‘ಹೌಡಿ ಮೋದಿ ’ಕಾರ್ಯಕ್ರಮಕ್ಕೆ ಮುನ್ನ ಮಳೆಯ ಆರ್ಭಟ: ಇಬ್ಬರು ಮೃತ್ಯು

Update: 2019-09-20 14:20 GMT

ಹ್ಯೂಸ್ಟನ್,ಸೆ.20: ರವಿವಾರ ಇಲ್ಲಿಯ ವಿಶಾಲ ಎನ್‌ಆರ್‌ಜಿ ಸ್ಟೇಡಿಯಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 50,000ಕ್ಕೂ ಅಧಿಕ ಭಾರತೀಯ-ಅಮೆರಿಕನ್‌ರನ್ನು ಉದ್ದೇಶಿಸಿ ಭಾಷಣಗಳನ್ನು ಮಾಡಲಿರುವ ಬೃಹತ್ ‘ಹೌಡಿ ಮೋದಿ ’ಕಾರ್ಯಕ್ರಮಕ್ಕೆ ರಂಗ ಸಜ್ಜುಗೊಂಡಿದೆ,ಆದರೆ ಕಾರ್ಯಕ್ರಮಕ್ಕೆ ಕೇವಲ ಮೂರು ದಿನಗಳು ಬಾಕಿಯಿರುವಂತೆ ‘ಇಮೆಲ್ಡಾ ’ ಚಂಡಮಾರುತದ ಪ್ರಭಾವದಿಂದಾಗಿ ಹ್ಯೂಸ್ಟನ್‌ನಲ್ಲಿ ಧಾರಾಕಾರ ಆರಂಭಗೊಂಡಿದ್ದು,ಮಳೆಯ ಆರ್ಭಟಕ್ಕೆ ಎರಡು ಜೀವಗಳು ಬಲಿಯಾಗಿವೆ.

ಗುರುವಾರ ಟೆಕ್ಸಾಸ್‌ ಗೆ ಚಂಡಮಾರುತ ಅಪ್ಪಳಿಸಿದ್ದು, ವಿನಾಶಕಾರಿ ನೆರೆಯ ಜೊತೆಗೆ ವಿದ್ಯುತ್ ಸಂಪರ್ಕ ವ್ಯತ್ಯಯಗೊಂಡಿದೆ. ತುರ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದ್ದು,ಜನರಿಗೆ ಮನೆಗಳಲ್ಲಿಯೇ ಇರುವಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಟೆಕ್ಸಾಸ್‌ನ ರಾಜ್ಯಪಾಲ ಗ್ರೆಗ್ ಅಬ್ಬಟ್ ಅವರು ಆಗ್ನೇಯ ಟೆಕ್ಸಾಸ್‌ನ 13 ಜಿಲ್ಲೆಗಳಿಗಾಗಿ ತುರ್ತು ಸ್ಥಿತಿಯನ್ನು ಘೋಷಿಸಿದ್ದಾರೆ.

ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು 1,500ಕ್ಕೂ ಅಧಿಕ ಸ್ವಯಂಸೇವಕರು ದಿನದ 24 ಗಂಟೆಯೂ ಶ್ರಮಿಸುತ್ತಿದ್ದಾರೆ ಎಂದು ಹೇಳಿದ ಸ್ವಯಂಸೇವಕರ ನೇತೃತ್ವ ವಹಿಸಿರುವ ಅಚಲೇಶ ಕುಮಾರ ಅವರು,ರವಿವಾರದ ಕಾರ್ಯಕ್ರಮ ಅದ್ಭುತವಾಗಿರಲಿದೆ ಎಂದು ತಿಳಿಸಿದರು.

ಈ ಬೃಹತ್ ಕಾರ್ಯಕ್ರಮವು ಹ್ಯೂಸ್ಟನ್ ಪ್ರದೇಶ ಮತ್ತು ಅಮೆರಿಕದಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ಬೆಳೆಯುತ್ತಿರುವ ಸಂಖ್ಯೆ,ಶಕ್ತಿ ಮತ್ತು ಸಂಕೀರ್ಣತೆಗಳನ್ನು ಪ್ರತಿಫಲಿಸಲಿದೆ ಎಂದರು.

ಅಧ್ಯಕ್ಷ ಟ್ರಂಪ್ ಅವರು ಹಲವಾರು ಹಿರಿಯ ಸರಕಾರಿ ಅಧಿಕಾರಿಗಳು,ಕಾಂಗ್ರೆಸ್ ಸದಸ್ಯರು ಮತ್ತು ಮೇಯರ್‌ಗಳೊಂದಿಗೆ ‘ಹೌಡಿ ಮೋದಿ ’ಕಾರ್ಯಕ್ರಮದಲ್ಲಿ ಮೋದಿಯವರಿಗೆ ಜೊತೆ ನೀಡಲಿದ್ದಾರೆ.

