ಚಿನ್ಮಯಾನಂದ ವಿರುದ್ಧ ದಾಖಲಾಗದ ಅತ್ಯಾಚಾರ ಆರೋಪ!: ಸಂತ್ರಸ್ತೆಯ ವಿರುದ್ಧ ಪ್ರಕರಣ ದಾಖಲು

Update: 2019-09-20 17:52 GMT

ಲಕ್ನೊ, ಸೆ.20: ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಮುಖಂಡ ಚಿನ್ಮಯಾನಂದನನ್ನು ಶುಕ್ರವಾರ ಬಂಧಿಸಲಾಗಿದೆ. ಆದರೆ ಅತ್ಯಾಚಾರ ಪ್ರಕರಣ ದಾಖಲಿಸದೆ, ದೈಹಿಕ ಸಂಬಂಧ ಬೆಳೆಸುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಹೊರಿಸಲಾಗಿದೆ.

ಜೊತೆಗೆ, ಸಂತ್ರಸ್ತ ಯುವತಿಯ ವಿರುದ್ಧ ಬ್ಲ್ಯಾಕ್‌ಮೇಲ್ ನಡೆಸಿ ಬಲಾತ್ಕಾರದಿಂದ ಹಣ ವಸೂಲಿ ಮಾಡಿದ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣ ಸಾಬೀತಾದರೆ 7 ವರ್ಷ( ಜೀವಾವಧಿಗೆ ವಿಸ್ತರಿಸಬಹುದು) ಜೈಲುಶಿಕ್ಷೆಯ ಜೊತೆಗೆ ದಂಡ ವಿಧಿಸಲಾಗುತ್ತದೆ. ದೈಹಿಕ ಸಂಬಂಧ ಬೆಳೆಸುವ ಅಧಿಕಾರ ದುರುಪಯೋಗಪಡಿಸಿಕೊಂಡ ಅಪರಾಧಕ್ಕೆ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು. ಚಿನ್ಮಯಾನಂದ ವಿರುದ್ಧ ಹಿಂಬಾಲಿಸಿರುವುದು, ಬೆದರಿಕೆ ಹಾಗೂ ಅಕ್ರಮ ಬಂಧನ ಪ್ರಕರಣವನ್ನೂ ದಾಖಲಿಸಲಾಗಿದೆ.

ಚಿನ್ಮಯಾನಂದ ಹಾಗೂ ಆತನ ಬೆಂಬಲಿಗರು ಮಹಿಳೆಯ ವಿರುದ್ಧ ನೀಡಿದ್ದ ಸುಲಿಗೆ ದೂರಿನ ಹಿನ್ನೆಲೆಯಲ್ಲಿ ಮಹಿಳೆಗೆ ಪರಿಚಯವಿರುವ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೂ ಶಾಮೀಲಾಗಿದ್ದು ಈ ಬಗ್ಗೆ ಹೆಚ್ಚಿನ ಪುರಾವೆ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ಮಹಿಳೆ, ತನಗೆ ಅನ್ಯಾಯವಾಗಿದೆ. ತನ್ನ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಪೊಲೀಸರಿಗೆ ಪೂರ್ಣ ವಿವರ ಒದಗಿಸಿದ್ದರೂ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ. ಚಿನ್ಮಯಾನಂದನನ್ನು ಬಂಧಿಸಿರುವ ಹಿಂದೆ ಯಾವುದೋ ಯೋಜನೆ ಇರಬೇಕು ಎಂದು ಹೇಳಿದ್ದಾರೆ. ಮಾಜಿ ಬಿಜೆಪಿ ಸಂಸದ ಚಿನ್ಮಯಾನಂದನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿಲ್ಲ ಎಂದು ಉ.ಪ್ರದೇಶದ ವಿಶೇಷ ತನಿಖಾ ದಳದ ಮುಖ್ಯಸ್ಥ ನವೀನ್ ಅರೋರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News