಾರ್ವಜನಿಕ ಸುರಕ್ಷಾ ಕಾಯ್ದೆ(ಪಿಎಸ್‌ಎ)ಯಡಿ ಜನರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಆಗಸ್ಟ್ 5ರ ಬಳಿಕ ಇದುವರೆಗೆ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್‌ನಲ್ಲಿ 250ಕ್ಕೂ ಹೆಚ್ಚು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿಯಾಗಿದೆ.

370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ಭಾರೀ ಬಿಗಿ ಭದ್ರತೆಯ ಜೊತೆಗೆ ನಿರ್ಬಂಧ ವಿಧಿಸಲಾಗಿದ್ದು, ಸಂವಹನ ವ್ಯವಸ್ಥೆಯನ್ನೂ ಸ್ಥಗಿತಗೊಳಿಸಲಾಗಿದೆ. ಜನರನ್ನು ಅಕ್ರಮವಾಗಿ ವಶಕ್ಕೆ ಪಡೆಯುವುದು ಅಥವಾ ಬಂಧನಲ್ಲಿಡುವುದನ್ನು ಪ್ರಶ್ನಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಆಗಸ್ಟ್ 5ರ ಬಳಿಕ ಪ್ರತೀದಿನ ಕನಿಷ್ಟ 6 ಇಂತಹ ಅರ್ಜಿಗಳನ್ನು ಜಮ್ಮು ಕಾಶ್ಮೀರ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ.

ಜಮ್ಮು ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಿದ ಬಳಿಕ ಪಿಎಸ್‌ಎ ಕಾಯ್ದೆಯಡಿ ಹಲವರನ್ನು ಬಂಧಿಸಲಾಗಿದ್ದು, ಬಂಧಿಸಿಡಲು ಸ್ಥಳದ ಕೊರತೆಯ ಕಾರಣ ಹಲವರನ್ನು ರಾಜ್ಯದಿಂದ ಹೊರಗೆ ಕರೆದೊಯ್ಯಲಾಗಿದೆ. ಆಗಸ್ಟ್ 5ರ ಬಳಿಕ ಕಸ್ಟಡಿಗೆ ಪಡೆದವರ ಸಂಖ್ಯೆ 290ರಿಂದ 4000 ಎಂದು ಸರಕಾರದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಇವರ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ ತ್ವರಿತವಾಗಿ ನಡೆಸಲು ಸರಕಾರ ಮುಂದಾಗಿಲ್ಲ. ಸುಮಾರು 150 ಅರ್ಜಿಗಳು ಇನ್ನೂ ಸ್ವೀಕಾರದ ಹಂತದಲ್ಲಿದ್ದರೆ 85 ಪ್ರಕರಣಗಳನ್ನು ಲಿಸ್ಟ್ ಮಾಡಲಾಗಿದೆ. 20 ಅರ್ಜಿಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿಯಿಲ್ಲ.

ಶ್ರೀನಗರದ ಹೈಕೋರ್ಟ್‌ನಲ್ಲಿ ಆಗಸ್ಟ್ 5 ಮತ್ತು ಆಗಸ್ಟ್ 26ರ ಮಧ್ಯೆ 288 ಪ್ರಕರಣಗಳ ವಿಚಾರಣೆ ನಡೆದಿದ್ದು, ಇದರಲ್ಲಿ 256 ಪ್ರಕರಣಗಳಲ್ಲಿ ಅರ್ಜಿದಾರರು ವಿಚಾರಣೆ ಸಂದರ್ಭ ಉಪಸ್ಥಿತರಿರಲಿಲ್ಲ. 235 ಪ್ರಕರಣಗಳಲ್ಲಿ ಪ್ರತಿವಾದಿಗಳು ಹಾಜರಿರಲಿಲ್ಲ.

ಪಿಎಸ್‌ಎ ಕಾಯ್ದೆಯಡಿ ಓರ್ವ ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಆರು ತಿಂಗಳು ಬಂಧನದಲ್ಲಿಡಬಹುದು. ಕಾಯ್ದೆಯ ಸೆಕ್ಷನ್ 22ರ ಪ್ರಕಾರ, ಬಂಧಿತ ವ್ಯಕ್ತಿಗಳ ವಿರುದ್ಧ ದಾವೆ ಹೂಡುವ, ವಿಚಾರಣೆ ನಡೆಸುವ ಅಥವಾ ಇತರ ಯಾವುದೇ ಕಾನೂನು ಕ್ರಮ ಜರಗಿಸುವ ಅಗತ್ಯವಿರುವುದಿಲ್ಲ . ಇದನ್ನು ಪ್ರಶ್ನಿಸಿ ಬಹುತೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News