‘‘ ಇದೊಂದು ಕೌಟುಂಬಿಕ ಸಮಾರಂಭವಾಗಲಿದೆ. ‘ಇಲ್ಲಿಯ ನಮ್ಮ ಸಮುದಾಯದತ್ತ ನೋಡಿ. ನಾವು ಯಶಸ್ವಿಯಾಗಿದ್ದೇವೆ. ನಾವು ದೃಢ ಮನೋಬಲದವರಾಗಿದ್ದೇವೆ. ಹ್ಯೂಸ್ಟನ್‌ಗಾಗಿ ನಾವು ಒಳ್ಳೆಯ ಕಾರ್ಯಗಳನ್ನು ಮಾಡಿದ್ದೇವೆ  ಎಂದು ಹೇಳಲು ನಾವು ಬಯಸಿದ್ದೇವೆ. ಇದೆಲ್ಲವನ್ನೂ ಮೋದಿ ಅವರು ತಿಳಿದುಕೊಳ್ಳಬೇಕು ಎಂದು ನಾವು ಬಯಸಿದ್ದೇವೆ ’’ ಎಂದು ಕಾರ್ಯಕ್ರಮದ ಸಂಘಟಕರು ಹೇಳಿದ್ದಾರೆ.

 2018,ನವಂಬರ್‌ನಲ್ಲಿ ಭಾರತಕ್ಕೆ ಹ್ಯೂಸ್ಟನ್ ಮೇಯರ್ ಸಿಲ್ವೆಸ್ಟರ್ ಟರ್ನರ್ ಅವರ ಭೇಟಿ ದ್ವಿಪಕ್ಷೀಯ ವ್ಯಾಪಾರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ ಆಫ್ ಗ್ರೇಟರ್ ಹ್ಯೂಸ್ಟನ್ (ಐಎಸಿಸಿಜಿಎಚ್)ನ ಅಧ್ಯಕ್ಷ ಸ್ವಪನ್ ಧೈರ್ಯವಾನ್ ಅವರು,ಹ್ಯೂಸ್ಟನ್‌ ಗೆ ಮೋದಿ ಭೇಟಿ ಹಾಗೂ ಟ್ರಂಪ್ ಮತ್ತು ಹಿರಿಯ ಸಿಇಒಗಳೊಂದಿಗೆ ಅವರ ಮಾತುಕತೆಯು ತೈಲ ಮತ್ತು ಅನಿಲ,ಆರೋಗ್ಯ ರಕ್ಷಣೆ ಹಾಗೂ ಇನೋವೇಷನ್ ಹ್ಯೂಸ್ಟನ್ ಈ ಮೂರು ಪ್ರಮುಖ ಕ್ಷೇತ್ರಗಳಲ್ಲಿ ಇನ್ನಷ್ಟು ಉದ್ಯಮಾವಕಾಶಗಳಿಗೆ ಹೊಸ ಮಾರ್ಗಗಳನ್ನು ತೆರೆಯಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಟ್ರಂಪ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅಮೆರಿಕ-ಭಾರತ ಬಾಂಧವ್ಯಕ್ಕೆ ಹೆಚ್ಚುತ್ತಿರುವ ಮಹತ್ವದ ಸಂಕೇತವಾಗಿದೆ ಎಂದು ಐಎಸಿಸಿಜಿಎಚ್‌ನ ಸ್ಥಾಪಕ ಕಾರ್ಯದರ್ಶಿ ಹಾಗೂ ಕಾರ್ಯಕಾರಿ ನಿರ್ದೇಶಕ ಜಗದೀಪ ಅಹ್ಲುವಾಲಿಯಾ ಹೇಳಿದರು.

 ಸಮುದಾಯವನ್ನುದ್ದೇಶಿಸಿ ಮಾತನಾಡುವ ಮುನ್ನ ಮೋದಿ ಅವರು ಶಕ್ತಿ ಸಂಬಂಧಿತ ಕ್ಷೇತ್ರಗಳ ಹಿರಿಯ ಉದ್ಯಮಿಗಳೊಂದಿಗೆ ದುಂಡು ಮೇಜಿನ ಸಭೆಯನ್ನು ನಡೆಸಲಿದ್ದಾರೆ. ಹ್ಯೂಸ್ಟನ್‌ಗೆ ತನ್ನ ಅಲ್ಪಾವಧಿಯ ಭೇಟಿಯಲ್ಲಿ ಅಮೆರಿಕದಲ್ಲಿ ನೆಲೆಸಿರುವ ಕಾಶ್ಮೀರಿ ಪಂಡಿತರೊಂದಿಗೆ ಮಾತುಕತೆ ಸೇರಿದಂತೆ ಕೆಲವು ಸಮುದಾಯ ಆಧರಿತ ಸಭೆಗಳಲ್ಲಿ ಭಾಗವಹಿಸಲಿದ್ದಾರೆ.

ತನ್ಮಧ್ಯೆ,ಇಬ್ಬರು ಕಾಶ್ಮೀರಿಗಳ ಅಮೆರಿಕದಲ್ಲಿಯ ಸಂಬಂಧಿಗಳು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಮೋದಿಯವರ ಏಕಪಕ್ಷೀಯ ನಿರ್ಧಾರವು ಹಲವಾರು ಜನರ ಬಂಧನಕ್ಕೆ ಕಾರಣವಾಗಿದೆ ಎಂದು ಆರೋಪಿಸಿ ಗುರುವಾರ ಅವರ ವಿರುದ್ಧ ಫೆಡರಲ್ ನ್ಯಾಯಾಲಯವೊಂದರಲ್ಲಿ ಮೊಕದ್ದಮೆಯನ್ನು ದಾಖಲಿಸಿದ್ದಾರೆ ಎಂದು ಹ್ಯೂಸ್ಟನ್ ಕ್ರಾನಿಕಲ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News